
ಮಂಡ್ಯ: ಪರಿಚಯ ಪ್ರಕಾಶನವು ಪ್ರತಿ ತಿಂಗಳ 2ನೇ ಮಂಗಳವಾರ ನಡೆಸಿಕೊಂಡು ಬರುತ್ತಿರುವ ‘ಓದಿನ ಹಾದಿ‘ಯಲ್ಲಿ ಈ ಬಾರಿ ನ.11ರಂದು ಮಂಗಳವಾರ ‘ಒಂದಾನೊಂದು ಕಾಲದಲ್ಲಿ ಶಂಕರ್ ನಾಗ್‘ ಕಾರ್ಯಕ್ರಮ ಆಯೋಜಿಸಿದೆ.
ಕನ್ನಡ ಚಿತ್ರರಂಗದ ಪ್ರತಿಭಾವಂತ ನಟ ದಿ. ಶಂಕರ್‌ನಾಗ್ ಅವರ ಜನ್ಮದಿನದ ನೆನಪಿನಲ್ಲಿ ಸಂಘಟಿಸಿರುವ ಈ ಕಾರ್ಯಕ್ರಮವು ಸುಭಾಷ್ ನಗರದ ಶಿವನಂಜಪ್ಪ ಪಾರ್ಕ್ ನಲ್ಲಿ ಸಂಜೆ 6ಕ್ಕೆ ಆರಂಭಗೊಳ್ಳಲಿದೆ ಎಂದು ಪರಿಚಯ ಪ್ರಕಾಶನದ ಸಂಸ್ಥಾಪಕ ಶಿವಕುಮಾರ್ ಆರಾಧ್ಯ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ನಟ ಅನಂತ್‌ನಾಗ್ ರಚನೆಯ ‘ನನ್ನ ತಮ್ಮ ಶಂಕರ‘ ಮತ್ತು ಆರ್.ಕೆ.ನಾರಾಯಣ ಅವರ ‘ಮಾಲ್ಗುಡಿ ಡೇಸ್‘ ಪುಸ್ತಕದ ಆಯ್ದ ಭಾಗಗಳನ್ನು ಎಲ್ಲರೊಳಗೊಂದಾಗು ಮಂಕುತಿಮ್ಮ ಟ್ರಸ್ಟ್‌ನ ಸಂಸ್ಥಾಪಕ ಎಂ.ವಿನಯ್‌ಕುಮಾರ್ ಮತ್ತು ಸಿದ್ದು ಆರ್.ಜಿ.ಹಳ್ಳಿ ಓದಲಿದ್ದಾರೆ.
ಇದೇ ವೇಳೆ ಶಂಕರ್‌ನಾಗ್ ಅವರ ಪ್ರಸಿದ್ಧ ಚಲನಚಿತ್ರ ಗೀತೆಗಳನ್ನು ಪ್ರತಿಭಾಂಜಲಿ ಸಂಸ್ಥೆಯ ಡೇವಿಡ್ ಮತ್ತು ಸಂಗಡಿಗರು ಪ್ರಸ್ತುತಪಡಿಸುವರು. ಕೊಳಲು, ಸ್ಯಾಕ್ರೋಫೋನ್ ವಾದಕರು ಸಂಗೀತ ನಮನ ಸಲ್ಲಿಸಿದ್ದಾರೆ. ಶಂಕರ್‌ನಾಗ್ ಅವರ ಸಮಾಜಮುಖಿ ಚಿಂತನೆಗಳನ್ನು ಈ ತಲೆಮಾರಿಗೆ ಪಸರಿಸುವ ನಿಟ್ಟಿನಲ್ಲಿ ಈ ಕಾರ್ಯಕ್ರಮ ಆಯೋಜಿಸಲಾಗಿದೆ. ಸಾರ್ವಜನಿಕರಿಗೆ ಮುಕ್ತ ಪ್ರವೇಶವಿದ್ದು, ಶಂಕರ್‌ನಾಗ್ ಅವರ ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಲು ಕೋರಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.