ADVERTISEMENT

ಮದ್ದೂರು | ಚಿತ್ರದುರ್ಗದತ್ತ ಮುಖ ಮಾಡಿದ ಕುರಿ ಮಂದೆ

ಕುರಿಗಾಹಿಗಳನ್ನು ವಾಪಸ್‌ ಕಳುಹಿಸಲು ಗ್ರಾಮಸ್ಥರ ನಿರ್ಧಾರ

ಎಂ.ಆರ್.ಅಶೋಕ್ ಕುಮಾರ್
Published 31 ಮಾರ್ಚ್ 2020, 6:54 IST
Last Updated 31 ಮಾರ್ಚ್ 2020, 6:54 IST
ಮದ್ದೂರು ತಾಲ್ಲೂಕಿನಿಂದ ಮೈಸೂರು–ಬೆಂಗಳೂರು ಹೆದ್ದಾರಿಯ ಮುಖಾಂತರ ತುಮಕೂರು ರಸ್ತೆಯಲ್ಲಿದ ಸಾಗಿದ ಕುರಿ ಹಿಂಡು
ಮದ್ದೂರು ತಾಲ್ಲೂಕಿನಿಂದ ಮೈಸೂರು–ಬೆಂಗಳೂರು ಹೆದ್ದಾರಿಯ ಮುಖಾಂತರ ತುಮಕೂರು ರಸ್ತೆಯಲ್ಲಿದ ಸಾಗಿದ ಕುರಿ ಹಿಂಡು   

ಮದ್ದೂರು: ತಾಲ್ಲೂಕಿನ ಕೆಲವು ಗ್ರಾಮಗಳ ಜನರು ತಮ್ಮ ಊರುಗಳಲ್ಲಿ ಹಲವಾರು ತಿಂಗಳಿಂದ ಜೀವನ ಸಾಗಿಸುತ್ತಿದ್ದ ಕುರಿಗಾಹಿಗಳನ್ನು ತಮ್ಮ ಹಳ್ಳಿಗಳಿಗೆ ತೆರಳಲು ಸೂಚಿಸಿದ್ದು, ಕೊರೊನಾ ಬಿಸಿ ಕುರಿ ಮಂದೆಗೂ ತಟ್ಟಿದೆ.

ಕೊರೊನಾ ಮಹಾಮಾರಿ ದೇಶಕ್ಕೆ ಬಂದಾಗಿನಿಂದ ಜನರು ಇನ್ನಿಲ್ಲದ ಕಷ್ಟ ಪಡುವಂತಾಗಿದೆ. ಇದು ಈಗ ಕುರಿಗಾಹಿಗಳಿಗೂ ತಟ್ಟಿದೆ. ಚಿತ್ರದುರ್ಗ ಜಿಲ್ಲೆಯ ವಿವಿಧ ಭಾಗಗಳಿಂದ ಕುರಿಗಾಹಿಗಳು ಕುರಿಗಳ ಹಿಂಡುಗಳ ಜೊತೆಗೆ ಹಲವು ತಿಂಗಳಿಂದ ಇಲ್ಲಿಗೆ ಬಂದಿದ್ದು ತಾಲ್ಲೂಕಿನ ವಳಗೆರೆಹಳ್ಳಿ, ದೇಶಹಳ್ಳಿ ಕಡೆ ಇದ್ದರು. ಅವರಿಗೆ ಗ್ರಾಮದ ಕೆಲವು ರೈತರು ತಮ್ಮ ಖಾಲಿ ಜಮೀನುಗಳಲ್ಲಿ ರಾತ್ರಿ ತಂಗಲು ಹಣ, ಊಟ ನೀಡಿ ಇರಿಸಿಕೊಳ್ಳುತ್ತಿದ್ದರು. ಹೀಗೆ ಮಾಡುವುದರಿಂದ ಜಮೀನಿನ ಮಣ್ಣಿನ ಫಲವತ್ತತೆ ಹೆಚ್ಚಾಗಿ ಬೆಳೆಗಳು ಸಮೃದ್ಧವಾಗಿ ಬರುತ್ತವೆ. ಈ ಪದ್ಧತಿ ಅನಾದಿ ಕಾಲದಿಂದಲೂ ಬಂದಿದೆ.

ಕುರಿಗಾಹಿಗಳನ್ನು ತಮ್ಮ ಜಮೀನುಗಳಲ್ಲಿ ಇರಿಸಲು ಗ್ರಾಮಸ್ಥರಲ್ಲಿಯೇ ಪೈಪೋಟಿ ನಡೆಯುತ್ತಿತ್ತು. ಇತ್ತ ಕುರಿಗಳ ಸಂಖ್ಯೆಯ ಆಧಾರದ ಮೇಲೆ ಕುರಿಗಾಹಿಗಳು 15 ದಿನಕ್ಕೆ ಇಂತಿಷ್ಟು ಹಣ ಎಂದು ನಿಗದಿ ಮಾಡಿ ರೈತರ ಜಮೀನಿನಲ್ಲಿ ರಾತ್ರಿ ಠಿಕಾಣಿ ಹಾಕುತ್ತಿದ್ದರು. ಬೆಳಿಗ್ಗೆಯಾದರೆ ಹುಲ್ಲು ಇರುವ ಹೊಲಗಳಲ್ಲಿ ಮೇಯಿಸಲು ತೆರಳುತ್ತಿದ್ದ ಕುರಿಗಾಹಿಗಳು ರಾತ್ರಿಯಾಗುತ್ತಿದ್ದಂತೆಯೇ ಮತ್ತೆ ರೈತರ ಜಮೀನಿಗೆ ತಮ್ಮ ಕುಟುಂಬದ ಸಮೇತ ಬರುತ್ತಿದ್ದರು. ಆದರೆ, ಕೊರೊನಾ ಸೋಂಕು ಹರಡುವ ಭೀತಿಯಿಂದ ಬೇರೆ ಜಿಲ್ಲೆಗಳಿಂದ ಬಂದವರು ಎಂಬ ಕಾರಣಕ್ಕೆ ಅವರನ್ನು ತಮ್ಮ ಗ್ರಾಮಗಳಿಂದ ತೆರಳಲು ಕೆಲ ಮುಖಂಡರು ಸೂಚಿಸಿದ್ದಾರೆ ಎನ್ನಲಾಗಿದೆ.

ADVERTISEMENT

ತಲಾ ಸುಮಾರು 500 ಕುರಿಗಳಿರುವ ಎರಡು ಗುಂಪುಗಳು ಗ್ರಾಮಸ್ಥರ ಈ ತೀರ್ಮಾನದಿಂದ ಮದ್ದೂರು ಮಾರ್ಗವಾಗಿ ಮೈಸೂರು– ಬೆಂಗಳೂರು ಹೆದ್ದಾರಿಯ ಮೂಲಕ ತುಮಕೂರು ರಸ್ತೆಯ ಮೂಲಕ ಚಿತ್ರದುರ್ಗದತ್ತ ಸುಮಾರು 200 ಕಿ.ಮೀ. ದೂರ ಕ್ರಮಿಸುವ ತಮ್ಮೂರ ದಾರಿಯತ್ತ ಸಾಗಿದವು.

ಕುಹಿಗಾಹಿಗಳನ್ನು ಮಾತನಾಡಿಸಿದಾಗ ‘ಕೊರೊನಾದಿಂದ ನಮ್ಮ ಬದುಕಿಗೂ ಹೀಗಾಯಿತು’ ಎಂದು ಚಿತ್ರದುರ್ಗ ಜಿಲ್ಲೆಯ ಕುರಿಗಾಹಿ ರಮೇಶ್ ನೊಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.