ADVERTISEMENT

ಮದ್ದೂರು | ನಿರ್ವಹಣೆ ಕೊರತೆ; ಸತ್ಯಾಗ್ರಹ ಸೌಧಕ್ಕೆ ಬೀಗ

ಮದ್ದೂರು ತಾಲ್ಲೂಕಿನ ಶಿವಪುರದಲ್ಲಿ ತುಕ್ಕು ಹಿಡಿದ ಸಂಗೀತ ಕಾರಂಜಿ; ಸ್ಮಾರಕ ವೀಕ್ಷಿಸಲು ಬರುವ ಪ್ರವಾಸಿಗರಿಗೆ ನಿರಾಸೆ

ಎಂ.ಆರ್.ಅಶೋಕ್ ಕುಮಾರ್
Published 24 ನವೆಂಬರ್ 2025, 2:14 IST
Last Updated 24 ನವೆಂಬರ್ 2025, 2:14 IST
<div class="paragraphs"><p>ಮದ್ದೂರಿನಲ್ಲಿರುವ ಧ್ವಜ ಸತ್ಯಾಗ್ರಹ ಸೌಧ</p></div>

ಮದ್ದೂರಿನಲ್ಲಿರುವ ಧ್ವಜ ಸತ್ಯಾಗ್ರಹ ಸೌಧ

   

ಮದ್ದೂರು: ಇಲ್ಲಿಯ ‘ಶಿವಪುರ ಸತ್ಯಾಗ್ರಹ ಸೌಧ’ವು 1938ರ ಐತಿಹಾಸಿಕ ಧ್ವಜ ಸತ್ಯಾಗ್ರಹದ ನೆನಪಿಗಾಗಿ ನಿರ್ಮಿಸಲಾದ ಸ್ಮಾರಕ. ಈ ಸ್ಮಾರಕಕ್ಕೆ ಹಲವಾರು ವರ್ಷಗಳಿಂದ ಶಾಶ್ವತವಾಗಿ ಬಾಗಿಲು ಹಾಕಿರುವ ಕಾರಣ ಹೊರಜಿಲ್ಲೆಗಳಿಂದ ಬರುವ ಪ್ರವಾಸಿಗರು ಮತ್ತು ವಿದ್ಯಾರ್ಥಿಗಳಿಗೆ ನಿರಾಸೆಯಾಗುತ್ತಿದೆ. 

ಈ ಹಿಂದೆ ಸತ್ಯಾಗ್ರಹ ಸೌಧಕ್ಕಿದ್ದ ಕಾವಲುಗಾರ (ವಾಚಮನ್) ಸುಮಾರು 9 ವರ್ಷಗಳ ಹಿಂದೆ ನಿವೃತ್ತಿಯಾದ ನಂತರ ಆ ಸ್ಥಳಕ್ಕೆ ಮತ್ತೆ ಯಾರನ್ನೂ ನಿಯೋಜಿಸುಲ್ಲ. ಇರುವುದರಿಂದ ಸೌಧದ ಸ್ವಚ್ಛತೆ ಸೇರಿದಂತೆ ದಿನನಿತ್ಯ ಬಾಗಿಲು ತೆರೆಯುವುದಕ್ಕೆ ಯಾರೂ ಇಲ್ಲದ ಕಾರಣ ಸ್ಮಾರಕದ ಬಾಗಿಲಿಗೆ ಬೀಗ ಹಾಕಲಾಗಿದೆ.

ADVERTISEMENT

ಈ ಸೌಧವು ಸ್ವಾತಂತ್ರ್ಯ ಹೋರಾಟದ ಪ್ರಮುಖ ಅಧ್ಯಾಯಗಳನ್ನು ನೆನಪಿಸುತ್ತದೆ, ಆದರೆ ಪ್ರಸ್ತುತ ನಿರ್ಲಕ್ಷ್ಯಕ್ಕೆ ಒಳಗಾಗಿದೆ. ಸೌಧವು ಸ್ವಾತಂತ್ರ್ಯ ಹೋರಾಟಗಾರರ ಭಾವಚಿತ್ರಗಳನ್ನು ಒಳಗೊಂಡಿದ್ದರೂ, ಪ್ರಸ್ತುತ ಸೂಕ್ತ ನಿರ್ವಹಣೆಯ ಕೊರತೆಯಿಂದಾಗಿ ಪಾಳುಬಿದ್ದಿದೆ. ಕಟ್ಟಡದ ಒಳಗೆ ದೂಳು ತುಂಬಿದ್ದು, ಸ್ವಚ್ಛ ಮಾಡುವವರೂ ಇಲ್ಲದಂತಾಗಿದೆ. 

ತುಕ್ಕು ಹಿಡಿದ ಸಂಗೀತ ಕಾರಂಜಿ: 

ಸತ್ಯಾಗ್ರಹ ಸೌಧದ ಎಡಭಾಗದಲ್ಲಿರುವ ಸಂಗೀತ ಕಾರಂಜಿ ಅನೇಕ ವರ್ಷಗಳಿಂದ ಸ್ಥಗಿತಗೊಂಡಿದೆ. ಸಂಗೀತ ಕಾರಂಜಿಗೆ ಹಾಕಲಾಗಿದ್ದ ಪೈಪುಗಳು ತುಕ್ಕು ಹಿಡಿಯುತ್ತಿವೆ. ಸ್ಥಳೀಯರಿಗೂ ಕಾರಂಜಿಯ ನೆನಪು ಮಾಸಿ ಹೋಗಿದೆ. 

‘ರಾತ್ರಿ ವೇಳೆ ಕಾವಲುಗಾರನೂ ಇಲ್ಲದ ಕಾರಣ ಅನೈತಿಕ ಮತ್ತು ಅಕ್ರಮ ಚಟುವಟಿಕೆಗಳಿಗೆ ಆಶ್ರಯ ತಾಣವಾಗಿದೆ. ಜಿಲ್ಲೆಯ ಹೆಮ್ಮೆಯ ಸ್ವಾತಂತ್ರ್ಯ ಹೋರಾಟದ ಕುರುಹಾದ ಸ್ಮಾರಕ ಧ್ವಜ ಸತ್ಯಾಗ್ರಹ ಸೌಧಕ್ಕೆ ಅಭಿವೃದ್ಧಿಯ ಕಾಯಕಲ್ಪದ ಅವಶ್ಯವಿದೆ’ ಎನ್ನುತ್ತಾರೆ ಮದ್ದೂರಿನ ನಾಗರಿಕರು. 

ಇತಿಹಾಸ: 1938ರಲ್ಲಿ, ಬ್ರಿಟಿಷ್ ಸರ್ಕಾರದ ನಿರ್ಬಂಧಗಳ ನಡುವೆಯೂ, ಎಚ್‌.ಕೆ. ವೀರಣ್ಣಗೌಡ, ಕೊಪ್ಪದ ಜೋಗಿಗೌಡ, ಸಾಹುಕಾರ ಚೆನ್ನಯ್ಯ ಮುಂತಾದವರ ನೇತೃತ್ವದಲ್ಲಿ ಮದ್ದೂರಿನ ಶಿವಪುರದಲ್ಲಿ ತ್ರಿವರ್ಣ ಧ್ವಜ ಹಾರಿಸುವ ಮೂಲಕ ಧ್ವಜ ಸತ್ಯಾಗ್ರಹ ನಡೆಯಿತು. ಇದು ರಾಷ್ಟ್ರವ್ಯಾಪಿ ಮೆಚ್ಚುಗೆಗೆ ಪಾತ್ರವಾಗಿತ್ತು. 

ಮುಖ್ಯಮಂತ್ರಿಯಾಗಿದ್ದ ದೇವರಾಜ ಅರಸು ಅವಧಿಯಲ್ಲಿ ಶಿವಪುರದಲ್ಲಿ ಸತ್ಯಾಗ್ರಹ ಸೌಧವನ್ನು ನಿರ್ಮಿಸಲಾಯಿತು. ಇದರ ಉದ್ಘಾಟನೆಯನ್ನು 1979ರ ಸೆಪ್ಟೆಂಬರ್ 26ರಂದು ಅಂದಿನ ಮುಖ್ಯಮಂತ್ರಿ ಕೆಂಗಲ್ ಹನುಮಂತಯ್ಯ ನೆರವೇರಿಸಿದ್ದರು. ಸ್ಮಾರಕದ ಒಳಗಡೆ ಇರುವ ವೃತ್ತಾಕಾರದ ಮೊದಲ ಮಹಡಿಯಲ್ಲಿ ಸ್ವಾತಂತ್ರ್ಯ ಹೋರಾಟಗಳ ಬಗೆಗಿನ ಸಾವಿರಾರು ಪುಸ್ತಕಗಳನ್ನು ಒಳಗೊಂಡ ಗ್ರಂಥಾಲಯ ಸ್ಥಾಪಿಸುವುದು ಹಾಗೂ ಪ್ರತಿನಿತ್ಯ ಸ್ಮಾರಕಕ್ಕೆ ಬರುವ ಪ್ರವಾಸಿಗರಿಗೆ ಅನುಕೂಲವಾಗಬೇಕು ಎಂಬುದು ಕೆಂಗಲ್‌ ಅವರ ಹೆಬ್ಬಯಕೆಯಾಗಿತ್ತು.

ವಿಪರ್ಯಾಸವೆಂದರೆ, ಆನಂತರದ ದಿನಗಳಲ್ಲಿ ಯಾವ ಗ್ರಂಥಾಲಯವೂ ಆಗಲಿಲ್ಲ. ಹಲವಾರು ವರ್ಷಗಳಿಂದ ಸ್ಮಾರಕದ ಬಾಗಿಲಿಗೆ ನಿತ್ಯವೂ ಬೀಗ ಜಡಿದಿರುವುದರಿಂದ ಸ್ಮಾರಕದ ಒಳಗಡೆ ಇರುವ ಸ್ವಾತಂತ್ರ್ಯ ಹೋರಾಟದ ಬಗ್ಗೆ ಇರುವ ಚಿತ್ರಪಟಗಳನ್ನೂ ಸಾರ್ವ ಜನಿಕರಿಗೆ ನೋಡಲಾಗದ ಪರಿಸ್ಥಿತಿ ಇರುವುದರಿಂದ ಪ್ರವಾಸಿಗರೂ ಇತ್ತ ಮುಖ ಮಾಡುತ್ತಿಲ್ಲ.

₹2 ಕೋಟಿ ಬಿಡುಗಡೆ: ಒಂದೂವರೆ ವರ್ಷದ ಹಿಂದೆ ಸತ್ಯಾಗ್ರಹ ಸೌಧದ ಅವ್ಯವಸ್ಥೆ ಹಾಗೂ ಅಭಿವೃದ್ಧಿ ಕೊರತೆಯ ಬಗ್ಗೆ ‘ಪ್ರಜಾವಾಣಿ’ಯಲ್ಲಿ ವಿಶೇಷ ವರದಿ ಪ್ರಕಟವಾಗಿತ್ತು. ಇದಕ್ಕೆ ಸ್ಪಂದಿಸಿದ ವಿಧಾನ ಪರಿಷತ್‌ ಸದಸ್ಯ ದಿನೇಶ್‌ ಗೂಳಿಗೌಡ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಗಮನಕ್ಕೆ ತಂದು, ಸತ್ಯಾಗ್ರಹ ಸೌಧದ ಅಭಿವೃದ್ಧಿಗೆ ₹2 ಕೋಟಿ ಮಂಜೂರು ಮಾಡಿಸಿದ್ದರು. ಆದರೆ, ಇದುವರೆಗೂ ಯಾವುದೇ ಅಭಿವೃದ್ಧಿ ಕಾಮಗಾರಿಗಳು ಆರಂಭವಾಗಿಲ್ಲ ದಿರುವುದು ಮದ್ದೂರಿನ ಜನರಲ್ಲಿ ಬೇಸರ ತರಿಸಿದೆ. 

ತುಕ್ಕು ಹಿಡಿಯುತ್ತಿರುವ ಸಂಗೀತ ಕಾರಂಜಿ

ಅಭಿವೃದ್ಧಿಗೆ ನಿರಾಸಕ್ತಿ

ಎಸ್.ಎಂ.ಕೃಷ್ಣ ಅವರು ಮುಖ್ಯಮಂತ್ರಿಯಾಗಿದ್ದಾಗ ಮದ್ದೂರಿನ ಧ್ವಜ ಸತ್ಯಾಗ್ರಹ ಸೌಧದ ಅಭಿವೃದ್ಧಿಗೆ ಕ್ರಮ ಕೈಗೊಂಡಿದ್ದು ಬಿಟ್ಟರೆ ಹಲವಾರು ವರ್ಷಗಳಿಂದ ಮತ್ಯಾರೂ ಅಭಿವೃದ್ಧಿಗೆ ಆಸಕ್ತಿ ವಹಿಸಿಲ್ಲದಿರುವುದು ಬೇಸರ ತರಿಸಿದೆ
ಕೆ.ಟಿ. ಚಂದು, ಸ್ವಾತಂತ್ರ್ಯ ಹೋರಾಟಗಾರ, ಮದ್ದೂರು

ಸೌಧಕ್ಕೆ ಬೀಗ; ಪ್ರವಾಸಿಗರಿಗೆ ನಿರಾಸೆ

ಮದ್ದೂರಿನ ಧ್ವಜ ಸತ್ಯಾಗ್ರಹ ಸೌಧವು ಜಿಲ್ಲೆಯ ಹೆಮ್ಮೆಯ ಸ್ಮಾರಕವಾಗಿದ್ದು, ಅಧಿಕಾರಿಗಳ ಅಸಡ್ಡೆಯಿಂದಾಗಿ ಸಾರ್ವಜನಿಕರಿಗಷ್ಟೇ ಅಲ್ಲದೇ ಶೈಕ್ಷಣಿಕ ಪ್ರವಾಸಕ್ಕಾಗಿ ರಾಜ್ಯದ ಹಲವೆಡೆಗಳಿಂದ ಬರುವ ವಿದ್ಯಾರ್ಥಿಗಳೂ ಸೌಧದ ಬಾಗಿಲಿಗೆ ಬೀಗ ಜಡಿದಿರುವುದರಿಂದ ಬೇಸರದಿಂದ ಹೋಗುವ ಪರಿಸ್ಥಿತಿ ನಿರ್ಮಾಣವಾಗಿದೆ.
ಮ.ನ. ಪ್ರಸನ್ನಕುಮಾರ್, ಪ್ರಗತಿಪರ ಸಂಘಟನೆಗಳ ಒಕ್ಕೂಟದ ಸದಸ್ಯ, ಮದ್ದೂರು

ಅಧಿಕಾರಿಗಳ ಗಮನಕ್ಕೆ ತರುವೆ

ಮದ್ದೂರಿನ ಧ್ವಜ ಸತ್ಯಾಗ್ರಹ ಸೌಧಕ್ಕೆ ಸಂಬಂಧಿಸಿದ ಸಮಸ್ಯೆಗಳು ಗಮನಕ್ಕೆ ಬಂದಿದೆ. ಸಮಸ್ಯೆ ಪರಿಹರಿಸಲು ಮತ್ತು ಅಭಿವೃದ್ಧಿ ಪಡಿಸುವ ನಿಟ್ಟಿನಲ್ಲಿ ಸಂಬಂಧಪಟ್ಟ ಉನ್ನತ ಅಧಿಕಾರಿಗಳ ಗಮನಕ್ಕೆ ತರಲಾಗುವುದು
ಪರಶುರಾಮ್ ಸತ್ತಿಗೇರಿ, ತಹಶೀಲ್ದಾರ್, ಮದ್ದೂರು

20 ವರ್ಷ ಕಳೆದರೂ ಉದ್ಘಾಟನೆ ಕಾಣದ ಅನೆಕ್ಸ್ ಕಟ್ಟಡ

ಉದ್ಘಾಟನೆ ಕಾಣದ ಅನೆಕ್ಸ್‌ ಕಟ್ಟಡ

ಎಸ್.ಎಂ.ಕೃಷ್ಣ ಮುಖ್ಯ ಮಂತ್ರಿಯಾಗಿದ್ದ ಸಂಧರ್ಭದಲ್ಲಿ ತವರು ಕ್ಷೇತ್ರದಲ್ಲಿದ್ದ ಧ್ವಜ ಸತ್ಯಾಗ್ರಹ ಸೌಧದ ಅಭಿವೃದ್ಧಿಗೆ ಶ್ರಮಿಸಿದ್ದರು. ಸೌಧದ ಬಲಭಾಗಧಲ್ಲಿ ಅನೆಕ್ಸ್ ಕಟ್ಟಡವನ್ನು ನಿರ್ಮಾಣ ಮಾಡಿದ್ದರು.  ಶಿವಪುರದ ಸ್ವಾತಂತ್ರ್ಯ ಹೋರಾಟ ಸೇರಿದಂತೆ ರಾಜ್ಯ, ದೇಶದಾದ್ಯಂತ ನಡೆದಿದ್ದ ಸ್ವಾತಂತ್ರ್ಯ ಹೋರಾಟಗಳ ಮಾಹಿತಿ ಹಾಗೂ ಮಹಾತ್ಮ ಗಾಂಧೀಜಿ ಅವರ ಬಗೆಗಿನ ಸಾಕ್ಷ್ಯಚಿತ್ರಗಳ ಪ್ರದರ್ಶಿಸಲು ಅನೆಕ್ಸ್‌ ಕಟ್ಟಡವನ್ನು ನಿರ್ಮಿಸಲಾಗಿತ್ತು. ಇದುವರೆಗೂ ಈ ಕಟ್ಟಡಕ್ಕೆ ಉದ್ಘಾಟನೆಯ ಭಾಗ್ಯವೇ ಸಿಕ್ಕಿಲ್ಲ. ಸೌಧದ ಕಾರ್ಯನಿರ್ವಹಣೆಗಾಗಿ ಸತ್ಯಾಗ್ರಹ ಸೌಧ ಉಸ್ತುವಾರಿ ಸಮಿತಿಯನ್ನೂ ಹಿರಿಯ ಸ್ವಾತಂತ್ರ್ಯ ಹೋರಾಟಗಾರರಾದ ಕೆ.ಟಿ. ಚಂದು, ಮಾಜಿ ಪುರಸಭಾಧ್ಯಕ್ಷ ಶ್ರೀನಿವಾಸ ಮೂರ್ತಿ ಸೇರಿದಂತೆ ಇತರರನ್ನು ಒಳಗೊಂಡ ಉಸ್ತುವಾರಿ ಸಮಿತಿಯನ್ನೂ ರಚಿಸಲಾಗಿತ್ತು. ಆ ಸಮಿತಿಯೂ 2016ರಿಂದ ಕಾರಣಾಂತರಗಳಿಂದ ನಿಷ್ಕ್ರಿಯವಾಗಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.