ನಾಗಮಂಗಲ: ತಾಲ್ಲೂಕಿಗೆ ₹35.75 ಕೋಟಿ ವೆಚ್ಚದ ನೂತನ ಶ್ರಮಿಕ ವಸತಿ ಶಾಲೆ ಮಂಜೂರಾಗಿದ್ದು, ವರ್ಷದೊಳಗೆ ಗುಣಮಟ್ಟದ ಕಾಮಗಾರಿ ಪೂರ್ಣಗೊಳಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ಹೇಳಿದ್ದಾರೆ.
ತಾಲ್ಲೂಕಿನ ಬೀರೇಶ್ವರಪುರ ಗ್ರಾಮದಲ್ಲಿ ಕಟ್ಟಡ ನಿರ್ಮಾಣವಾಗಲಿದ್ದು, ₹35.75 ಕೋಟಿಗಳನ್ನು ಮಂಜೂರು ಮಾಡಲಾಗಿದೆ. ಇದರಲ್ಲಿ ₹31 ಕೋಟಿ ವೆಚ್ಚದಲ್ಲಿ ಕಟ್ಟಡ, ₹1 ಕೋಟಿ ವೆಚ್ಚದಲ್ಲಿ ಕಾಂಪೌಂಡ್ ನಿರ್ಮಾಣ, ₹3 ಕೋಟಿ ವೆಚ್ಚದಲ್ಲಿ ಪೀಠೋಪಕರಣ, ₹75 ಲಕ್ಷ ವೆಚ್ಚದಲ್ಲಿ ಲ್ಯಾಬ್ ಉಪಕರಣಗಳ ಪೂರೈಕೆ ವ್ಯವಸ್ಥೆ ಮಾಡಲಾಗುವುದು ಎಂದಿದ್ದಾರೆ.
ಕಟ್ಟಡ ಕಾರ್ಮಿಕರ ಮಕ್ಕಳ ವಿದ್ಯಾಭ್ಯಾಸಕ್ಕೆ ಪ್ರೋತ್ಸಾಹ ನೀಡಲು ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯಿಂದ ರಾಜ್ಯಾದ್ಯಂತ 31 ಜಿಲ್ಲೆಗಳಲ್ಲಿ ₹1125.25 ಕೋಟಿ ವೆಚ್ಚದಲ್ಲಿ ವಸತಿ ಶಾಲೆಗಳು ಪ್ರಾರಾಂಭವಾಗಲಿವೆ. 6ನೇ ತರಗತಿಯಿಂದ 12ನೇ ತರಗತಿವರೆಗೆ ವಸತಿ ಶಾಲೆ ನಿರ್ಮಿಸಲು ರಾಜ್ಯ ಸರ್ಕಾರ ಈಗಾಗಲೇ ಆಡಳಿತಾತ್ಮಕ ಅನುಮೋದನೆ ನೀಡಿದೆ ಎಂದು ತಿಳಿಸಿದ್ದಾರೆ.
ಶಾಲೆಯಲ್ಲಿ ಪ್ರತಿ ತರಗತಿಗೆ ಒಂದರಂತೆ ಏಳು ತರಗತಿ ಕೊಠಡಿಗಳು, 5 ಪ್ರಯೋಗಾಲಯಗಳು, ಗ್ರಂಥಾಲಯ, ಬಹುಮಹಡಿ ಚಟುವಟಿಕೆ ಕೊಠಡಿ ಮತ್ತು ಕ್ರೀಡಾ ಸಾಮಗ್ರಿಗಳ ಕೊಠಡಿ, ಕಚೇರಿ ಕೊಠಡಿ, ಸಿಬ್ಬಂದಿ ಕೊಠಡಿ ಸೇರಿದಂತೆ ಹಲವು ಕೊಠಡಿ ನಿರ್ಮಿಸಲಾಗುವುದು. ಬಾಲಕ ಮತ್ತು ಬಾಲಕಿಯರ ವಸತಿ ನಿಲಯಗಳು, ಭೋಜನಾಲಯ ಮತ್ತು ಅಡುಗೆ ಮನೆ, ಶಿಕ್ಷಕರಿಗೆ ಪ್ರತ್ಯೇಕ ವಸತಿ ಗೃಹಗಳ ನಿರ್ಮಾಣ, ಪ್ರಯೋಗಾಲಯ ಉಪಕರಣಗಳು, ಪೀಠೋಪಕರಣಗಳ ಸಮೇತ ಸಂಪೂರ್ಣ ಮೂಲ ಸೌಕರ್ಯ ಒದಗಿಸಲಾಗುವುದು. ನಾಗಮಂಗಲ ಕ್ಷೇತ್ರದ ಅಭಿವೃದ್ಧಿಗೆ ಸರ್ಕಾರ ಆದ್ಯತೆ ನೀಡಿದ್ದು, ಎಲ್ಲಾ ವಲಯದಲ್ಲೂ ಸರ್ವತೋಮುಖ ಅಭಿವೃದ್ಧಿ ಮಾಡಲಾಗುತ್ತಿದೆ ಎಂದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.