
ಮಂಡ್ಯ: ‘ಪಂಚ ಗ್ಯಾರಂಟಿ ಹೆಸರಿನಲ್ಲಿ 2023ರಲ್ಲಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸಾವಿರ ದಿನ ಆಡಳಿತ ನಡೆಸಿದೆ. ಆದರೆ, ಹಗರಣದಲ್ಲಿಯೇ ಮುಳುಗಿರುವ ಕಾಂಗ್ರೆಸ್ ಸರ್ಕಾರದ ಸಾವಿರ ಅವಾಂತರಗಳನ್ನು ನಾವು ಜನರಿಗೆ ಅರ್ಥ ಮಾಡಿಸಬೇಕಿದೆ’ ಎಂದು ಮಾಜಿ ಸಂಸದ ಪ್ರತಾಪ ಸಿಂಹ ಹೇಳಿದರು.
ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸುಳ್ಳು ಭರವಸೆಗಳನ್ನು ನೀಡಿದ್ದಾರೆ ಎಂಬುದು ತಿಳಿದಿದೆ. ಗೃಹಲಕ್ಷ್ಮಿ, ಯುವನಿಧಿ, ಗೃಹ ಜ್ಯೋತಿ, ಶಕ್ತಿ, ಅನ್ನಭಾಗ್ಯ ಯೋಜನೆಗಳು ನೆಲಕಚ್ಚಿವೆ’ ಎಂದು ಆರೋಪಿಸಿದರು.
‘ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರುವಲ್ಲಿ ಪ್ರಮುಖ ಪಾತ್ರ ವಹಿಸಿರುವ ಡಿ.ಕೆ. ಶಿವಕುಮಾರ್ ಅವರಿಗೆ ಸಿದ್ದರಾಮಯ್ಯ ಅವರು ಮಾತಿನ ಪ್ರಕಾರ ಮುಖ್ಯಮಂತ್ರಿ ಸ್ಥಾನ ಬಿಟ್ಟುಕೊಡುತ್ತಾರೆ ಎಂಬ ಬಗ್ಗೆ ಅನುಮಾನವಿದೆ. ಏಕೆಂದರೆ ತನ್ನ ಮಗನ ಮೂಲಕವೇ ಐದು ವರ್ಷ ನಾನೇ ಮುಖ್ಯಮಂತ್ರಿ ಎಂದು ಹೇಳಿಕೆ ಕೊಡಿಸುತ್ತಿದ್ದಾರೆ’ ಎಂದು ದೂರಿದರು.
‘ಮೈಸೂರಿನ ಮುಡಾದಲ್ಲಿ 14 ನಿವೇಶನಗಳ ಹಗರಣ, ₹178 ಕೋಟಿ ವಾಲ್ಮೀಕಿ ಹಗರಣದಲ್ಲಿ ಸಚಿವ ನಾಗೇಂದ್ರ ರಾಜೀನಾಮೆ, ಇದರಲ್ಲಿ ಪ್ರಮುಖವಾಗಿ ವಾಲ್ಮೀಕಿ ನಿಗಮದಲ್ಲಿ 700ಕ್ಕೂ ಹೆಚ್ಚು ಖಾತೆಗಳಿಗೆ ಹಣ ವರ್ಗಾವಣೆ, ವಕ್ಫ್ ಮಂಡಳಿಯಲ್ಲಿ ₹4 ಕೋಟಿ ಅಕ್ರಮ ವರ್ಗಾವಣೆ, 11 ಇಲಾಖೆ, ಒಂಬತ್ತು ನಿಗಮಗಳಲ್ಲಿ ₹42.88 ಕೋಟಿ ದುರುಪಯೋಗ, ಅಬಕಾರಿ ಇಲಾಖೆಯಲ್ಲಿ ₹700 ಕೋಟಿ ಮಧ್ಯ ವರ್ತಕರಿಂದ ವಸೂಲಿ, ಭೋವಿ ನಿಗಮದಲ್ಲಿ ಬರೋಬ್ಬರಿ ₹60 ಕೋಟಿ ಗೋಲ್‌ಮಾಲ್ ಮಾಡಲಾಗಿದೆ’ ಎಂದು ಆರೋಪಿಸಿದರು.
‘ಕಾಂಗ್ರೆಸ್ ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಎರಡೂವರೆ ವರ್ಷದಲ್ಲಿ ಬರೋಬ್ಬರಿ 2,422 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಪೌರಾಯುಕ್ತರಿಗೆ ಕಾಂಗ್ರೆಸ್ ಮುಖಂಡ ಧಮ್ಕಿ ಹಾಕಿದ್ದಾನೆ. ಮಹಿಳಾ ಅಧಿಕಾರಿಗೆ ಮುಖ್ಯಮಂತ್ರಿ ಕ್ಷೇತ್ರದಲ್ಲಿಯೇ ಕೊಲೆ ಬೆದರಿಕೆ ಹಾಕಲಾಗಿದೆ. ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ’ ಎಂದು ದೂರಿದರು.
ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಡಾ.ಇಂದ್ರೇಶ್, ಮುಖಂಡರಾದ ಸಿದ್ದರಾಮಯ್ಯ, ಇಂಡುವಾಳು ಸಚ್ಚಿದಾನಂದ, ಅಶೋಕ್ ಜಯರಾಂ, ನಾಗಾನಂದ್, ಪ್ರದೀಪ್, ವಿವೇಕ್ ಇದ್ದರು.
ಅಪ್ಪ–ಮಕ್ಕಳಿಂದ ಕಲಬುರಗಿ ಏಕೆ ಅಭಿವೃದ್ಧಿ ಆಗಿಲ್ಲ. ಎಸ್ಸೆಸ್ಸೆಲ್ಸಿ ಫಲಿತಾಂಶದಲ್ಲಿ ಕೊನೆ ಸ್ಥಾನ ಸಿಕ್ಕಿದೆ. ನೀವೂ ಓದಿಲ್ಲ ನಿಮ್ಮ ಕ್ಷೇತ್ರದ ಮಕ್ಕಳನ್ನೂ ಓದಿಸುತ್ತಿಲ್ಲಪ್ರತಾಪ ಸಿಂಹ ಮಾಜಿ ಸಂಸದ
‘ಮೈತ್ರಿ: ನಾಯಕರ ತೀರ್ಮಾನಕ್ಕೆ ಬದ್ಧ’
‘ಮುಂದೆ ಸ್ಥಳೀಯ ಸಂಸ್ಥೆ ಚುನಾವಣೆಗಳು ಬರುತ್ತವೆ. ಬಿಜೆಪಿ-ಜೆಡಿಎಸ್ ನಾಯಕರು ಕೂತು ಚರ್ಚೆ ಮಾಡುತ್ತಾರೆ. ನಮ್ಮ ಪಕ್ಷದ ಯುವ ನಾಯಕರಿಗೆ ಅನ್ಯಾಯವಾಗದ ರೀತಿ ಮಾತನಾಡುತ್ತಾರೆ ಎಂಬ ನಂಬಿಕೆ ಇದೆ’ ಎಂದು ಮಾಜಿ ಸಂಸದ ಪ್ರತಾಪ ಸಿಂಹ ಹೇಳಿದರು. ಕಳೆದ ಎಂಪಿ ಚುನಾವಣೆಯಲ್ಲಿ 137 ಎಂಪಿಗಳಿಗೆ ಟಿಕೆಟ್ ಇಲ್ಲ ಅಂದ್ರು. ಆಗ ನಾವುಗಳು ತಲೆ ಬಾಗಿದ್ದೆವು. ಜೆಡಿಎಸ್ ಜೊತೆಗಿನ ಮೈತ್ರಿ ವಿಚಾರದಲ್ಲೂ ತಲೆ ಬಾಗಿದೆವು. ಈಗಲೂ ಕೇಂದ್ರ ನಾಯಕರು ತೆಗೆದುಕೊಳ್ಳುವ ನಿರ್ಧಾರಕ್ಕೆ ಎಲ್ಲರೂ ತಲೆ ಬಾಗಬೇಕು. ನಮ್ಮ ಪಕ್ಷದವರಿಗೆ ಅನ್ಯಾಯವಾಗಲು ನಮ್ಮ ನಾಯಕರು ಬಿಟ್ಟುಕೊಡಲ್ಲ’ ಎಂಬ ನಂಬಿಕೆಯಿದೆ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.