ADVERTISEMENT

ಮಳವಳ್ಳಿ | ಮಲ್ಟಿಮೀಡಿಯಾ ಸೆಂಟರ್ ಮೂಲಕ ಗುಣಾತ್ಮಕ ಶಿಕ್ಷಣ: ಪಿ.ಎಂ.ನರೇಂದ್ರಸ್ವಾಮಿ

38 ಪ್ರೌಢಶಾಲೆಗಳಿಗೆ ಟೊಯೋಟ ಕಿರ್ಲೋಸ್ಕರ್ ಮೋಟಾರ್ ಪ್ರೈವೇಟ್ ಲಿಮಿಟೆಡ್‌ನ ಸಿಎಸ್ಆರ್ ಅನುದಾನ

​ಪ್ರಜಾವಾಣಿ ವಾರ್ತೆ
Published 18 ಜನವರಿ 2026, 5:34 IST
Last Updated 18 ಜನವರಿ 2026, 5:34 IST
ಮಳವಳ್ಳಿ ಪಟ್ಟಣದ ಹೊರವಲಯದ ಪಿ.ಎಂ.ಶ್ರೀ ಆದರ್ಶ ವಿದ್ಯಾಲಯ(ಆರ್.ಎಂ.ಎಸ್.ಎ)ದಲ್ಲಿ ಮಲ್ಟಿ ಮೀಡಿಯಾ ಕೇಂದ್ರಗಳ ಪ್ರಸಾರ ಕೇಂದ್ರವನ್ನು ಶಾಸಕ ಪಿ.ಎಂ.ನರೇಂದ್ರಸ್ವಾಮಿ ಶನಿವಾರ ಉದ್ಘಾಟಿಸಿದರು.
ಮಳವಳ್ಳಿ ಪಟ್ಟಣದ ಹೊರವಲಯದ ಪಿ.ಎಂ.ಶ್ರೀ ಆದರ್ಶ ವಿದ್ಯಾಲಯ(ಆರ್.ಎಂ.ಎಸ್.ಎ)ದಲ್ಲಿ ಮಲ್ಟಿ ಮೀಡಿಯಾ ಕೇಂದ್ರಗಳ ಪ್ರಸಾರ ಕೇಂದ್ರವನ್ನು ಶಾಸಕ ಪಿ.ಎಂ.ನರೇಂದ್ರಸ್ವಾಮಿ ಶನಿವಾರ ಉದ್ಘಾಟಿಸಿದರು.   

ಮಳವಳ್ಳಿ: ತಾಲ್ಲೂಕಿನ ಸರ್ಕಾರಿ ಶಾಲೆಗಳಲ್ಲಿ ಆತ್ಯಾಧುನಿಕ ಸ್ಮಾರ್ಟ್ ಕ್ಲಾಸ್ ಹಾಗೂ ಮಲ್ಟಿಮೀಡಿಯಾ ಸೌಲಭ್ಯವನ್ನು ಒಳಗೊಂಡ ಶಿಕ್ಷಣ ನೀಡುವ ಮೂಲಕ ಶೈಕ್ಷಣಿಕ ಕ್ಷೇತ್ರಕ್ಕೆ ಹೊಸ ಆಯಾಮ ನೀಡಲಾಗುತ್ತಿದೆ ಎಂದು ಶಾಸಕ ಪಿ.ಎಂ.ನರೇಂದ್ರಸ್ವಾಮಿ ತಿಳಿಸಿದರು.

ತಾಲ್ಲೂಕಿನ 38 ಪ್ರೌಢಶಾಲೆಗಳಿಗೆ ಟೊಯೋಟ ಕಿರ್ಲೋಸ್ಕರ್ ಮೋಟಾರ್ ಪ್ರೈವೇಟ್ ಲಿಮಿಟೆಡ್‌ನ ಸಿಎಸ್ಆರ್ ಅನುದಾನದಡಿ ಸ್ಥಾಪನೆಗೊಳ್ಳುತ್ತಿರುವ ಮಲ್ಟಿ ಮೀಡಿಯಾ ಕೇಂದ್ರಗಳ ಪ್ರಸಾರ ಕೇಂದ್ರವನ್ನು ಪಟ್ಟಣದ ಹೊರವಲಯದ ಪಿ.ಎಂ.ಶ್ರೀ ಆದರ್ಶ ವಿದ್ಯಾಲಯ(ಆರ್.ಎಂ.ಎಸ್.ಎ)ದಲ್ಲಿ ಶನಿವಾರ ಉದ್ಘಾಟಿಸಿ ಅವರು ಮಾತನಾಡಿದರು.

‘ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ಡಿಜಿಟಲ್ ಪರದೆಗಳ ಮೂಲಕ ಪಾಠ ಮಾಡುವುದರಿಂದ ಆಕರ್ಷಕ ಕಲಿಕೆಗೆ ಸಹಕಾರಿಯಾಗಿದೆ. ರಾಜ್ಯದಲ್ಲಿಯೇ ಇಂಥ ಶೈಕ್ಷಣಿಕ ಕ್ರಾಂತಿಗೆ ಮಳವಳ್ಳಿಯಿಂದ ಬುನಾದಿ ಸಿಕ್ಕದಂತಾಗಿದೆ. ಟೊಯೋಟ ಕಿರ್ಲೋಸ್ಕರ್ ಮೋಟಾರ್ ಪ್ರೈವೇಟ್ ಲಿಮಿಟೆಟ್ ಸಂಸ್ಥೆಯಿಂದ 38 ಸರ್ಕಾರಿ ಪ್ರೌಢಶಾಲೆಗಳಿಗೆ ಸಾಮಾಜಿಕ ಹೊಣೆಗಾರಿಕೆಯಡಿಯಲ್ಲಿ ಮಲ್ಟಿಮೀಡಿಯಾ ಹಾಗೂ ಸ್ಮಾರ್ಟ್ ಕ್ಲಾಸ್ ಸ್ಥಾಪನೆಗೆ ಮುಂದಾಗಿದೆ’ ಎಂದು ಹೇಳಿದರು.

ADVERTISEMENT

‘ಶಿಕ್ಷಣದಿಂದ ಮಾತ್ರ ಬದುಕನ್ನು ಬದಲಾಯಿಸಲು ಸಾಧ್ಯ ಎನ್ನುವುದನ್ನು ಅರ್ಥೈಸಿಕೊಂಡು ಸರ್ಕಾರಿ ಶಾಲೆಯ ಮಕ್ಕಳಿಗೆ ಗುಣಾತ್ಮಕ ಶಿಕ್ಷಣ ಕೊಡಿಸಲು ಶ್ರಮ ವಹಿಸಲಾಗುತ್ತಿದೆ. ಸುಮಾರು ₹25 ಕೋಟಿ ಹೆಚ್ಚು ಅನುದಾನವನ್ನು ಅಭಿವೃದ್ಧಿ ಪಡಿಸಲಾಗುತ್ತಿದೆ. ನಾವೆಲ್ಲರೂ ಸಮಾನರು ಎನ್ನುವುದನ್ನು ತೋರಿಸಿರುವ ಡಾ.ಬಿ.ಆರ್.ಅಂಬೇಡ್ಕರ್ ಅವರ ಆಶಯದಂತೆ ತಾಲ್ಲೂಕಿನಲ್ಲಿ ಖಾಸಗಿ ಶಾಲೆಗಳಿಗೆ ಸಮಾನಾಗಿ ಗುಣಾತ್ಮಕ ಶಿಕ್ಷಣಕ್ಕೆ ಒತ್ತು ನೀಡುತ್ತಿರುವುದರಿಂದ ಪೋಷರು ಖಾಸಗಿ ಶಾಲೆಗಳ ವ್ಯಾಮೋಹವನ್ನು ಬಿಟ್ಟು ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗೆ ಸೇರಿಸಬೇಕು’ ಎಂದು ಕೋರಿದರು.

ನಂತರ ಪಟ್ಟಣದ ಬಾಲಕಿಯ ಸರ್ಕಾರಿ ಪ್ರೌಢಶಾಲೆಯಲ್ಲಿ ಮಲ್ಟಿ ಮೀಡಿಯಾ ಸ್ವೀಕೃತಿ ಕೇಂದ್ರಗಳನ್ನು ಉದ್ಘಾಟಿಸಿದರು.
ಟೊಯೋಟ ಕಿರ್ಲೋಸ್ಕರ್ ಮೋಟಾರ್ ಪ್ರೈವೇಟ್ ಲಿಮಿಟೆಟ್ ನ ರಮೇಶ್ ರಾವ್, ಕಿರಣ್ ಕುಮಾರ್, ಈಶ್ವರ್, ಮಾದೇಶ್, ತಹಶೀಲ್ದಾರ್ ಎಸ್.ವಿ.ಲೋಕೇಶ್, ತಾ.ಪಂ.ಇಒ ಎಚ್.ಜಿ.ಶ್ರೀನಿವಾಸ್, ಕ್ಷೇತ್ರ ಶಿಕ್ಷಣಾಧಿಕಾರಿ ವಿ.ಇ.ಉಮಾ, ಟಿಎಪಿಸಿಎಂಎಸ್ ಅಧ್ಯಕ್ಷ ಎಂ.ಲಿಂಗರಾಜು, ಎಸ್ಡಿಎಂಸಿ ಅಧ್ಯಕ್ಷ ಟಿ.ಎಂ.ಪ್ರಕಾಶ್, ಮುಖ್ಯಶಿಕ್ಷಕರಾದ ಕುಮಾರಸ್ವಾಮಿ, ಶಿವರಾಜ್ ಪಾಲ್ಗೊಂಡಿದ್ದರು.

ಮುಂದಿನ ದಿನಗಳಲ್ಲಿ ಪ್ರಾಥಮಿಕ ಶಾಲೆಗಳಿಗೂ ಮಲ್ಟಿ ಮೀಡಿಯಾ ಸೆಂಟರ್ ವಿಸ್ತರಣೆ ಸಂಬಂಧ ಟೊಯೋಟ ಕಿರ್ಲೋಸ್ಕರ್ ಮೋಟಾರ್ ಪ್ರೈವೇಟ್ ಲಿಮಿಟೆಟ್ ಗೆ ಮನವಿ ಮಾಡಿದ್ದು ಸಕಾರಾತ್ಮಕ ಸ್ಪಂದನೆ ಸಿಕ್ಕಿದೆ
ಪಿ.ಎಂ.ನರೇಂದ್ರಸ್ವಾಮಿ ಶಾಸಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.