
ಪಾಂಡವಪುರ: ‘ವರ್ತಮಾನದಲ್ಲಿನ ಸಮಾಜ ವಿಷಮ ಸ್ಥಿತಿಯಲ್ಲಿದ್ದು, ಒಳ್ಳೆಯದಕ್ಕಿಂತ ಕೆಟ್ಟದರ ಕಡೆಗೆ ಹೋಗುತ್ತಿದೆ’ ಎಂದು ಕೆಂಗೇರಿ ವಿಶ್ವ ಒಕ್ಕಲಿಗರ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷ ನಿಶ್ಚಲಾನಂದ ಸ್ವಾಮೀಜಿ ಹೇಳಿದರು.
ಪಟ್ಟಣದ ಕನ್ನಡ ಸಾಹಿತ್ಯ ಪರಿಷತ್ತಿನ ಭವನದಲ್ಲಿ ಕಾವೇರಮ್ಮ ಕೃಷ್ಣೇಗೌಡ ಪ್ರತಿಷ್ಠಾನ ಸಹಯೋಗದಲ್ಲಿ ಹಸಿರು ಭೂಮಿ ಟ್ರಸ್ಟ್ ಈಚೆಗೆ ಆಯೋಜಿಸಿದ್ದ ‘ಕುವೆಂಪು ಶಿಕ್ಷಣ ಚೇತನ ಪ್ರಶಸ್ತಿ’, ‘ನರಹಳ್ಳಿ ಬಾಲಸುಬ್ರಹ್ಮಣ್ಯ ಗುರು ಶ್ರೇಷ್ಠ ಪ್ರಶಸ್ತಿ’ ಪ್ರದಾನ ಸಮಾರಂಭದಲ್ಲಿ ಮಾತನಾಡಿದರು.
ಶಿಕ್ಷಕರು ಮಕ್ಕಳಿಗೆ ಶಿಕ್ಷಣ ನೀಡಿದರಷ್ಟೆ ಸಾಲದು, ಅವರಿಗೆ ಸಂಸ್ಕಾರ ಕಲಿಸಿ ಉತ್ತಮ ಪ್ರಜೆಯನ್ನಾಗಿ ರೂಪಿಸಬೇಕು. ಇದಕ್ಕೆ ಪೂರಕವಾಗಿ ಹಸಿರು ಭೂಮಿ ಟ್ರಸ್ಟ್‌ನ ನರಹಳ್ಳಿ ಜ್ಞಾನೇಶ್ ಮತ್ತು ಪತ್ನಿ ಕೋಕಿಲಾ ಅವರು ಸಮಾಜಮುಖಿ ಕೆಲಸ ಮಾಡುತ್ತಿದ್ದು, ಉತ್ತಮ ಶಿಕ್ಷಕರನ್ನು ಗುರುತಿಸಿ ಅಭಿನಂದಿಸುತ್ತಿರುವುದು ಶ್ಲಾಘನಿಯ ಎಂದರು.
ಶಾಸಕ ದರ್ಶನ್ ಪುಟ್ಟಣ್ಣಯ್ಯ ಮಾತನಾಡಿ, ‘ಸಮಾಜ ತಿದ್ದುವ ಹೊಣೆಗಾರಿಕೆ ಶಿಕ್ಷಕರು ಹೊತ್ತಿದ್ದಾರೆ. ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರಗಳು ಉತ್ತಮವಾಗಿದ್ದರೆ ಸಮಾಜವು ಪ್ರಗತಿಯಲ್ಲಿರುತ್ತದೆ. ರಾಜಕಾರಣಿಗಳನ್ನು ಟೀಕಿಸಿ ತಿದ್ದುವ ಕೆಲಸವಾಗಬೇಕಿದೆ. ಪ್ರತಿಯೊಂದನ್ನು ಪ್ರಶ್ನಿಸಿ ಎಚ್ಚರಗೊಳಿಸಿದರೆ ಆರೋಗ್ಯಕರ ಸಮಾಜ ನಿರ್ಮಾಣ ಮಾಡಲು ಸಾಧ್ಯ’ ಎಂದು ಹೇಳಿದರು.
ಸಂಸ್ಕೃತ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಪ್ರೊ.ಪದ್ಮಾ ಶೇಖರ್ ಮಾತನಾಡಿ, ‘ನಾವು ಓದುವ ಕಾಲಘಟ್ಟದಲ್ಲಿನ ಶಿಕ್ಷಕರು ಉತ್ತಮ ಪಾಠ ಮಾಡಿ ಗುಣಮಟ್ಟ ಶಿಕ್ಷಣ ನೀಡುತ್ತಿದ್ದರು. ಆದರೆ ಇಂದಿನ ಶಿಕ್ಷಕರು ಇದಕ್ಕೆ ಹೊರತಾಗಿದ್ದಾರೆ. ಶಿಕ್ಷಕರು ತಮಗಿರುವ ಹೊಣೆಗಾರಿಕೆ ಮರೆಯುತ್ತಿದ್ದಾರೆ’ ಎಂದರು.
ನಿವೃತ್ತ ಪ್ರಾಂಶುಪಾಲ ದೊಡ್ಡರಸಿನಕೆರೆ ಮಾಯಪ್ಪಗೆ ನರಹಳ್ಳಿ ಬಾಲಸುಬ್ರಹ್ಮಣ್ಯ ಗುರುಶ್ರೇಷ್ಠ ಪ್ರಶಸ್ತಿ ಪ್ರದಾನ ಮಾಡಲಾಯಿತು. ಶಿಕ್ಷಕರಾದ ಆನಂದ, ಪುಷ್ಪಾ, ಸಿ.ಎಚ್.ವೆಂಕಟೇಶ್, ಎಚ್.ಆರ್.ಪೂರ್ಣಿಮಾ, ಎಂ.ಎಸ್.ಶಿವರಾಮ್, ಎಸ್.ವೈ.ಅನಿತಾ, ಕೆ.ಆರ್.ಚಂದ್ರು, ಕೀರ್ತಿ ಅವರಿಗೆ ಕುವೆಂಪು ಶಿಕ್ಷಣ ಚೇತನ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಸರ್ಕಾರಿ ನೌಕರರ ಸಂಘದ ತಾಲ್ಲೂಕು ಅಧ್ಯಕ್ಷ ಎಸ್.ಎನ್.ಕೆಂಪೇಗೌಡ, ರಾಜ್ಯ ಸಂಘಟನಾ ಕಾರ್ಯದರ್ಶಿ ಎಂ.ಜಯರಾಮ್, ಬಸವೇಶ್ವರ ವಿವಿಧೋದ್ದೇಶ ಸಹಕಾರ ಸಂಘದ ಅಧ್ಯಕ್ಷ ರಾಜಶೇಖರ್ ಅಮೃತಿ, ವೀರಶೈವ ಮಹಾಸಭಾದ ತಾಲ್ಲೂಕು ಅಧ್ಯಕ್ಷ ಶಿವಕುಮಾರ್, ಅಮೃತಿ ಲೋಕೇಶ್, ಬಿ.ಬಸವರಾಜ್, ಮಕ್ಕಳ ಸಾಹಿತ್ಯ ಪರಿಷತ್ತಿನ ತಾಲ್ಲೂಕು ಅಧ್ಯಕ್ಷ ಎಚ್.ಆರ್.ಧನ್ಯಕುಮಾರ್, ಹಸಿರು ಭೂಮಿ ಟ್ರಸ್ಟ್‌ನ ನರಹಳ್ಳಿ ಜ್ಞಾನೇಶ್, ಕೋಕಿಲಾ ಜ್ಞಾನೇಶ್ ಇದ್ದರು.
‘ಸಮಾಜದಲ್ಲಿ ಮೌಲ್ಯಗಳು ಕುಸಿಯುತ್ತಿವೆ. ದೇಶ ಕಟ್ಟಬೇಕಾದ ರಾಜಕಾರಣಿಗಳು ಹಣದ ಹಿಂದೆ ಬಿದ್ದಿದ್ದಾರೆ. ಹಿಂದುತ್ವದ ಹೆಸರಿನಲ್ಲಿ ಯುವಕರನ್ನು ಹಾದಿ ತಪ್ಪಿಸುತ್ತಿದ್ದಾರೆಪ್ರೊ.ಪದ್ಮಾ ಶೇಖರ್ ವಿಶ್ರಾಂತ ಕುಲಪತಿ ಸಂಸ್ಕೃತ ವಿ.ವಿ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.