
ಶ್ರೀರಂಗಪಟ್ಟಣ: ಪಟ್ಟಣದ ಐತಿಹಾಸಿಕ ಶ್ರೀರಂಗನಾಥಸ್ವಾಮಿ ದೇವಾಲಯದಲ್ಲಿ, ಹಲವು ಶತಮಾನಗಳ ನಂತರ ನಡೆಯುತ್ತಿರುವ, ಮೂರು ದಿನಗಳ ಸಹಸ್ರ ಕಳಶಾಭಿಷೇಕ ಮಹೋತ್ಸವಕ್ಕೆ ಶಾಸಕ ರಮೇಶ ಬಂಡಿಸಿದ್ದೇಗೌಡ ಹಾಗೂ ಸುಮತಿ ರಮೇಶ ಬಂಡಿಸಿದ್ದೇಗೌಡ ದಂಪತಿ ಮಂಗಳವಾರ ಸಂಜೆ ಅಂಕುರಾರ್ಪಣೆ ಮೂಲಕ ಚಾಲನೆ ನೀಡಿದರು.
ದೇವಾಲಯದ ಪ್ರಾಂಗಣದಲ್ಲಿ, ಗೋಧೂಳಿ ಲಗ್ನದಲ್ಲಿ ದೀಪಾರೋಹಣ, ಸ್ವಸ್ತಿ ವಾಚನ, ಆಚಾರ್ಯ ಋತ್ವಿಕ್‌ವರಣಂ, ಸಭಾನುಜ್ಞಾ, ಪುಣ್ಯಾಹ ವಾಚನ, ಮೃತ್ತಿಕ ಸಂಗ್ರಹಣ, ಅಂಕುರಾರ್ಪಣ ಮತ್ತು ಅಂಕುರಾರ್ಪಣ ಹೋಮಗಳು ನಡೆದವು. ವೈದಿಕರು ವೇದ, ಮಂತ್ರ ಪಠಿಸಿದರು. ಜಿಲ್ಲಾಧಿಕಾರಿ ಕುಮಾರ, ಹೆಚ್ಚುವರಿ ಜಿಲ್ಲಾಧಿಕಾರಿ ಬಿ.ಸಿ. ಶಿವಾನಂದಮೂರ್ತಿ, ಉಪ ವಿಭಾಗಾಧಿಕಾರಿ ಶ್ರೀನಿವಾಸ್, ತಹಶೀಲ್ದಾರ್ ಚೇತನಾ ಯಾದವ್, ದೇವಾಲಯದ ಕಾರ್ಯನಿರ್ವಾಹಕ ಅಧಿಕಾರಿ ಉಮಾ. ಎಂ, ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಸೋಮಶೇಖರ್, ಪ್ರಧಾನ ಅರ್ಚಕ ವಿಜಯಸಾರಥಿ ಪಾಲ್ಗೊಂಡಿದ್ದರು.
ನ.26ರಂದು ಬೆಳಿಗ್ಗೆ 8 ಗಂಟೆಗೆ ಕಾವೇರಿ ನದಿ ಪವಿತ್ರ ತೀರ್ಥ ಸಂಗ್ರಹ, ಪಂಚಗವ್ಯ ಪ್ರೋಕ್ಷಣೆ, ಕಳಶಾಧಿವಾಸ, ಕಳಶ ಸ್ಥಾಪನೆ, ರಕ್ಷಾ ಬಂಧನ, ಪುಣ್ಯಾಹ ವಾಚನ, ಕಳಶಗಳಿಗೆ ಆವಾಹನೆ, ದೇವತಾ ಹೋಮ, ಪೂರ್ಣಾಹುತಿ ನಡೆಯಲಿದೆ.
ನ. 27ರಂದು ಮುಂಜಾನೆ 5 ಗಂಟೆಗೆ ಚುತಸ್ಥಾನಾರ್ಚನೆ, ಪೂರ್ಣಾಹುತಿ ಕಳಶಗಳಿಗೆ ಆರಾಧನೆ, ದೇವತಾ ಆರಾಧನೆ, ಕಳಶಾಭಿಷೇಕ, ಉಪಚಾರ, ಅರಿಶಿನ ಅಲಂಕಾರ, ಮಹಾ ಕುಂಭಾಭಿಷೇಕ, ನಿವೇದನೆ, ಮಾಹಾ ಮಂಗಳಾರತಿ, ರಾಷ್ಟ್ರಾಶೀರ್ವಾದ ಮತ್ತು ಪ್ರಸಾದ ವಿತರಣೆ ನಡೆಯಲಿದೆ. ಸಂಜೆ 7 ಗಂಟೆಗೆ ಚತುರ್ಬೀದಿಗಳಲ್ಲಿ ಶ್ರೀರಂಗನಾಥಸ್ವಾಮಿ ದೇವರ ಉತ್ಸವ ಜರುಗಲಿದೆ ಎಂದು ದೇವಾಲಯದ ಪ್ರಧಾನ ಅರ್ಚಕ ಎಲ್. ವಿಜಯಸಾರಥಿ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.