ಶ್ರೀರಂಗಪಟ್ಟಣ: ಪಟ್ಟಣದಲ್ಲಿ ಅ.4ರಂದು ನಡೆಯಲಿರುವ ದಸರಾ ಉತ್ಸವದ ಮೆರವಣಿಗೆಯನ್ನು ಸಾರ್ವಜನಿಕರು ಕುಳಿತು ವೀಕ್ಷಿಸಲು ಕಿರಂಗೂರು ಬನ್ನಿ ಮಂಟಪದಿಂದ ಶ್ರೀರಂಗನಾಥಸ್ವಾಮಿ ದೇವಾಲಯ ಮೈದಾನದ ವರೆಗೆ ಮೂರು ಕಡೆ ಆಸನದ ವ್ಯವಸ್ಥೆ ಮಾಡಲಾಗುತ್ತಿದೆ.
ಕಿರಂಗೂರು ವೃತ್ತ, ಪುರಸಭೆ ಕಚೇರಿ ವೃತ್ತ ಮತ್ತು ಅಂಬೇಡ್ಕರ್ ವೃತ್ತಗಳಲ್ಲಿ ತಾತ್ಕಾಲಿಕ ಆಸನಗಳನ್ನು ಜೋಡಿಸಲಾಗುತ್ತಿದೆ. ಒಂದೊಂದು ವೃತ್ತಗಳಲ್ಲಿ 200ರಿಂದ 300 ಮಂದಿ ಕುಳಿತುಕೊಳ್ಳುವಷ್ಟು ಆಸನ ವ್ಯವಸ್ಥೆ ಮಾಡಲಾಗುತ್ತಿದೆ. ಶ್ರೀರಂಗನಾಥಸ್ವಾಮಿ ದೇವಾಲಯ ಮೈದಾನದ ಪ್ರಧಾನ ವೇದಿಕೆಯ ಮುಂದೆ 8 ಸಾವಿರ ಆಸನಗಳು ಇರುತ್ತವೆ ಎಂದು ಲೋಕೋಪಯೋಗಿ ಇಲಾಖೆ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಜಸ್ವಂತ್ ತಿಳಿಸಿದರು.
ಜಂಬೂ ಸವಾರಿ ಆರಂಭವಾಗುವ ಕಿರಂಗೂರು ವೃತ್ತದ ದಸರಾ ಬನ್ನಿ ಮಂಟಪದ ಬಳಿ ಆನೆಗಳಿಗೆ ಪೂಜೆ ಸಲ್ಲಿಸಲು ಪ್ರತ್ಯೇಕ ವೇದಿಕೆ ನಿರ್ಮಿಸಲಾಗುತ್ತದೆ. ಅದರ ಪಕ್ಕದಲ್ಲಿ 20 ಮಂದಿ ಅತಿ ಗಣ್ಯರು ಕುಳಿತುಕೊಳ್ಳಲು ವಿಶೇಷ ಆಸನಗಳನ್ನು ಹಾಕಲಾಗುತ್ತದೆ. ಬನ್ನಿ ಮಂಟಪವನ್ನು ಹೂಗಳಿಂದ ಸಿಂಗರಿಸುವ ಜತೆಗೆ ಆಕರ್ಷಕ ವಿದ್ಯುತ್ ದೀಪಗಳಿಂದ ಅಲಂಕರಿಸಲಾಗುವುದು ಎಂದು ಅವರು ಹೇಳಿದರು.
ಮಳಿಗೆಗಳು: ಶ್ರೀರಂಗನಾಥಸ್ವಾಮಿ ದೇವಾಲಯ ಮೈದಾನದಲ್ಲಿ 100ಕ್ಕೂ ಹೆಚ್ಚು ಮಳಿಗೆಗಳನ್ನು ತೆರೆಯಲಾಗುತ್ತದೆ. ಈ ಬಾರಿ ಆಹಾರ ಮೇಳವನ್ನು ವಿಶೇಷವಾಗಿ ಆಯೋಜಿಸಲಾಗುತ್ತಿದೆ. ವಸ್ತುಪ್ರದರ್ಶನ ಮಳಿಗೆಗಳಲ್ಲಿ ಪುಸ್ತಕ ಪ್ರದರ್ಶನ ಮಳಿಗೆಯೂ ಇರುತ್ತದೆ. ಈ ಮಳಿಗೆಗಳಲ್ಲಿ ಸರ್ಕಾರದ ವಿವಿಧ ಯೋಜನೆಗಳ ಬಗ್ಗೆ ಮಾಹಿತಿ ನೀಡಲಾಗುವುದು ಎಂದು ತಾ.ಪಂ. ಕಾರ್ಯನಿರ್ವಹಣಾಧಿಕಾರಿ ಎ.ಬಿ. ವೇಣು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.