ಶ್ರೀರಂಗಪಟ್ಟಣ: ಪಟ್ಟಣದಲ್ಲಿ ಗುರುವಾರ ನಡೆದ 415ನೇ ‘ಶ್ರೀರಂಗಪಟ್ಟಣ ದಸರಾ ಉತ್ಸವ’ದ ಮೆರವಣಿಗೆಗೆ 20ಕ್ಕೂ ಹೆಚ್ಚು ಜಾನಪದ ಕಲಾ ತಂಡಗಳು ಮೆರುಗು ನೀಡಿದವು.
ತಾಲ್ಲೂಕಿನ ಕಿರಂಗೂರು ಬನ್ನಿ ಮಂಟಪದಿಂದ ಆರಂಭವಾದ ಜಂಬೂಸವಾರಿಯ ಜತೆ ನಂದಿ ಧ್ವಜ, ವೀರಗಾಸೆ, ಪಟದ ಕುಣಿತ, ಗಾರುಡಿ ಗೊಂಬೆ, ಸೋಮನ ಕುಣಿತ ಇತರ ಕಲಾ ತಂಡಗಳು ಪ್ರದರ್ಶನ ನೀಡಿದವು.
ಪೂಜಾಕುಣಿತ, ತಮಟೆ, ನಗಾರಿ, ಪಟ್ಟಕುಣಿತ, ಹುಲಿವೇಷ, ವೀರ ಭದ್ರಕುಣಿತ, ಕಾಳಿ ಕುಣಿತ, ಕಂಸಾಳೆ, ವೀರ ಮಕ್ಕಳ ಕುಣಿತ, ಒನಕೆ ಕುಣಿತ, ಕೋಲಾಟ, ಕರಗಿದ ಕೋಲಾಟ, ಡೊಳ್ಳು ಕುಣಿತ, ಬೆಂಕಿ ಭರಾಟೆ, ದೊಣ್ಣೆ ವರಸೆ, ಬೇಡರ ವೇಷ, ಹಾಲಕ್ಕಿ ಸುಗ್ಗಿ ಕುಣಿತ, ಚಿಲಿಪಿಲಿ ಗೊಂಬೆ, ನಾಸಿಕ್ ಡೋಲಾಟಗಳು ನೋಡುಗರ ಗಮನ ಸೆಳೆದವು.
ಮಂಡ್ಯದ ದೇವರಾಜು ಅವರ ತಂಡ ನಂದಿ ಧ್ವಜ ಹಿಡಿದು ಮುಂದೆ ಸಾಗಿತು. ಮಳವಳ್ಳಿ ತಾಲ್ಲೂಕು ತಳಗವಾದಿಯ ಹೊನ್ನಯ್ಯ ಮತ್ತು ತಂಡ ಜಡೆ ಕೋಲಾಟದ ಮೂಲಕ ಗಮನ ಸೆಳೆಯಿತು. ಕೊತತ್ತಿ ಮತ್ತು ಮೋಳೆಕೊಪ್ಪಲಿನ ಕಲಾವಿದರು ದಾರಿಯುದ್ದಕ್ಕೂ ಕಹಳೆ ಊದಿದರು.
ಮಹಿಳೆಯರಿಂದ ಪೂರ್ಣಕುಂಭ:
ಮಹಿಳೆಯರು ಪೂರ್ಣಕುಂಭ ಹೊತ್ತು ಸಾಗಿದರು. ಮಂಗಳವಾದ್ಯ, ಕುದುರೆ ಸವಾರರನ್ನು ಒಳಗೊಂಡ ಪೊಲೀಸ್ ಬ್ಯಾಂಡ್, ದೊಣ್ಣೆ ವರಸೆ ತಂಡ ಮತ್ತು ಕೇರಳದ ಕಯ್ಯೂಂ ಕಲಾವಿದರ ತಂಡಗಳನ್ನು ಜನರು ಕುತೂಹಲದಿಂದ ವೀಕ್ಷಿಸಿದರು. ಭಾರತೀಯ ಬೌದ್ಧ ಮಹಾಸಭಾದ ‘ಯುದ್ದ ಬೇಡ ಬುದ್ದ ಬೇಕು’ ಎಂಬ ಘೋಷಣೆಯನ್ನು ಸಾರುವ ಸ್ತಬ್ಧಚಿತ್ರ ಆಕರ್ಷಕವಾಗಿತ್ತು.
ನಾಡದೇವತೆ ಚಾಮುಂಡೇಶ್ವರಿ ಹೊತ್ತ ಅಂಬಾರಿಗೆ ಪೊಲೀಸ್ ಬ್ಯಾಂಡ್ ವತಿಯಿಂದ ವಿಶೇಷ ಗೌರವ ಸಲ್ಲಿಸಲಾಯಿತು.
ಶ್ರೀರಂಗಪಟ್ಟಣ ದಸರಾ ಉದ್ಘಾಟನಾ ಕಾರ್ಯಕ್ರಮದಲ್ಲಿ ಕೃಷಿ ಸಚಿವ ಹಾಗೂ ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ, ಶ್ರೀರಂಗಪಟ್ಟಣ ಶಾಸಕ ರಮೇಶ ಬಂಡಿಸಿದ್ದೇಗೌಡ, ಮಂಡ್ಯ ಶಾಸಕ ಪಿ.ರವಿಕುಮಾರ್, ಮಾಜಿ ಶಾಸಕಿ ವಿಜಯಲಕ್ಷ್ಮಿ ಬಂಡಿಸಿದ್ದೇಗೌಡ, ಜಿಲ್ಲಾಧಿಕಾರಿ ಕುಮಾರ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೆ.ಆರ್. ನಂದಿನಿ, ಹೆಚ್ಚುವರಿ ಜಿಲ್ಲಾಧಿಕಾರಿ ಬಿ.ಸಿ. ಶಿವಾನಂದಮೂರ್ತಿ, ಉಪವಿಭಾಗಾಧಿಕಾರಿಗಳಾದ ಶಿವಮೂರ್ತಿ, ಶ್ರೀನಿವಾಸ್, ಶ್ರೀರಂಗಪಟ್ಟಣ ತಹಶೀಲ್ದಾರ್ ಚೇತನ ಯಾದವ್ ಪಾಲ್ಗೊಂಡಿದ್ದರು.
ಗಮನಸೆಳೆದ ಹಳ್ಳಿಕಾರ್
ಅಮೃತ ಮಹಲ್ ನೆಲಮನೆ ಗ್ರಾಮದ ಪವನ್‌ಗೌಡ ಎಂಬುವರು ತಮ್ಮ ಗರುಡ ಮತ್ತು ಧೀರ ಹೆಸರಿನ ಎತ್ತುಗಳ ಕೋಡುಗಳಿಗೆ ನಟ ದರ್ಶನ್ ಅವರ ಭಾವಚಿತ್ರ ಹಾಕಿ ಮೆರವಣಿಗೆ ಮಾಡಿದರು. ತಾಲ್ಲೂಕಿನ ವಿವಿಧ ಗ್ರಾಮಗಳ 20 ಜತೆಗೂ ಹೆಚ್ಚು ಹಳ್ಳಿಕಾರ್ ಮತ್ತು ಅಮೃತ ಮಹಲ್ ತಳಿಯ ಅಲಂಕೃತ ರಾಸುಗಳು ಮೆರವಣಿಗೆಯಲ್ಲಿದ್ದವು. ಶಿಕ್ಷಣ ರೇಷ್ಮೆ ತೋಟಗಾರಿಕೆ ಇತರ ಇಲಾಖೆಗಳ ಸ್ತಬ್ಧಚಿತ್ರಗಳು ಜಮಭೂ ಸವಾರಿಯ ಜತೆ ಸಾಗಿದವು. ನೆರೆದಿದ್ದವರು ಜಾನಪದ ಕಲಾವಿದರು ಮತ್ತು ಜಂಬೂ ಸವಾರಿಯ ಜತೆ ಸೆಲ್ಫಿ ಕ್ಲಿಕ್ಕಿಸಿಕೊಂಡು ಸಂಭ್ರಮಿಸಿದರು.
ಗಜ ಗಾಂಭೀರ್ಯದ ನಡಿಗೆ
ಕಳೆದ ಮೂರು ವರ್ಷಗಳಿಂದ ಶ್ರೀರಂಗಪಟ್ಟಣ ದಸರಾದಲ್ಲಿ ಚಾಮುಂಡೇಶ್ವರಿ ದೇವಿಯನ್ನು ಹೊತ್ತು ಹೆಜ್ಜೆ ಹಾಕಿರುವ ಮಹೇಂದ್ರ ಆನೆಯು ನಾಲ್ಕನೇ ಬಾರಿಗೆ ಗುರುವಾರ ಮೆರವಣಿಗೆಯುದ್ದಕ್ಕೂ ಗಜ ಗಾಂಭೀರ್ಯದ ನಡಿಗೆ ಹಾಕುತ್ತಾ ಆಕರ್ಷಣೆಯ ಕೇಂದ್ರಬಿಂದುವಾಗಿತ್ತು. ಮಹೇಂದ್ರನ ಜೊತೆ ಕುಮ್ಕಿ ಆನೆಗಳಾಗಿ ಲಕ್ಷ್ಮಿ ಕಾವೇರಿ ಉತ್ತಮ ಸಾಥ್ ನೀಡಿದವು. 2019ರವರೆಗೆ ಅಭಿಮನ್ಯ ಶ್ರೀರಂಗಪಟ್ಟಣದಲ್ಲಿ ಜಂಜೂಸವಾರಿಯ ಸಾರಥ್ಯ ವಹಿಸಿದ್ದ. 2020ರಲ್ಲಿ ಕೊರೊನಾ ಕಾರಣದಿಂದ ದಸರಾ ನಡೆದಿರಲಿಲ್ಲ. 2021ರಲ್ಲಿ ಗೋಪಾಲಸ್ವಾಮಿ ಹೆಸರಿನ ಆನೆಯು ಅಂಬಾರಿ ಹೊತ್ತಿತ್ತು. 2022ರಿಂದ ಮಹೇಂದ್ರ ಅಂಬಾರಿಯ ಸಾರಥ್ಯ ವಹಿಸಿ ಜನರ ಪ್ರೀತಿಗೆ ಪಾತ್ರನಾಗಿದ್ದಾನೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.