ಶ್ರೀರಂಗಪಟ್ಟಣ: ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ, ದಸರಾ ಉತ್ಸವದ ನಿಮಿತ್ತ ಶುಕ್ರವಾರ ನಡೆದ ಕವಿ– ಕಾವ್ಯ ಸಂಭ್ರಮದ ಯುವ ಕವಿಗೋಷ್ಠಿಯಲ್ಲಿ ಮುಡಾ ಹಗರಣ, ಹೆಣ್ಣು ಭ್ರೂಣ ಹತ್ಯೆಯಂತಹ ಗಂಭೀರ ವಿಷಯಗಳು ಪ್ರತಿಧ್ವನಿಸಿದವು.
ಮಂಡ್ಯದ ಜಿ.ಕೆ. ಬಸವರಾಜು ತಮ್ಮ ‘ನಾನೊಂದು ಹೆಣ್ಣು ಜೀವ’ ಕವಿತೆಯಲ್ಲಿ ಹೆಣ್ಣು ಭ್ರೂಣ ಹತ್ಯೆಯ ಕರಾಳತೆಯನ್ನು ತೆರೆದಿಟ್ಟರು. ಹೆಣ್ಣು ಭ್ರೂಣ ಹತ್ಯೆಯಿಂದ ಆಗುತ್ತಿರುವ ಸಾಮಾಜಿಕ ಸಂಘರ್ಷಗಳನ್ನು ಬಿಡಿಸಿಟ್ಟರು. ಕೆ.ಶೆಟ್ಟಹಳ್ಳಿ ಚಂದ್ರಶೇಖರ್ ತಮ್ಮ ‘ಜಗ್ಗಲ್ಲ, ಬಗ್ಗಲ್ಲ’ ಕವಿತೆಯಲ್ಲಿ ಭ್ರಷ್ಟಾಚಾರದ ವಿವಿಧ ಮುಖಗಳನ್ನು ತೋರಿಸಿದರು. ಪ್ರೊ. ಮಂಜುಳಾ ಅವರ ‘ಐಟಿ –ಬಿಟಿ ಸಂಸಾರ’ ಕವಿತೆ ಆಧುನಿಕ ಸಂಸಾರದ ಪಡಿಪಾಟಲುಗಳನ್ನು ಬಿಂಬಿಸಿತು. ವರ್ಕ್ ಫ್ರಂ ಹೋಂ ವೃತ್ತಿ ಮಾಡುವ ಅವಳು ರೂಮಿನಲ್ಲಿ ಅವನು ಹಾಲಿನಲ್ಲಿದ್ದಾರೆ. ಮನೆಯ ಒಲೆ ದೂಳು ಹಿಡಿಯುತ್ತಿದೆ. ಸ್ವಿಗ್ಗಿ, ಜೊಮಾಟೋ ಊಟವೇ ಗತಿಯಾಗಿದೆ ಎಂದರು.
‘ಪರಿಸರ’ ರಮೇಶ್ ಅವರ ‘ಧರೆಯ ಆರ್ತನಾದ’ ಕವಿತೆ ಪ್ರಕೃತಿಯ ಮೇಲೆ ನಡೆಯುತ್ತಿರುವ ದೌರ್ಜಕ್ಕೆ ಕಣ್ಣೀರು ಸುರಿಸಿತು. ಮದ್ದೂರಿನ ಪುಟ್ಟಸ್ವಾಮಿ ಕೋಮು ದ್ವೇಷ ಬಿತ್ತುವವರ ಕೃತ್ಯಕ್ಕೆ ಅಸಹನೆ ವ್ಯಕ್ತಪಡಿಸಿ ‘ಬುದುಕು ಬದಲಾಗಲಿ’ ಎಂದು ಆಶಿಸಿದರು. ಖೈರುನ್ನೀಸಾ ಅವರ ‘ಕೋಮು ಸೌಹಾರ್ದತೆ’ ಕವಿತೆ ವಿವಿಧ ಧರ್ಮ, ಜಾತಿಯ ಜನರು ಸಹ ಬಾಳ್ವೆಯಿಂದ ಬದುಕಬೇಕು ಎಂದು ಒತ್ತಿ ಹೇಳಿತು. ಎಚ್.ಸಿ. ಧನಂಜಯ ತಮ್ಮ ‘ವಸುದೈವ ಕುಟುಂಬಕಂ’ ಕವಿತೆಯಲ್ಲಿ ನಮ್ಮದು ಸರ್ವ ಜನಾಂಗದ ಶಾಂತಿ ತೋಟವಾಗಲಿ ಎಂದು ಹೇಳಿದರು.
ಪ್ರೊ.ಐ.ಆರ್. ಮೂರ್ತಿ ಅವರ ‘ಅಹಲ್ಯಾ’, ಆದಿತ್ಯ ಭಾರದ್ವಾಜ್ ಅವರ ‘ಗೊಲ್ಲನಾಗು’, ನಾಗಮಂಗಲದ ವೆಂಕಟೇಶ್.ಸಿ ಅವರ ‘ಹೆತ್ತವರು’, ಎಂ. ಮಹೇಶ್ ಅವರ ‘ನಾನು ರೈತ’ ಕವಿತೆಗಳು ಗಮನ ಸೆಳೆದವು. ಚೈತನ್ಯ ಸಿ.ಜೆ, ಕೂಡಲಕುಪ್ಪೆ ಸೋಮಶೇಖರ್, ಕಡತನಾಳು ಜಯಶಂಕರ್, ಎಂ.ಪಿ. ಪರಮೇಶ್, ನಾಗರಾಜು, ನೇತ್ರಾವತಿ, ಡಿ. ಚಿತ್ರಾ, ಲಿಖಿತಾ ಪಾಲಹಳ್ಳಿ, ಹರೀಶ್ ಬೆಳವಾಡಿ, ಬಿ.ಟಿ. ದಾಸಪ್ರಕಾಶ್ ಇತರರು ಕವಿತೆ ವಾಚಿಸಿದರು.
ಕವಿ– ಕಾವ್ಯ ಸಂಭ್ರಮದ ಯುವ ಕವಿಗೋಷ್ಠಿಯನ್ನು ಪ್ರಾಂಶುಪಾಲ ಪ್ರೊ.ಎಸ್.ಪಿ. ಪ್ರಸಾದ್ ಉದ್ಘಾಟಿಸಿ ‘ಕವಿತೆಗಳು ಸಾಮಾಜಿಕ ಸಮಸ್ಯೆಗಳನ್ನು ಬಿಂಬಿಸಬೇಕು’ ಎಂದು ಹೇಳಿದರು. ಕಸಾಪ ತಾಲ್ಲೂಕು ಘಟಕದ ಅಧ್ಯಕ್ಷ ಸಿದ್ದಲಿಂಗು ಪ್ರಾಸ್ತಾವಿಕ ಮಾತುಗಳಾಡಿದರು. ಮಾಜಿ ಅಧ್ಯಕ್ಷ ಪುರುಷೋತ್ತಮ, ಗೌರವ ಕಾರ್ಯದರ್ಶಿ ಸಿ. ಸ್ವಾಮಿಗೌಡ, ನಗರ ಘಟಕದ ಅಧ್ಯಕ್ಷ ಎಂ. ಸುರೇಶ್, ಕೋಶಾಧ್ಯಕ್ಷ ಕೆ.ಬಿ. ಬಸವರಾಜು, ಮದ್ದೂರು ತಾಲ್ಲೂಕು ಘಟಕದ ಅಧ್ಯಕ್ಷ ಸುನಿಲ್‌ಕುಮಾರ್, ಮಳವಳ್ಳಿ ತಾಲ್ಲೂಕು ಘಟಕದ ಅಧ್ಯಕ್ಷ ಚೇತನ್‌ಕುಮಾರ್, ಪ್ರೊ. ಬಿ.ಎನ್. ಕವಿತಾ, ದಸಂಸ ಮುಖಂಡ ಗಂಜಾಂ ರವಿಚಂದ್ರ, ಸಿ.ಬಿ. ಉಮಾಶಂಕರ್, ಚುಸಾಪ ತಾಲ್ಲೂಕು ಘಟಕದ ಅಧ್ಯಕ್ಷ ಜಯರಾಂ, ರವಿಕುಮಾರ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.