ADVERTISEMENT

ಶ್ರೀರಂಗಪಟ್ಟಣ: ವೃದ್ಧರು, ಅಂಗವಿಕಲರಿಗೆ ಹತ್ತಿಳಿಯುವ ಸಂಕಟ

2ನೇ ಮಹಡಿಯಲ್ಲಿ ಉಪನೋಂದಣಾಧಿಕಾರಿ ಕಚೇರಿ: ಲಿಫ್ಟ್‌ ಸೌಲಭ್ಯವಿಲ್ಲದೆ ಜನರ ಪರದಾಟ

ಗಣಂಗೂರು ನಂಜೇಗೌಡ
Published 6 ಫೆಬ್ರುವರಿ 2026, 5:49 IST
Last Updated 6 ಫೆಬ್ರುವರಿ 2026, 5:49 IST
ಶ್ರೀರಂಗಪಟ್ಟಣ ಮಿನಿ ವಿಧಾನಸೌಧದ ಎರಡನೇ ಮಹಡಿಯಲ್ಲಿರುವ ಉಪ ನೋಂದಣಾಧಿಕಾರಿ ಕಚೇರಿಗೆ ಜಮೀನು ವಿಕ್ರಯಕ್ಕೆ ಬಂದಿದ್ದ ವೃದ್ಧೆಯನ್ನು ಗಾಲಿ ಕುರ್ಚಿಯ ಸಹಾಯದಿಂದ ಕೆಳಗೆ ಇಳಿಸುತ್ತಿರುವುದು
ಶ್ರೀರಂಗಪಟ್ಟಣ ಮಿನಿ ವಿಧಾನಸೌಧದ ಎರಡನೇ ಮಹಡಿಯಲ್ಲಿರುವ ಉಪ ನೋಂದಣಾಧಿಕಾರಿ ಕಚೇರಿಗೆ ಜಮೀನು ವಿಕ್ರಯಕ್ಕೆ ಬಂದಿದ್ದ ವೃದ್ಧೆಯನ್ನು ಗಾಲಿ ಕುರ್ಚಿಯ ಸಹಾಯದಿಂದ ಕೆಳಗೆ ಇಳಿಸುತ್ತಿರುವುದು   

ಶ್ರೀರಂಗಪಟ್ಟಣ: ಉಪ ನೋಂದಣಾಧಿಕಾರಿ ಕಚೇರಿಯು ಪಟ್ಟಣದ ಮಿನಿ ವಿಧಾನಸೌದ ಎರಡನೇ ಮಹಡಿಯಲ್ಲಿ ಇರುವುದರಿಂದ ವೃದ್ಧರು, ಅಂಗವಿಕಲರು ಮತ್ತು ರೋಗಿಗಳು ಮೆಟ್ಟಿಲುಗಳನ್ನು ಹತ್ತಿ ಇಳಿಯಲು ‍ಪಡಿಪಾಟಲು ಅನುಭವಿಸುತ್ತಿದ್ದಾರೆ.

ಉಪನೋಂದಣಾಧಿಕಾರಿ ಕಚೇರಿಗೆ ಸ್ಥಿರಾಸ್ತಿಗಳ ಕ್ರಮ ಮತ್ತು ವಿಕ್ರಯಕ್ಕೆ ಪ್ರತಿ ದಿನ ನೂರಾರು ಮಂದಿ ಬರುತ್ತಾರೆ. ಹಾಗೆ ಬರುವವರ ಪೈಕಿ ವೃದ್ಧರು, ಅಂಗವಿಕಲರು ಮತ್ತು ಆರೋಗ್ಯ ಸಮಸ್ಯೆಯಿಂದ ಬಳಲುವವರೂ ಇರುತ್ತಾರೆ. ಅಂತಹ ಅಸಹಾಯಕರು ಎರಡನೇ ಮಹಡಿಯವರೆಗೆ ಕಡಿದಾದ ಮೆಟ್ಟಿಲುಗಳನ್ನು ಹತ್ತಿ ಇಳಿಯಲು ತ್ರಾಸವಾಗುತ್ತಿದೆ. ಇತರರ ಸಹಾಯದಿಂದ ಹತ್ತಿ ಇಳಿಯುವ ಅನಿವಾರ್ಯತೆ ಇದೆ.

ಪಾರ್ಶ್ವವಾಯು ಪೀಡಿತರೂ ಈ ಕಚೇರಿಗೆ ಬರುವುದರಿಂದ ಅಂತಹವರನ್ನು ಸ್ಟ್ರೆಚರ್‌ ಮೇಲೆ ಮಲಗಿಸಿ ಹೊತ್ತುಕೊಂಡು ಹೋಗುವ ದೃಶ್ಯಗಳು ಸಾಮಾನ್ಯವಾಗಿದ್ದು ಮರುಕ ಹುಟ್ಟಿಸುತ್ತವೆ.

ADVERTISEMENT

ಉಪನೋಂದಣಾಧಿಕಾರಿ ಕಚೇರಿ ಇರುವ ಅಂತಸ್ತಿನಲ್ಲಿ ದೂಳು, ಕಸ ಹರಡಿರುತ್ತದೆ. ಅಲ್ಲಿನ ಅನೈರ್ಮಲ್ಯ ನೋಡಿ ಬೇರೆ ಕಡೆಯಿಂದ ಜನರು ಮೂಗು ಮುರಿಯುತ್ತಾರೆ. ಅಲ್ಲಿ ಎರಡು ಕುರ್ಚಿಗಳು ಇದ್ದರೂ ಅವು ಹಾಳಾಗಿವೆ. ಹೀಗಾಗಿ ನೋಂದಣಿಗೆ ಬರುವ ಜನರು ತಮ್ಮ ಸರದಿ ಬರುವವರೆಗೆ ಗಂಟೆಗಟ್ಟಲೆ ನಿಲ್ಲಬೇಕಾದ ಪರಿಸ್ಥಿತಿ ಇದೆ. ವಯೋವೃದ್ಧರು ಕುಳಿತುಕೊಳ್ಳಲು ವ್ಯವಸ್ಥಿತವಾದ ಆಸನ ಸೌಲಭ್ಯ ಕಲ್ಪಿಸಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ. 

‘ಮಿನಿ ವಿಧಾನಸೌಧದ ಎರಡನೇ ಅಂತಸ್ತಿನಲ್ಲಿರುವ ಉಪ ನೋಂದಣಾಧಿಕಾರಿ ಕಚೇರಿಗೆ ಬರುವ ವೃದ್ಧರು, ರೋಗಿಗಳು ಮತ್ತು ಅಂಗವಿಕಲರು ಹತ್ತಿ ಇಳಿಯಲು ಕಷ್ಟವಾಗುತ್ತಿದೆ. ಈ ಕಚೇರಿಯನ್ನು ಕೆಳಗಿನ ಕೊಠಡಿಗೆ ಸ್ಥಳಾಂತರಿಸಲು ಅಥವಾ ಲಿಫ್ಟ್‌ ಅಳವಡಿಸಲು ಕ್ರಮ ವಹಿಸುವಂತೆ ಹಲವು ಬಾರಿ ಮನವಿ ಮಾಡಿದ್ದೇವೆ. ಹತ್ತು ವರ್ಷಗಳಿಂದ ಈ ಬೇಡಿಕೆ ಇಡುತ್ತಿದ್ದರೂ ಅಧಿಕಾರಿಗಳು ಗಂಭೀರವಾಗಿ ಪರಿಗಣಿಸುತ್ತಿಲ್ಲ’ ಎಂದು ರೈತ ಸಂಘದ ತಾಲ್ಲೂಕು ಘಟಕದ ಮಾಜಿ ಅಧ್ಯಕ್ಷ ಮರಳಾಗಾಲ ಕೃಷ್ಣೇಗೌಡ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಕಚೇರಿ ಸ್ಥಳಾಂತರಕ್ಕೆ ಒತ್ತಾಯ

ಮಿನಿ ವಿಧಾನಸೌಧ ನಿರ್ಮಾಣಗೊಂಡು ಒಂದೂವರೆ ದಶಕ ಕಳೆದಿದ್ದು ಅಂದಿನಿಂದಲೂ ಉಪ ನೋಂದಣಾಧಿಕಾರಿ ಕಚೇರಿ ಎರಡನೇ ಅಂತಸ್ತಿನಲ್ಲೇ ಕಾರ್ಯನಿರ್ವಹಿಸುತ್ತಿದೆ. ರೈತಸಂಘ ಮತ್ತು ಕನ್ನಡಪರ ಸಂಘಟನೆಗಳ ಮುಖಂಡರು ಉಪ ನೋಂದಣಾಧಿಕಾರಿ ಕಚೇರಿಯನ್ನು ತಹಶೀಲ್ದಾರ್ ಕಚೇರಿಯ ಪಕ್ಕದ ಕೊಠಡಿಗೆ ಸ್ಥಳಾಂತರಿಸುವಂತೆ ಒತ್ತಾಯ ಮಾಡುತ್ತಲೇ ಬಂದಿದ್ದಾರೆ. ಲಿಫ್ಟ್‌ ಅಳವಡಿಸುವಂತೆ ಸಲಹೆಗಳೂ ಬಂದಿವೆ. ಆದರೆ ಜನರ ಬೇಡಿಕೆ ಇದುವರೆಗೆ ಸಾಕಾರವಾಗಿಲ್ಲ. ಹಾಗಾಗಿ ಇಲ್ಲಿಗೆ ಬರುವ ದೈಹಿಕ ದುರ್ಬಲರ ಬವಣೆ ಮುಂದುವರಿದಿದೆ.

ಲಿಫ್ಟ್‌ ಅಳವಡಿಸಲು ಕ್ರಮ: ತಹಶೀಲ್ದಾರ್‌

 ‘ಉಪ ನೋಂದಣಾಧಿಕಾರಿ ಕಚೇರಿಗೆ ವೃದ್ಧರು ಅಂಗವಿಕಲರು ರೋಗಿಗಳು ಬಂದು ಹೋಗಲು ಸಮಸ್ಯೆಯಾಗಿರುವುದು ನಿಜ. ಸದರಿ ಕಚೇರಿಯನ್ನು ಕೆಳಗಿನ ಕೊಠಡಿಗೆ ಸ್ಥಳಾಂತರಿಸಲು ಸೂಕ್ತ ಸ್ಥಳಾವಕಾಶ ಇಲ್ಲ.

ಲಿಫ್ಟ್‌ ಅಳವಡಿಸುವುದೊಂದೇ ಪರಿಹಾರ. ಸಮಸ್ಯೆಯನ್ನು ಶಾಸಕ ರಮೇಶ ಬಂಡಿಸಿದ್ದೇಗೌಡ ಅವರ ಗಮನಕ್ಕೆ ತರಲಾಗಿದೆ. ಲಿಫ್ಟ್‌ ಅಳವಡಿಸಲು ಅಗತ್ಯವಾದ ತಂತ್ರಜ್ಞರ ವರದಿ ಮತ್ತು ಅಂದಾಜು ವೆಚ್ಚದ ವರದಿಯನ್ನು ನಿರ್ಮಿತಿ ಕೇಂದ್ರಕ್ಕೆ ಕಳುಹಿಸಿಕೊಡುವಂತೆ ಅವರು ಸೂಚಿಸಿದ್ದಾರೆ. ಈ ಪ್ರಕ್ರಿಯೆ ಚಾಲ್ತಿಯಲ್ಲಿದೆ’ ಎಂದು ತಹಶೀಲ್ದಾರ್ ಚೇತನಾ ಯಾದವ್ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.