ADVERTISEMENT

ಶ್ರೀರಂಗಪಟ್ಟಣ: ಕರಿಘಟ್ಟದಲ್ಲಿ ಕಳೆಗಟ್ಟಿದ ‘ಚಾರಣ ದಸರಾ’

ಬೆಟ್ಟವೇರಿದ ಜಿಲ್ಲಾಧಿಕಾರಿ; ಅಧಿಕಾರಿಗಳು ಸಾಥ್‌

​ಪ್ರಜಾವಾಣಿ ವಾರ್ತೆ
Published 21 ಅಕ್ಟೋಬರ್ 2020, 12:51 IST
Last Updated 21 ಅಕ್ಟೋಬರ್ 2020, 12:51 IST
ಶ್ರೀರಂಗಪಟ್ಟಣ ತಾಲ್ಲೂಕು ಕರಿಘಟ್ಟದಲ್ಲಿ ದಸರಾ ನಿಮಿತ್ತ ಬುಧವಾರ ನಡೆದ ಚಾರಣದಲ್ಲಿ ಜಿಲ್ಲಾಧಿಕಾರಿ ಡಾ.ಎಂ.ವಿ. ವೆಂಕಟೇಶ್‌ ಇತರ ಅಧಿಕಾರಿಗಳ ಜತೆ ಹೆಜ್ಜೆ ಹಾಕಿದರು
ಶ್ರೀರಂಗಪಟ್ಟಣ ತಾಲ್ಲೂಕು ಕರಿಘಟ್ಟದಲ್ಲಿ ದಸರಾ ನಿಮಿತ್ತ ಬುಧವಾರ ನಡೆದ ಚಾರಣದಲ್ಲಿ ಜಿಲ್ಲಾಧಿಕಾರಿ ಡಾ.ಎಂ.ವಿ. ವೆಂಕಟೇಶ್‌ ಇತರ ಅಧಿಕಾರಿಗಳ ಜತೆ ಹೆಜ್ಜೆ ಹಾಕಿದರು   

ಶ್ರೀರಂಗಪಟ್ಟಣ: ದಸರಾ ಉತ್ಸವದ ನಿಮಿತ್ತ ತಾಲ್ಲೂಕಿನ ಕರಿಘಟ್ಟದಲ್ಲಿ ಬುಧವಾರ ಚಾರಣ ದಸರಾ ಸಡಗರ ಸಂಭ್ರಮದಿಂದ ನಡೆಯಿತು.

ಪಟ್ಟಣ ಹಾಗೂ ಸುತ್ತಮುತ್ತಲಿನ ನೂರಾರು ಮಂದಿ ಚಾರಣದಲ್ಲಿ ಪಾಲ್ಗೊಂಡಿದ್ದರು. ಲೋಕಪಾವನಿ ನದಿ ದಡದಿಂದ ಸಮುದ್ರ ಮಟ್ಟದಿಂದ ಸುಮಾರು 4 ಸಾವಿರ ಅಡಿ ಎತ್ತರದಲ್ಲಿರುವ ಕರಿಘಟ್ಟದ ತುತ್ತತುದಿಯವರೆಗೆ ವಿದ್ಯಾರ್ಥಿಗಳು, ವಿವಿಧ ಇಲಾಖೆಗಳ ನೌಕರರು, ಸಂಘ ಸಂಸ್ಥೆಗಳ ಪ್ರತಿನಿಧಿಗಳು ಚಾರಣ ನಡೆಸಿದರು. 5 ವರ್ಷದ ಬಲಕಿನಿಂದ 75 ವರ್ಷ ವೃದ್ಧರವರೆಗೆ ವಿವಿಧ ವಯೋಮಾನದ ಪುರುಷ ಮತ್ತು ಮಹಿಳೆಯರು ಚಾರಣದಲ್ಲಿ ದುಡುದುಡು ಓಡಿದರು.

ಸುಮಾರು ಒಂದೂವರೆ ಕಿ.ಮೀ. ದೂರದ ಬೆಟ್ಟದ ತುದಿಗೆ ನಡೆದು ತಾಮುಂದು ನಾಮುಂದು ಎಂದು ಸರಬರ ಬೆಟ್ಟವೇರಿದರು. ಶಿಖರದಲ್ಲಿ ನಿಂತು ತಂಗಾಳಿಗೆ ಮೈಯೊಡ್ಡಿ ಪುಳಕಿತರಾದರು. ಕುದುರೆ ಲಾಯದ ಗೋಪುರದ ಬಳಿ ಕೋಡುಗಲ್ಲುಗಳ ಮೇಲೆ ಹತ್ಯಿ ಬಳುಕುತ್ತಾ ಹರಿಯುವ ಕಾವೇರಿ ನದಿ, ಟಿಪ್ಪು ಸಮಾಧಿ ಗುಂಬಸ್‌, ಶ್ರೀರಂಗನಾಥಸ್ವಾಮಿ ದೇವಾಲಯ, ಜಾಮಿಯಾ ಮಸೀದಿ, ಕೆಆರ್‌ಎಸ್‌ ಅಣೆಕಟ್ಟೆ, ಕುಂತಿಬೆಟ್ಟ, ಮೇಲುಕೋಟೆ ಬೆಟ್ಟದ ಸರಹದ್ದು, ಮೈಸೂರು ನಗರಗಳನ್ನು ಕಣ್ತುಂಬಿಕೊಂಡರು. ಫೋಟೋ, ಸೆಲ್ಫಿ ತೆಗೆದುಕೊಂಡು ಖುಷಿಪಟ್ಟರು.

ADVERTISEMENT

ಹೆಜ್ಜೆ ಹಾಕಿದ ಡಿಸಿ: ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಜಿಲ್ಲಾಧಿಕಾರಿ ಡಾ.ಎಂ.ವಿ. ವೆಂಕಟೇಶ್‌ ಚಾರಣಿಗರು ನಡೆದ ಹಾದಿಯಲ್ಲಿ ತಾವೂ ನಡೆದರು. ಬೆಟ್ಟದ ಮೇಲಿಂದ ಕಾಣುವ ನಯನ ಮನೋಹರ ದೃಶ್ಯವನ್ನು ಕಂಡು ಉಲ್ಲಸಿತರಾದರು. ಘಟ್ಟದಿಂದ ದೂರದಲ್ಲಿ ಕಾಣುವ ಹಲವು ಸ್ಥಳಗಳನ್ನು ಸ್ಥಳೀಯರಿಂದ ಕೇಳಿ ತಿಳಿದುಕೊಂಡರು. ಆಲದ ವನ, ಪರಗೋಲಾ ಮಾರ್ಗವಾಗಿ ಕೆಂಗಲ್ಲು ವರೆಗೆ ಹೆಜ್ಜೆ ಹಾಕಿದರು. ಉಪ ವಿಭಾಗಾಧಿಕಾರಿ ಬಿ.ಸಿ. ಶಿವಾನಂದಮೂರ್ತಿ, ತಹಶೀಲ್ದಾರ್‌ ಎಂ.ವಿ. ರೂಪಾ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕಿ ಅನಿತಾ, ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಎಂ.ವಿ. ವೆಂಕಟೇಶ್‌, ಆಚೀವರ್ಸ್‌ ಅಕಾಡೆಮಿ ಮುಖ್ಯಸ್ಥ ಡಾ.ರಾಘವೇಂದ್ರ, ಡಾ.ಕೆ.ವೈ. ಶ್ರೀನಿವಾಸ್‌ ಇತರರು ಕೂಡ ಜಿಲ್ಲಾಧಿಕಾರಿಗಳ ಜತೆ ಚಾರಣ ನಡೆಸಿದರು.

ಕ್ರೀಡೆ ದೈಹಿಕ, ಮಾನಸಿಕ ಮತ್ತು ಸಾಮಾಜಿಕ ಸಮತೋಲನಕ್ಕೆ ಪೂರಕವಾಗಿದೆ. ಕ್ರೀಡಾಪಟುಗಳಲ್ಲಿ ಸೋಲನ್ನು ಜೀರ್ಣಿಸಿಕೊಳ್ಳುವ ವಿಶೇಷ ಶಕ್ತಿ ಇರುತ್ತದೆ. ಕೋವಿಡ್‌ ಸೋಲಿಸಲು ಎಲ್ಲರೂ ಸೇನಾನಿಗಳಂತೆ ಹೋರಾಡಬೇಕು ಎಂದು ಜಿಲ್ಲಾಧಿಕಾರಿ ಎಂ.ವಿ. ವೆಂಕಟೇಶ್‌ ಹೇಳಿದರು. ಗುರುವಾರ ನಡೆಯುವ ಎರಡನೇ ದಿನದ ಚಾರಣದಲ್ಲಿ ಮತ್ತೆ ಪಾಲ್ಗೊಳ್ಳುವುದಾಗಿ ಅವರು ತಿಳಿಸಿದರು.

ಯೋಗ ದಸರಾ: ಕರಿಘಟ್ಟದಲ್ಲಿ ಯೋಗ ದಸರಾ ಅ.22ರಂದು ನಡೆಯಲಿದೆ. ಬೆಳಿಗ್ಗೆ 8 ಗಂಟೆಗೆ ಯೋಗಪಟುಗಳು ಶ್ರೀನಿವಾಸ ದೇವಾಲಯ ಆವರಣದಲ್ಲಿ ಯೋಗ ಪ್ರದರ್ಶನ ನೀಡಲಿದ್ದಾರೆ. ಅದಕ್ಕೂ ಮುನ್ನ ಮುಂಜಾನೆ 7 ಗಂಟೆಗೆ ಗುರುವಾರ ಕೂಡ ಚಾರಣ ಹಮ್ಮಿಕೊಳ್ಳಲಾಗಿದೆ ಎಂದು ದಸರಾ ಉತ್ಸವದ ಉಸ್ತುವಾರಿ ಅಧಿಕಾರಿಯೂ ಆದ ಪಾಂಡವಪುರ ಉಪ ವಿಭಾಗಾಧಿಕಾರಿ ಬಿ.ಸಿ. ಶಿವಾನಂದಮೂರ್ತಿ ತಿಳಿಸಿದರು.

‌ಸಂಗೀತ ಸಂಜೆ: ಅ.23ರಂದು ಪಟ್ಟಣದ ಮುಖ್ಯ ಬೀದಿಯಲ್ಲಿರುವ ಕ್ಷಣಾಂಭಿಕಾ ದೇವಾಲಯದಲ್ಲಿ ಮಧ್ಯಾಹ್ನ 2.30ರಿಂದ ಸಂಜೆ 6 ಗಂಟೆ ವರೆಗೆ ಸ್ಥಳೀಯ ಕಲಾವಿದರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಸಂಜೆ 6 ಗಂಟೆಯಿಂದ ಐತಿಹಾಸಿಕ ಬತೇರಿಯಲ್ಲಿ ಸಂಗೀತ ಸಂಜೆ ಕಾರ್ಯಕ್ರಮ ಏರ್ಪಡಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.