ಶ್ರೀರಂಗಪಟ್ಟಣ: ಸ್ವಾತಂತ್ರ್ಯ ಚಳವಳಿಯ ನೇತಾರ ಮಹಾತ್ಮ ಗಾಂಧಿ ಪಟ್ಟಣಕ್ಕೆ ಭೇಟಿ ನೀಡಿ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಭಾಷಣ ಮಾಡಿರುವ ಮಹತ್ವದ ಸ್ಥಳ ಪಾಳು ಬಿದ್ದಿದೆ.
ಸ್ವಾತಂತ್ರ್ಯ ಚಳವಳಿ ತೀವ್ರತೆ ಪಡೆದುಕೊಳ್ಳುತ್ತಿದ್ದ ಸಂದರ್ಭದಲ್ಲಿ ಜನ ಜಾಗೃತಿ ಮೂಡಿಸಲು ಗಾಂಧೀಜಿ ಮೈಸೂರು ಪ್ರಾಂತ್ಯಕ್ಕೆ ಭೇಟಿ ನೀಡಿದ್ದ ಸಂದರ್ಭದಲ್ಲಿ, 1927ರ ಜುಲೈ 22ರಂದು ಇಲ್ಲಿಗೆ ಆಗಮಿಸಿದ್ದರು. ಪಟ್ಟಣದ ತಾಲ್ಲೂಕು ಕಚೇರಿ ಎದುರಿನ ಕಂದಾಯ ಇಲಾಖೆ ಅಧಿಕಾರಿಗಳ ವಸತಿ ಗೃಹದ ಮುಂದೆ ನಿಂತು ಸ್ವಾತಂತ್ರ್ಯ ಚಳವಳಿಯಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವಂತೆ ಕರೆ ನೀಡಿದ್ದರು.
ಗಾಂಧೀಜಿ ಅವರು ಪಟ್ಟಣಕ್ಕೆ ಭೇಟಿ ನೀಡಿ ಭಾಷಣ ಮಾಡಿರುವ ಸಂಗತಿ ಸ್ಥಳೀಯರಿಗೆ ಮಾಹಿತಿಯೇ ಇಲ್ಲ ಎಂಬುದು ಅಚ್ಚರಿ ಮೂಡಿಸುತ್ತದೆ. ಅವರು ಇಲ್ಲಿಗೆ ಭೇಟಿ ನೀಡಿ 98 ವರ್ಷಗಳಾಗಿವೆ. ಈ ಬಗ್ಗೆ ತಾಲ್ಲೂಕು ಆಡಳಿತ ಇದುವರೆಗೆ ಮಾಹಿತಿ ಸಂಗ್ರಹಿಸಿಲ್ಲ. ಗಾಂಧೀಜಿ ಭಾಷಣ ಮಾಡಿದ ಸ್ಥಳದಲ್ಲಿರುವ ಕಟ್ಟಡ ತೀರಾ ಶಿಥಿಲವಾಗಿದೆ. ಇಂದೋ ನಾಳೆಯೋ ಬೀಳುವ ಸ್ಥಿತಿಯಲ್ಲಿದೆ.
ಪಟ್ಟಣದ ಪಶ್ಚಿಮ ವಾಹಿನಿಯಲ್ಲಿ, ಕಾವೇರಿ ನದಿಯಲ್ಲಿ ಗಾಂಧೀಜಿ ಅವರ ಚಿತಾಭಸ್ಮವನ್ನು 1948ರ ಫೆ.12ರಂದು ವಿಸರ್ಜನೆ ಮಾಡಿರುವುದು ಇಲ್ಲಿನ ಮತ್ತೊಂದು ವಿಶೇಷ. ಅಂದಿನ ಮೈಸೂರು ರಾಜ್ಯದ ಮುಖ್ಯಮಂತ್ರಿ ಕೆ.ಸಿ. ರೆಡ್ಡಿ ನೇತೃತ್ವದಲ್ಲಿ ಇಲ್ಲಿನ ಗಾಂಧೀಜಿ ಅವರ ಅಸ್ತಿಯನ್ನು ವಿಸರ್ಜನೆ ಮಾಡಲಾಗಿದ್ದು, ಸ್ಮಾರಕವನ್ನೂ ಸ್ಥಾಪಿಸಲಾಗಿದೆ. ಬಾಪೂಜಿ ಅವರ ಅಸ್ತಿ ವಿಸರ್ಜನೆಯ ನಿಮಿತ್ತ 1950ರಿಂದ ಪಟ್ಟಣದಲ್ಲಿ ಗಾಂಧೀಜಿ ವಿಚಾರ ಪ್ರಣೀತ ‘ಸರ್ವೋದಯ ಮೇಳ’ ನಡೆಯುತ್ತಾ ಬಂದಿದೆ.
ಗಾಂಧೀಜಿ ಭೇಟಿ ಕೊಟ್ಟಿದ್ದರು ಎಂಬುದು ಹೆಮ್ಮೆಯ ಸಂಗತಿ. 1927ರಲ್ಲಿ ಭಾಷಣ ಮಾಡಿದ ಸ್ಥಳವನ್ನು ಅಭಿವೃದ್ಧಿಪಡಿಸುವ ಜತೆಗೆ ಗಾಂಧೀಜಿ ಪುತ್ಥಳಿ ಸ್ಥಾಪಿಸಲಾಗುವುದುರಮೇಶ ಬಂಡಿಸಿದ್ದೇಗೌಡ ಶಾಸಕ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.