ಶ್ರೀರಂಗಪಟ್ಟಣ: ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲು ಲಂಚ ಪಡೆಯಲಾಗುತ್ತಿದೆ ಎಂದು ಆರೋಪಿಸಿ ರೈತಸಂಘ ಹಾಗೂ ಇತರ ಸಂಘಟನೆಗಳ ಕಾರ್ಯಕರ್ತರು ಗುರುವಾರ ಪ್ರತಿಭಟನೆ ನಡೆಸಿದರು.
ಆಸ್ಪತ್ರೆಯ ಎದುರು ಪ್ರತಿಭಟನೆ ನಡೆಸಿ ವೈದ್ಯರ ವಿರುದ್ಧ ಘೋಷಣೆ ಕೂಗಿದರು. ‘ಆಸ್ಪತ್ರೆಯಲ್ಲಿ ಹೆರಿಗೆ ಮತ್ತು ಶಸ್ತ್ರಚಿಕಿತ್ಸೆಗೆ ಹಣ ಪಡೆಯುತ್ತಿದ್ದಾರೆ. ರೋಗಿಗಳಿಗೆ ಸಣ್ಣ ಸಮಸ್ಯೆ ಇದ್ದರೂ ಖಾಸಗಿ ಆಸ್ಪತ್ರೆಗಳಿಗೆ ಕರೆದೊಯ್ಯುವಂತೆ ಹೇಳುತ್ತಿದ್ದಾರೆ. ಔಷಧಗಳನ್ನು ಹೊರಗೆ ಖರೀದಿಸಿ ಎಂದು ಚೀಟಿ ಬರೆಯುತ್ತಿದ್ದಾರೆ’ ಎಂದು ರೈತ ಸಂಘದ ತಾಲ್ಲೂಕು ಘಟಕದ ಸಂಚಾಲಕ ಪಾಂಡು ಆರೋಪಿಸಿದರು.
‘ ವೈದ್ಯರು ಹಾಗೂ ವೈದ್ಯಕೀಯ ಸಿಬ್ಬಂದಿ ಸಕಾಲಕ್ಕೆ ಕರ್ತವ್ಯಕ್ಕೆ ಬರುತ್ತಿಲ್ಲ. ಮಹಿಳಾ ವೈದ್ಯರೊಬ್ಬರು ರೋಗಿಗಳನ್ನು ದೂರದಿಂದಲೇ ನೋಡಿ ಕಳುಹಿಸುತ್ತಿದ್ದಾರೆ. ಸಮನ್ವಯತೆ ಇಲ್ಲದ ಕಾರಣ ರೋಗಿಗಳು ಬವಣೆಪಡುತ್ತಿದ್ದಾರೆ’ ಎಂದು ಮುಖಂಡ ಮರಳಾಗಾಲ ಕೃಷ್ಣೇಗೌಡ ದೂರಿದರು.
ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಡಾ.ವಿಜಯಲಕ್ಷ್ಮಿ, ‘ಆಸ್ಪತ್ರೆಯಲ್ಲಿ ಲಭ್ಯ ಔಷಧಗಳನ್ನು ರೋಗಿಗಳಿಗೆ ಕೊಡಲಾಗುತ್ತಿದೆ. ಸ್ಕ್ಯಾನಿಂಗ್ ವ್ಯವಸ್ಥೆ ಇಲ್ಲದ ಕಾರಣ ಹೊರಗೆ ಮಾಡಿಸುವಂತೆ ತಿಳಿಸಲಾಗುತ್ತಿದೆ. ವೈದ್ಯರು ಅಥವಾ ವೈದ್ಯಕೀಯ ಸಿಬ್ಬಂದಿ ಲಂಚ ಪಡೆಯುವ ಬಗ್ಗೆ ಖಚಿತ ದಾಖಲೆ ನೀಡಿದರೆ ಕ್ರಮ ಕೈಗೊಳ್ಳಲಾಗುವುದು’ ಎಂದು ಹೇಳಿದರು.
ಕೃಷಿಕ ಸಮಾಜದ ತಾಲ್ಲೂಕು ಘಟಕದ ಅಧ್ಯಕ್ಷ ಕಡತನಾಳು ಬಾಲಕೃಷ್ಣ, ರೈತ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಶಂಭೂಗೌಡ, ಕಾರ್ಯದರ್ಶಿ ಶಶಿಧರ್, ಸರ್ವೋದಯ ಕರ್ನಾಟಕ ಪಕ್ಷದ ಅಧ್ಯಕ್ಷ ಬಿ.ಎಸ್. ರಮೇಶ್, ದಸಂಸ ಮುಖಂಡ ಗಂಜಾಂ ರವಿಚಂದ್ರ, ದೊಡ್ಡಪಾಳ್ಯ ಜಯರಾಮೇಗೌಡ, ಡಿ.ಎಂ. ಕೃಷ್ಣೇಗೌಡ, ನಾಗರಾಜು, ಶಂಕರೇಗೌಡ, ಪ್ರಿಯಾ ರಮೇಶ್, ಮರಳಾಗಾಲ ಮಂಜುನಾಥ್, ಏಜಾಸ್ ಪಾಷ, ಶಂಕರ್ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.