
ಶ್ರೀರಂಗಪಟ್ಟಣ: ಈ ಐತಿಹಾಸಿಕ ಪಟ್ಟಣದ ಶ್ರೀಮಂತ ಪರಂಪರೆಯನ್ನು ಧ್ವನಿ ಮತ್ತು ಬೆಳಕು ಯೋಜನೆ ಮೂಲಕ ಪ್ರವಾಸಿಗರಿಗೆ ತಿಳಿಸಲು ಸರ್ಕಾರ ರೂಪಿಸಿದ ಮಹತ್ವದ ’ಧ್ವನಿ ಮತ್ತು ಬೆಳಕು ಯೋಜನೆ’ ಸ್ಥಗಿತಗೊಂಡಿದೆ.
ಪಟ್ಟಣದ ಆನೆ ಕೋಟೆ ದ್ವಾರದ ಬಳಿ ಎರಡೂವರೆ ಎಕರೆ ಪ್ರದೇಶದಲ್ಲಿ ಕೋಟೆ, ಬುರುಜು, ಕಂದಕಗಳನ್ನು ಒಳಗೊಂಡಂತೆ ರೂಪಿಸಿದ್ದ ಈ ಯೋಜನೆ ಸಂಪೂರ್ಣ ನಿಂತು ಹೋಗಿದೆ. ಪಟ್ಟಣವನ್ನು ರಾಜಧಾನಿ ಮಾಡಿಕೊಂಡು ಆಳಿದ ಒಡೆಯರ್ ದೊರೆಗಳು, ಹೈದರ್ ಮತ್ತು ಟಿಪ್ಪು ಸುಲ್ತಾನ್ ಕಾಲದ ಐತಿಹಾಸಿಕ ಘಟನಾವಳಿಗಳನ್ನು ಧ್ವನಿ ಮತ್ತು ಬೆಳಕಿನ ಸಂಯೋಜನೆಯಲ್ಲಿ ತಿಳಿಸುವ ಕಾರ್ಯಕ್ರಮದ ಮೇಲೆ ಕಾರ್ಮೋಡ ಕವಿದಿದೆ.
2014ರಲ್ಲಿ ಆರಂಭವಾದ ಈ ಯೋಜನೆ ಕೆಲವು ದಿನಗಳ ಕಾಲ ಚೆನ್ನಾಗಿಯೇ ನಡೆಯುತ್ತಿತ್ತು. ಚಿತ್ರನಟಿ ದಿವಂಗತ ಜಯಂತಿ ಅವರ ಪುತ್ರ ಕೃಷ್ಣಕುಮಾರ್ ಮತ್ತು ನಟ ಹಾಗೂ ನಿರ್ದೇಶಕ ಟಿ.ಎಸ್. ನಾಗಾಭರಣ ಅವರ ನೇತೃತ್ವದಲ್ಲಿ, ₹3 ಕೋಟಿ ವೆಚ್ಚದಲ್ಲಿ ಈ ಯೋಜನೆಯನ್ನು ಸಿದ್ಧಪಡಿಸಲಾಗಿತ್ತು. ಆಸನಗಳ ವ್ಯವಸ್ಥೆಗಾಗಿ ಪ್ರವಾಸೋದ್ಯಮ ಇಲಾಖೆ ಪ್ರತ್ಯೇಕವಾಗಿ ₹50 ಲಕ್ಷ ಖರ್ಚು ಮಾಡಿತ್ತು.
ಸಂಜೆ 7 ಗಂಟೆಯಿಂದ ಪ್ರತಿ 40 ನಿಮಿಷಗಳಿಗೆ ಒಮ್ಮೆ ಮೂರು ಪ್ರದರ್ಶನಗಳು ನಡೆಯುತ್ತಿದ್ದವು. ಇನ್ನೋವೇಟಿವ್ ಲೈಟಿಂಗ್ಸ್ ಸಂಸ್ಥೆಯ ಟೆಂಡರ್ ಅವಧಿ ಫೆಬ್ರುವರಿಗೆ ಮುಗಿದಿದ್ದು, ಪ್ರವಾಸೋದ್ಯಮ ಇಲಾಖೆಯೇ ಸಿಬ್ಬಂದಿಯನ್ನು ನಿಯೋಜಿಸಿ ಕಾರ್ಯಕ್ರಮ ನಡೆಸುತ್ತಿತ್ತು. ತಲಾ ₹100 ಪ್ರವೇಶ ಶುಲ್ಕ ನಿಗದಿ ಮಾಡಲಾಗಿತ್ತು. ಆರಂಭದಲ್ಲಿ ಸಾಕಷ್ಟು ಪ್ರವಾಸಿಗರು ಕಾರ್ಯಕ್ರಮ ವೀಕ್ಷಣೆ ಬರುತ್ತಿದ್ದರು.
ಈಚಿನ ದಿನಗಳಲ್ಲಿ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿ ಇದೀಗ ಸಂಪೂರ್ಣ ನಿಂತು ಹೋಗಿದೆ. ವಿದ್ಯುತ್ ಶುಲ್ಕ ಪಾವತಿಸದ ಕಾರಣ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ. ಜನರೇಟರ್ ಬಳಸಿ ಕಾರ್ಯಕ್ರಮ ನಡೆಸಿದರೂ ಪ್ರವಾಸಿಗರು ಬಾರದೆ ನಷ್ಟ ಉಂಟಾಗಿದೆ. ಸಿಬ್ಬಂದಿಯ ಸಂಬಳ ಮತ್ತು ಡೀಸೆಲ್‌ಗೂ ವೆಚ್ಚ ಭರಿಸಲೂ ಕಷ್ಟವಾಗಿದೆ.
ಕಳೆ ಗಿಡಗಳ ಕಾರುಬಾರು:
ಈ ಯೋಜನೆಗಾಗಿ ಶ್ರೀರಂಗನಾಥಸ್ವಾಮಿ ದೇಗುಲ, ಜಾಮಿಯಾ ಮಸೀದಿ, ಡವ್‌ಕೋಟ್, ಅರಮನೆ ಇತರ ಸ್ಮಾರಕಗಳ ಮಾದರಿಗಳನ್ನು ಇಲ್ಲಿ ನಿರ್ಮಿಸಲಾಗಿದ್ದು, ನಿರ್ವಹಣೆಯ ಕೊರತೆಯಿಂದ ಅವುಗಳ ಮೇಲೆ ಮುಳ್ಳು ಗಿಡಗಳು ಆಳೆತ್ತರ ಬೆಳೆದಿವೆ. ಪಾರ್ಥೇನಿಯಂ ಇತರ ಕಳೆಗಿಡಗಳ ಬೆಳೆದು ನಿಂತಿವೆ. ಹಾವು, ಹಲ್ಲಿಗಳು ಹರಿದಾಡುತ್ತಿವೆ. ವಿದ್ಯುತ್ ದೀಪದ ಯಂತ್ರೋಪಕರಣಗಳು ತುಕ್ಕು ಹಿಡಿಯುತ್ತಿವೆ. ಇಡೀ ಪ್ರದೇಶದ ಹಸು, ಎಮ್ಮೆಗಳ ಆಡುಂಬೊಲವಾಗಿದೆ. ಕಂದಕದಲ್ಲಿ ಕೊಳಚೆ ನೀರು ಮಡುಗಟ್ಟಿ ನಿಂತಿದ್ದು ದುರ್ವಾಸನೆ ಬೀರುತ್ತಿದೆ.
‘ಧ್ವನಿ ಮತ್ತು ಬೆಳಕು ವೀಕ್ಷಣೆಗೆ ಪ್ರವಾಸಿಗರು ಬರುತ್ತಿಲ್ಲ. ಹಗಲಿನಲ್ಲಿ ಸ್ಮಾರಕಗಳ ವೀಕ್ಷಣೆಗೆ ತಲಾ ₹25 ಶುಲ್ಕ ನಿಗದಿ ಮಾಡಲಾಗಿದೆ. ಅದಕ್ಕೂ ದಿನದಲ್ಲಿ ಐದಾರು ಮಂದಿ ಮಾತ್ರ ಬರುತ್ತಿದ್ದಾರೆ–ಮಹಮದ್ ಇಸ್ಮಾಯಿಲ್ ಮೇಲ್ವಿಚಾರಕ ಶ್ರೀರಂಗಪಟ್ಟಣ
ದುರಸ್ತಿ ಕಾರ್ಯಕ್ಕೆ ₹6 ಲಕ್ಷಕ್ಕೆ ಬೇಡಿಕೆ
‘ಬೆಂಗಳೂರಿನ ಇನ್ನೋವೇಟಿವ್ ಲೈಟಿಂಗ್ಸ್ ಸಂಸ್ಥೆಯ ಅವಧಿ ಮುಗಿದಿದ್ದು ಎರಡು ಬಾರಿ ಟೆಂಡರ್ ಕರೆಯಲಾಗಿದೆ. ಯಾರೂ ಆಸಕ್ತಿ ತೋರಿಸಿಲ್ಲ. ಖಾಸಗಿ ಸಂಸ್ಥೆಗಳ ಪ್ರಾಯೋಕತ್ವದಲ್ಲಿ ಕಾರ್ಯಕ್ರಮ ನಡೆಸಲು ಚಿಂತನೆ ನಡೆದಿದೆ. ಸ್ವಚ್ಛತೆ ಮತ್ತು ದುರಸ್ತಿ ಕಾರ್ಯಕ್ಕೆ ₹5ಲಕ್ಷದಿಂದ ₹6 ಲಕ್ಷ ಹಣದ ಅಗತ್ಯವಿದ್ದು ಕೇಂದ್ರ ಕಚೇರಿಗೆ ಬೇಡಿಕೆ ಸಲ್ಲಿಸಲಾಗಿದೆ’ ಎಂದು ಪ್ರವಾಸೋದ್ಯಮ ಇಲಾಖೆ ಉಪನಿರ್ದೇಶಕ ರಾಘವೇಂದ್ರ ತಿಳಿಸಿದ್ದಾರೆ. ‘ಪ್ರಚಾರ ನಿರ್ವಹಣೆಯ ಕೊರತೆ’ 'ಶ್ರೀರಂಗಪಟ್ಟಣದ ಐತಿಹಾಸಿಕ ಘಟನಾವಳಿಗಳನ್ನು ಇಂದಿನ ತಲೆಮಾರಿಗೆ ತಿಳಿಸಲು ಪ್ರವಾಸೋದ್ಯಮ ಇಲಾಖೆ ಧ್ವನಿ ಮತ್ತು ಬೆಳಕು ಯೋಜನೆ ರೂಪಿಸಿದೆ. ಇದಕ್ಕಾಗಿ ₹3 ಕೋಟಿಗೂ ಹೆಚ್ಚು ಹಣ ವೆಚ್ಚ ಮಾಡಿದೆ. ಆದರೆ ಪ್ರಚಾರ ಮತ್ತು ನಿರ್ವಹಣೆಯ ಕೊರತೆಯಿಂದ ಮಹತ್ವದ ಯೋಜನೆ ಸ್ಥಗಿತಗೊಂಡಿದೆ. ಜಿಲ್ಲಾಡಳಿತ ಗಮನಹರಿಸಿ ಸ್ಥಗಿತಗೊಂಡಿರುವ ಕಾರ್ಯಕ್ರಮಕ್ಕೆ ಮತ್ತೆ ಚಾಲನೆ ನೀಡಬೇಕು' ಎಂದು ಶ್ರೀರಂಗಪಟ್ಟಣದ ಸಮರ್ಪಣಾ ಟ್ರಸ್ಟ್ ಅಧ್ಯಕ್ಷ ಕೆ.ಎಸ್.ಜಯಶಂಕರ್ ಒತ್ತಾಯಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.