ಶ್ರೀರಂಗಪಟ್ಟಣ: ‘ಪ್ರಖರ ಸಮಾಜವಾದಿ ಚಿಂತಕ ಡಾ.ರಾಮಮನೋಹರ ಲೋಹಿಯಾ ಶೂದ್ರ, ದಲಿತ ಮತ್ತು ಗುಡ್ಡಗಾಡು ಜನ ಸೇರಿದಂತೆ ಸಮಸ್ತ ಶೋಷಿತರ ಪ್ರತಿನಿಧಿಯಾಗಿ ಅವರ ಏಳಿಗೆಗೆ ಹೋರಾಡಿದರು’ ಎಂದು ಸಾಹಿತಿ ಬಿಸ್ಲೇಹಳ್ಳಿ ಪ್ರಭು ಹೇಳಿದರು.
ಪಟ್ಟಣದಲ್ಲಿ ಸಂಜಯ ಪ್ರಕಾಶನ ಭಾನುವಾರ ಸಂಜೆ ಏರ್ಪಡಿಸಿದ್ದ ಸಮಾಜವಾದಿ ಚಿಂತಕ ಡಾ.ರಾಮಮನೋಹರ ಲೋಹಿಯಾ ಅವರ 115ನೇ ಜಯಂತಿಯಲ್ಲಿ ‘ಡಾ.ರಾಮಮನೋಹರ ಲೋಹಿಯಾ ಚಿಂತನೆಗಳ ಸಮಕಾಲೀನತೆ’ ಕುರಿತು ಅವರು ವಿಷಯ ಮಂಡಿಸಿದರು.
‘ಸಮ ಸಮಾಜಕ್ಕಾಗಿ ಗಂಡು ಮತ್ತು ಹೆಣ್ಣಿನ ನಡುವೆ ಸಮಾನತೆ, ಶಸ್ತ್ರಾಸ್ತ್ರಗಳ ವಿರುದ್ಧ ಸತ್ಯಾಗ್ರಹ, ಬಂಡವಾಳಶಾಹಿ ವ್ಯವಸ್ಥೆ ವಿರುದ್ಧ ಹೋರಾಟ, ವರ್ಣಭೇದ ರಾಜಕಾರಣಕ್ಕೆ ವಿರೋಧ, ಜಾತಿ ಮತ್ತು ಸಮುದಾಯಗಳ ನಡುವೆ ಅಸಮಾನತೆ ನಿವಾರಣೆ ಸೇರಿದಂತೆ ಸಪ್ತ ಕ್ರಾಂತಿ ಸೂತ್ರಗಳನ್ನು ಮಂಡಿಸಿದರು. ಗಾಂಧೀಜಿ ಮತ್ತು ನೆಹರೂ ಅವರನ್ನೇ ಪ್ರಶ್ನಿಸುವ ಧೈರ್ಯ ಲೋಹಿಯಾ ಅವರಿಗಿತ್ತು. ಸಾಮಾಜಿಕ ಸಂರಚನೆಗೆ ರಾಜಕೀಯ ಅಧಿಕಾರ ಮುಖ್ಯವಾದ ಅಸ್ತ್ರ ಎಂದು ಲೋಹಿಯಾ ಪ್ರತಿಪಾದಿಸಿದ್ದಾರೆ’ ಎಂದರು.
ಗಾಂಧಿವಾದಿ ಡಾ.ಬಿ.ಸುಜಯಕುಮಾರ್ ಮಾತನಾಡಿ, ‘ವಿಶ್ವ ಸರ್ಕಾರ ರಚನೆಯಾಗಬೇಕು ಎಂದು ಲೋಹಿಯಾ ಆಶಿಸಿದ್ದರು. ಶ್ರಮವಿಲ್ಲದೆ ಸಂಪಾದಿಸಿದ ಹಣ ಸಾಮಾಜಿಕ ಅಶಾಂತಿಗೆ ಕಾರಣವಾಗುತ್ತದೆ ಎಂದು ಹೇಳಿದ್ದಾರೆ. ಗಾಂಧೀಜಿ ಪ್ರತಿಪಾದಿಸಿದ ಸವಿನಯ ಕಾನೂನು ಭಂಗದ ಮೂಲಕ ನ್ಯಾಯ ಪಡೆಯುವುದೇ ಸರಿಯಾದ ಮಾರ್ಗ ಎಂದು ನಂಬಿದ್ದರು’ ಎಂದು ಹೇಳಿದರು.
ಚಿಂತಕ ಕ್ಯಾತನಹಳ್ಳಿ ಚಂದ್ರಣ್ಣ ಮಾತನಾಡಿ, ‘ಲೋಹಿಯಾ ಕರ್ನಾಟಕದ ಕಾಗೋಡು ಸತ್ಯಾಗ್ರಹದಲ್ಲಿ ಪಾಲ್ಗೊಂಡಿದ್ದರು. ಅವರಿಂದ ಪ್ರಭಾವಿತರಾದ ಲಂಕೇಶ್, ಪೂರ್ಣಚಂದ್ರ ತೇಜಸ್ವಿ, ಪ್ರೊ.ಎಂ.ಡಿ. ನಂಜುಂಡಸ್ವಾಮಿ ಸಮಾಜವಾದವನ್ನು ನಾಡಿನ ಉದ್ದಗಲಕ್ಕೂ ಪಸರಿಸುವ ಕೆಲಸ ಮಾಡಿದ್ದಾರೆ’ ಎಂದರು.
ಹಿರಿಯ ಸಾಹಿತಿ ಡಾ. ಬೋರೇಗೌಡ ಚಿಕ್ಕಮರಳಿ, ಸಂಜಯ ಪ್ರಕಾಶನದ ಎಸ್.ಎಂ. ಶಿವಕುಮಾರ್, ಅಶ್ವತ್ಥನಾರಾಯಣ, ತ್ರಿವೇಣಿ, ವಕೀಲ ಸಿ.ಎಸ್. ವೆಂಕಟೇಶ್, ಧನಂಜಯ ಬ್ಯಾಡರಹಳ್ಳಿ, ಡಿಎಸ್‌ಎಸ್ ಮುಖಂಡ ಎಂ. ಚಂದ್ರಶೇಖರ್, ಕೆ.ಶೆಟ್ಟಹಳ್ಳಿ ಅಪ್ಪಾಜಿ, ಚಿಕ್ಕತಮ್ಮೇಗೌಡ, ನಂಜುಂಡಯ್ಯ, ಕೆ.ಸಿ. ಮಾದೇಶ್, ಕ್ಯಾತನಹಳ್ಳಿ ರಂಗನಾಥ್, ದರಸಗುಪ್ಪೆ ಸುರೇಶ್ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.