ADVERTISEMENT

ಕಲ್ಲು ಗಣಿಗಾರಿಕೆ ದುಡ್ಡು ಚುನಾವಣೆಗೆ ಬಳಕೆ

ರೈತ ಸಂಘದ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಮಂಜೇಶ್‌ ಗೌಡ ಆರೋಪ

​ಪ್ರಜಾವಾಣಿ ವಾರ್ತೆ
Published 6 ಜೂನ್ 2019, 14:29 IST
Last Updated 6 ಜೂನ್ 2019, 14:29 IST
ಶ್ರೀರಂಗಪಟ್ಟಣದ ಅರಣ್ಯ ಇಲಾಖೆ ಕಚೇರಿಯಲ್ಲಿ ಆರ್‌ಎಫ್ಒ ಸುನೀತಾ ಅವರೊಂದಿಗೆ ರೈತರು ಚರ್ಚಿಸಿದರು
ಶ್ರೀರಂಗಪಟ್ಟಣದ ಅರಣ್ಯ ಇಲಾಖೆ ಕಚೇರಿಯಲ್ಲಿ ಆರ್‌ಎಫ್ಒ ಸುನೀತಾ ಅವರೊಂದಿಗೆ ರೈತರು ಚರ್ಚಿಸಿದರು   

ಶ್ರೀರಂಗಪಟ್ಟಣ: ತಾಲ್ಲೂಕಿನ ವಿವಿಧೆಡೆ ಅರಣ್ಯ ಪ್ರದೇಶದಲ್ಲಿ ಕಲ್ಲು ಗಣಿಗಾರಿಕೆ ನಡೆಯುತ್ತಿದ್ದರೂ ಅಕ್ರಮ ತಡೆಗೆ ಕ್ರಮ ವಹಿಸಿಲ್ಲ ಎಂದು ಆರೋಪಿಸಿ ರೈತ ಸಂಘದ ಕಾರ್ಯಕರ್ತರು ಅರಣ್ಯ ಇಲಾಖೆ ಕಚೇರಿಗೆ ಶುಕ್ರವಾರ ಮುತ್ತಿಗೆ ಹಾಕಿದರು.

ರೈತ ಸಂಘದ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಮಂಜೇಶ್‌ ಗೌಡ ಮಾತನಾಡಿ, ‘ರಾಜಕಾರಣಿಗಳು ದೊಡ್ಡ ಮಟ್ಟದಲ್ಲಿ ಅನಧಿಕೃತವಾಗಿ ಕಲ್ಲು ಗಣಿಗಾರಿಕೆ ನಡೆಸುತ್ತಿದ್ದಾರೆ. ಹೀಗೆ ನಡೆಯುವ ಕಲ್ಲು ಗಣಿಗಾರಿಕೆ ಮತ್ತು ಜಲ್ಲಿ ಕ್ರಷರ್‌ಗಳ ದುಡ್ಡನ್ನು ಚುನಾವಣೆಗೆ ಬಳಸಲಾಗುತ್ತಿದೆ. ಈ ಕುರಿತು ಚುನಾವಣಾ ಆಯೋಗಕ್ಕೆ ದೂರು ನೀಡುತ್ತೇವೆ’ ಎಂದು ಅವರು ಹೇಳಿದರು.

ತಾಲ್ಲೂಕಿನ ಹಂಗರಹಳ್ಳಿ, ಮುಂಡುಗದೊರೆ ಚಿಕ್ಕಪಾಳ್ಯ, ದೊಡ್ಡಪಾಳ್ಯ, ಟಿ.ಎಂ. ಹೊಸೂರು ಭಾಗದಲ್ಲಿ ಅರಣ್ಯ ಪ್ರದೇಶದಲ್ಲಿ ಗಣಿಗಾರಿಕೆ ನಡೆಯುತ್ತಿದ್ದು, ಅಧಿಕಾರಿ ಗಳು ಪರೋಕ್ಷವಾಗಿ ನೆರವು ನೀಡುತ್ತಿದ್ದಾರೆ. ಸ್ವಹಿತದ ದೃಷ್ಟಿಯಿಂದ ಅಕ್ರಮ ಕಲ್ಲು ಗಣಿ ದಂಧೆಗೆ ಸಹಕರಿಸುತ್ತಿದ್ದಾರೆ. ಕೇವಲ ಎರಡು ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿ ಪ್ರತಿದಿನ ₹20 ಕೋಟಿಗೂ ಹೆಚ್ಚು ಗಣಿ ಸಂಪತ್ತು ಲೂಟಿಯಾಗುತ್ತಿದೆ. ಅಧಿಕಾರಿಗಳುನ ಕಣ್ಮುಚ್ಚಿ ಕುಳಿತಿದ್ದಾರೆ ಎಂದು ಆರೋಪಿಸಿದರು.

ADVERTISEMENT

ಅಹವಾಲು ಆಲಿಸಿದ ವಲಯ ಅರಣ್ಯಾಧಿಕಾರಿ ಸುನೀತಾ, ‘ಹಂಗರಹಳ್ಳಿ, ಮುಂಡುಗದೊರೆ, ಕಾಳೇನಹಳ್ಳಿ ವ್ಯಾಪ್ತಿಯಲ್ಲಿ ಪರವಾನಗಿ ಇಲ್ಲದೆ 20 ಜಲ್ಲಿ ಕ್ರಷರ್‌ಗಳು ನಡೆಯುತ್ತಿವೆ. ಅವುಗಳ ಮಾಲೀಕರ ವಿರುದ್ಧ ಈಗಾಗಲೇ ಪ್ರಕರಣ ದಾಖಲಿಸಿ ವಿಚಾರಣೆ ಕೈಗೊಳ್ಳಲಾಗಿದೆ. ಅಂತಿಮ ವರದಿ ಸಿದ್ಧಪಡಿಸಿ ಎಸಿಎಫ್ ನ್ಯಾಯಾಲಯಕ್ಕೆ ಸಲ್ಲಿಸಲಾಗುವುದು‌’ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಡಿ.ಎಸ್. ಚಂದ್ರು, ಚಂದ್ರಶೇಖರ್, ಮೋಹನ್, ಮಲ್ಲೇಶ್ ಹಾಗೂ ಮಹದೇವಸ್ವಾಮಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.