ಮಂಡ್ಯ: ಕೋವಿಡ್–19ನಿಂದ ಗುಣಮುಖರಾಗಿರುವ ಸಂಸದೆ ಎ.ಸುಮಲತಾ ಅವರು ತಮ್ಮ ಅನುಭವ ಹಂಚಿಕೊಂಡಿದ್ದಾರೆ. ಸೋಂಕಿಗೆ ಹೆದರುವ ಅಗತ್ಯವಿಲ್ಲ. ಎಲ್ಲರೂ ಧೈರ್ಯದಿಂದ ಎದುರಿಸಬೇಕು ಎಂದು ಸಂದೇಶ ನೀಡಿದ್ದಾರೆ.
ಜುಲೈ 6 ರಂದು ಕೊರೊನಾ ಸೋಂಕು ಅವರಿಗೆ ದೃಢಪಟ್ಟಿತ್ತು. ಮನೆಯಲ್ಲೇ ಪ್ರತ್ಯೇಕವಾಗಿ ಚಿಕಿತ್ಸೆ ಪಡೆಯುತ್ತಿದ್ದರು. ತಮ್ಮ ಫೇಸ್‌ಬುಕ್ ಪುಟದಲ್ಲಿ ಸಂದೇಶ ವಿಡಿಯೊ ಪ್ರಕಟ ಮಾಡಿರುವ ಅವರು ಜನರ ಪ್ರೀತಿ, ಆಶೀರ್ವಾದದಿಂದ ಕೋವಿಡ್ ಮುಕ್ತಳಾಗಿದ್ದೇನೆ ಎಂದು ಹೇಳಿದ್ದಾರೆ.
‘ಕೋವಿಡ್ ಪಾಸಿಟಿವ್ ಎಂದಾಕ್ಷಣ ನಾನೂ ಭಯ ಪಟ್ಟಿದ್ದೆ. ಆಗ ಅಂಬರೀಷ್ ಅವರ ಮಾತನ್ನು ನೆನಪಿಸಿಕೊಂಡೆ. ಕಷ್ಟ ಅನ್ನೋದು ಹೇಗೆ ಬಂದರೂ, ಯಾವಾಗ ಬಂದರೂ ಅದನ್ನು ಎದುರಿಸಿ ಹೋರಾಡಬೇಕು ಎಂದು ಅಂಬರೀಷ್ ಹೇಳುತ್ತಿದ್ದ ಮಾತು ಸ್ಫೂರ್ತಿ ತುಂಬಿತು. ಹಿಂದೆಯೂ ನಾನು ನನ್ನ ಜೀವನದಲ್ಲಿ ಅನೇಕ ಕಷ್ಟಗಳನ್ನು ಎದುರಿಸಿ ಹೋರಾಡಿ ಗೆದ್ದಿದ್ದೇನೆ. ಅವುಗಳಿಗೆ ಹೋಲಿಕೆ ಮಾಡಿದರೆ ಇದೇನೂ ದೊಡ್ಡ ಕಷ್ಟವಲ್ಲ’ ಎಂದಿದ್ದಾರೆ.
‘ಕೋವಿಡ್ ಪಾಸಿಟಿವ್ ಬಂದಿದೆ ಎಂದು ಗೊತ್ತಾದಾಗ ನಾನು ಮೊದಲು ಧೈರ್ಯ ಬೆಳೆಸಿಕೊಂಡೆ. ನನ್ನ ಮಗ ಅಭಿಷೇಕ್ ಚಿಕ್ಕ ವಯಸ್ಸಿನಲ್ಲಿಯೇ ಬಹಳ ಕಾಳಜಿಯಿಂದ ನೋಡಿಕೊಂಡಿದ್ದಾನೆ. ಭಯದಿಂದ ಇದೂವರೆಗೂ ಯಾರೂ, ಏನನ್ನೂ ಸಾಧಿಸಿಲ್ಲ. ನಾವು ಧೈರ್ಯ ಮಾಡಿದರೆ ಖಂಡಿತಾ ಕೋವಿಡ್ ಗೆಲ್ಲಬಹುದು’ ಎಂದು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.