ADVERTISEMENT

ಶ್ರೀರಂಗಪಟ್ಟಣ: ಚಂದ್ರಮೌಳೇಶ್ವರನನ್ನು ಸ್ಪರ್ಶಿಸದ ಸೂರ್ಯರಶ್ಮಿ; ಭಕ್ತರಿಗೆ ನಿರಾಸೆ

​ಪ್ರಜಾವಾಣಿ ವಾರ್ತೆ
Published 14 ಜನವರಿ 2025, 13:36 IST
Last Updated 14 ಜನವರಿ 2025, 13:36 IST
ಶ್ರೀರಂಗಪಟ್ಟಣ ಸಮೀಪದ ಚಂದ್ರವನ ಆಶ್ರಮದಲ್ಲಿ ಸಂಕ್ರಾಂತಿ ಹಬ್ಬದ ನಿಮಿತ್ತ ಆಶ್ರಮದ ಪೀಠಾಧ್ಯಕ್ಷ ತ್ರಿನೇತ್ರ ಮಹಾಂತ ಶಿವಯೋಗಿ ಸ್ವಾಮೀಜಿ ಮಂಗಳವಾರ ಬೆಳಿಗ್ಗೆ ಭಕ್ತರಿಗೆ ಪೊಂಗಲ್‌ ಬಡಿಸಿದರು
ಶ್ರೀರಂಗಪಟ್ಟಣ ಸಮೀಪದ ಚಂದ್ರವನ ಆಶ್ರಮದಲ್ಲಿ ಸಂಕ್ರಾಂತಿ ಹಬ್ಬದ ನಿಮಿತ್ತ ಆಶ್ರಮದ ಪೀಠಾಧ್ಯಕ್ಷ ತ್ರಿನೇತ್ರ ಮಹಾಂತ ಶಿವಯೋಗಿ ಸ್ವಾಮೀಜಿ ಮಂಗಳವಾರ ಬೆಳಿಗ್ಗೆ ಭಕ್ತರಿಗೆ ಪೊಂಗಲ್‌ ಬಡಿಸಿದರು   

ಶ್ರೀರಂಗಪಟ್ಟಣ: ಪಟ್ಟಣ ಸಮೀಪದ ಚಂದ್ರವನ ಆಶ್ರಮದಲ್ಲಿ ಕಾಶಿ ಚಂದ್ರಮೌಳೇಶ್ವರ (ಶಿವಲಿಂಗ)ನನ್ನು ಪ್ರತಿ ವರ್ಷ ಮಕರ ಸಂಕ್ರಾಂತಿ ದಿನ ಸ್ಪರ್ಶಿಸುತ್ತಿದ್ದ ಸೂರ್ಯ ರಶ್ಮಿ ಮಂಗಳವಾರ ಸ್ಪರ್ಶಿಸದ ಕಾರಣ ಭಕ್ತರಿಗೆ ನಿರಾಸೆ ಉಂಟಾಯಿತು.

ಮಕರ ಸಂಕ್ರಾಂತಿ ದಿನ ಬೆಳಿಗ್ಗೆ 7.10ರಿಂದ 7.20 ಗಂಟೆ ನಡುವೆ ಶಿವಲಿಂಗದ ಮೇಲೆ ಸೂರ್ಯ ರಶ್ಮಿಯ ಸಿಂಚನವಾಗುತ್ತಿತ್ತು. ಆದರೆ, ಮಂಗಳವಾರ 8.30ರವರೆಗೂ ಮೋಡ ಕವಿದ ವಾತಾವರಣ ಇತ್ತು. ಹಾಗಾಗಿ ಸೂರ್ಯನು ಶಿವಲಿಂಗದ ಮೇಲೆ ತನ್ನ ಕಿರಣಗಳನ್ನು ಬೀರುವ ವಿಶೇಷ ಕ್ಷಣವನ್ನು ಕಣ್ತುಂಬಿಕೊಳ್ಳಲು ಬಂದಿದ್ದ ಭಕ್ತರು ನಿರಾಸೆಗೊಂಡರು.

  ಇಂದು ಅಪರೂಪದ ಕೌತುಕ ಘಟಿಸಿಲ್ಲ. ಭಕ್ತರು ಮುಕ್ತವಾಗಿ ಕಾಶಿ ಚಂದ್ರಮೌಳೇಶ್ವರನನ್ನು ಮುಟ್ಟಿ ಪೂಜೆ ಸಲ್ಲಿಸಿ ಪುನೀತರಾದರು.

ADVERTISEMENT

ಆಶ್ರಮದ ಪೀಠಾಧ್ಯಕ್ಷ ತ್ರಿನೇತ್ರ ಮಹಾಂತ ಶಿವಯೋಗಿ ಸ್ವಾಮೀಜಿ ಚಂದ್ರಮೌಳೇಶ್ವರನಿಗೆ ಮುಂಜಾನೆ 4.30ಕ್ಕೆ ಏಕಾದಶ ರುದ್ರಾಭಿಷೇಕ ನೆರವೇರಿಸಿದರು.

ಗೋಪೂಜೆ ಮತ್ತು ಕಾವೇರಿ ಪೂಜೆಯೂ ನಡೆಯಿತು. ವಿವಿಧೆಡೆಗಳಿಂದ ಬಂದಿದ್ದವರು ಕಾವೇರಿ ನದಿಯಲ್ಲಿ ಮಿಂದು ದೇವರ ದರ್ಶನ ಪಡೆದರು. ಭಕ್ತರಿಗೆ ಎಳ್ಳು– ಬೆಲ್ಲ ವಿತರಣೆ ನಡೆಯಿತು. ನೆರೆದಿದ್ದವರಿಗೆ ಪೊಂಗಲ್‌ ನೀಡಲಾಯಿತು. ಆಶ್ರಮದ ಕಾರ್ಯದರ್ಶಿ ಟಿ.ಪಿ. ಶಿವಕುಮಾರ್‌, ನಿವೃತ್ತ ಕೆಎಎಸ್ ಅಧಿಕಾರಿ ಚಿಕ್ಕತಿಮ್ಮಯ್ಯ, ವೀರಶೈವ ಸಮಾಜದ ಮುಖಂಡ ಮಲ್ಲೇಶ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.