ADVERTISEMENT

ಪಾಂಡವಪುರ | ಲಾಕ್‌ಡೌನ್ ಜಾರಿ: ಸಂಕಷ್ಟದಲ್ಲಿ ತೃತೀಯ ಲಿಂಗಿಗಳ ಬದುಕು

ಭಿಕ್ಷಾಟನೆಯನ್ನೇ ಕಸಿದುಕೊಂಡ ಕೊರೊನಾ ಮಹಾಮಾರಿ

ಹಾರೋಹಳ್ಳಿ ಪ್ರಕಾಶ್‌
Published 16 ಏಪ್ರಿಲ್ 2020, 2:21 IST
Last Updated 16 ಏಪ್ರಿಲ್ 2020, 2:21 IST
ಪಾಂಡವಪುರ ತಾಲ್ಲೂಕಿನ ತೃತೀಯ ಲಿಂಗಿಗಳು
ಪಾಂಡವಪುರ ತಾಲ್ಲೂಕಿನ ತೃತೀಯ ಲಿಂಗಿಗಳು   

ಪಾಂಡವಪುರ: ಭಿಕ್ಷೆಯಿಂದಲೇ ತಮ್ಮ ಜೀವನ ಸಾಗಿಸುತ್ತಿರುವ ತೃತೀಯ ಲಿಂಗಿಗಳು ಲಾಕ್‌ಡೌನ್‌ನಿಂದ ತೀವ್ರ ಸಂಕಷ್ಟಕ್ಕೀಡಾಗಿದ್ದಾರೆ.

ತಾಲ್ಲೂಕಿನ ಕಣಿವೆಕೊಪ್ಪಲು, ಮೊರಸನಹಳ್ಳಿ, ಹರಳಹಳ್ಳಿ, ಜಯಂತಿನಗರ, ಡಿಂಕಾ, ರಾಗಿಮುದ್ದನಹಳ್ಳಿ ಮುಂತಾದ ಗ್ರಾಮಗಳಲ್ಲಿನ ಸುಮಾರು 30ಕ್ಕೂ ಹೆಚ್ಚು ತೃತೀಯ ಲಿಂಗಿಗಳಿದ್ದು, ಕೊರೊನಾ ಭಿಕ್ಷಾಟನೆಯಕೈಕಟ್ಟಿದೆ.

ವಾಹನ ಸಂಚಾರ ದಟ್ಟವಾಗಿರುವ ವೃತ್ತಗಳಲ್ಲಿ ನಿಂತು ಕೆಂಪು ದೀಪ ಆರುವ ಮುನ್ನ ವಾಹನದಲ್ಲಿ ಕುಳಿತವರಿಗೆ ತಮ್ಮ ವಿವಿಧ ಆಂಗಿಕ ಅಭಿನಯಗಳ ಮೂಲಕ ಗಮನಸೆಳೆದು ಭಿಕ್ಷೆ ಬೇಡುವುದು. ಮೈಸೂರು– ಬೆಂಗಳೂರು ನಡುವೆ ಸಂಚರಿಸುವ ರೈಲುಗಳಲ್ಲಿ ಪ್ರಯಾಣಿಕರ ಬಳಿ ಕೈ ಚಾಚಿ ಅವರು ಕೊಟ್ಟಷ್ಟು ಹಣ ಪಡೆಯುವುದು ಇವರ ಕೆಲಸ. ಇದಲ್ಲದೆ ಪಟ್ಟಣ ಸೇರಿದಂತೆ ನಗರಗಳಲ್ಲಿನ ವಾಣಿಜ್ಯ ವಹಿವಾಟು, ಅಂಗಡಿಗಳಲ್ಲಿ ಬಸ್ ನಿಲ್ದಾಣ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಜನರಬಳಿ ಹೋಗಿ ಕೈತಟ್ಟಿ ಭಿಕ್ಷೆ ಬೇಡುವುದು ಇವರ ಕಸುಬಾಗಿದೆ.

ADVERTISEMENT

ಮನೆಬಿಟ್ಟು ಬಂದು ಮಾನಸಿಕ ಮತ್ತು ದೈಹಿಕವಾಗಿ ತೃತೀಯ ಲಿಂಗಿಯಾಗಿ ಪರಿವರ್ತನೆಗೊಂಡಿರುವ ಇವರದೇ ಒಂದು ಲೋಕ. ಒಂದಿಷ್ಟು ಮಂದಿ ಒಟ್ಟೊಟ್ಟಿಗೆ ಬದುಕುವ ಇವರ ಜೀವನ ನಡೆಯುವುದು ಭಿಕ್ಷೆಯಿಂದ ಬಂದ ಹಣದಿಂದ ಮಾತ್ರ.

ಲಾಕ್‌ಡೌನ್ ಪರಿಣಾಮ ರೈಲು, ಸಾರಿಗೆ ಸಂಚಾರ ನಿಂತಿದೆ. ಯಾವುದೇ ವಾಹನಗಳು ಓಡಾಡುತ್ತಿಲ್ಲ. ಅಂಗಡಿಗಳು ಬಾಗಿಲು ಮುಚ್ಚಿರುವ ಕಾರಣ ಹಣದ ಸಮಸ್ಯೆ ಎದುರಾಗಿದೆ. ನಿತ್ಯವೂ ರಂಗುರಂಗಿನ ಬಟ್ಟೆ ಧರಿಸಿ ಮೇಕಪ್‌ ಮಾಡಿಕೊಂಡು ಜನರನ್ನು ಆಕರ್ಷಿಸುತ್ತಿದ್ದ ಇವರೆಲ್ಲಾ ಈಗ ಕಂಗಾಲಾಗಿದ್ದಾರೆ.

ಬಹುತೇಕ ತೃತೀಯ ಲಿಂಗಿಗಳು ತಮ್ಮ ಸಹೋದ್ಯೋಗಿಗಳ ಜತೆ ತಾವು ಭಿಕ್ಷೆ ಬೇಡುವ ಸ್ಥಳಗಳಿಗೆ ಸಮೀಪವಿರುವ ಪಟ್ಟಣಗಳಲ್ಲಿ ವಾಸ ಮಾಡುತ್ತಿದ್ದರು. ಈಗ ಇವರ ಪಾಲಿಗೆ ಪಟ್ಟಣ, ನಗರಗಳು ಮುಚ್ಚಿರುವುದರಿಂದ ತಮ್ಮ ಗ್ರಾಮಗಳಿಗೆ ವಾಪಸ್ಸಾಗಿದ್ದಾರೆ. ಆದರೆ ಗ್ರಾಮಗಳಲ್ಲಿಯೂ ಇವರನ್ನು ನಿಕೃಷ್ಟವಾಗಿ ನೋಡಲಾಗುತ್ತಿದೆ. ಭಿಕ್ಷಾಟನೆಯಿಂದ ಬಂದ ಹಣ ಇವರ ಆಡಂಬರದ ಬದುಕು, ಮೇಕಪ್‌, ಬಟ್ಟೆ ಇನ್ನಿತರ ಅಂದಂದಿನ ಖರ್ಚಿಗೆ ಮುಗಿದಿರುವುದರಿಂದ ಬಹುತೇಕರಲ್ಲಿ ಉಳಿತಾಯವೂ ಇಲ್ಲದೇ ಬದುಕು ದುಸ್ತರವಾಗಿದೆ.

ಊರು ಬಿಟ್ಟು ಹೊರಹೋಗಿ ಮುಂಬೈ ಸೇರಿ ಭಿಕ್ಷೆ ಬೇಡಿ ಜೀವನ ನಡೆಸುತ್ತಿದ್ದ ಕಣಿವೆಕೊಪ್ಪಲು ಗ್ರಾಮದ 70 ವರ್ಷದ ಸಣ್ಣಮ್ಮ ಈಗ್ಗೆ 8–10 ವರ್ಷದ ಹಿಂದೆ ಊರಿಗೆ ವಾಪಸ್ಸಾಗಿದ್ದಾರೆ. ಈಗ ಈಕೆ ಇಲ್ಲಿನ ತೃತೀಯ ಲಿಂಗಿಗಳ ಮುಖ್ಯಸ್ಥೆ. ‘ಸರ್ಕಾರ ನಮ್ಮಂಥವರ ಕಡೆ ಗಮಹರಿಸಿ ನಮ್ಮ ಕಷ್ಟಗಳನ್ನು ಆಲಿಸಬೇಕಿದೆ’ ಎನ್ನುತ್ತಾರೆ.

‘ಇದುವರೆಗೂ ಭಿಕ್ಷೆಯಿಂದಲೇ ನಮ್ಮ ಜೀವನ ನಡೆಯುತ್ತಿತ್ತು. ಕೊರೊನಾ ನಮ್ಮ ಭಿಕ್ಷೆಯನ್ನು ಕಿತ್ತುಕೊಂಡಿದೆ. ತುಂಬ ಕಷ್ಟದಲ್ಲಿದ್ದೇವೆ. ಸರ್ಕಾರ ನಮ್ಮ ನೆರವಿಗೆ ಬರಬೇಕಿದೆ’ ಎಂಬುದು ಹರಳಹಳ್ಳಿ ‌ಗ್ರಾಮದ ರಮ್ಯಾ ಅವರ ಒತ್ತಾಯ.

‘ಭಿಕ್ಷೆ ಬಿಟ್ಟರೆ ಇನ್ಯಾವ ವೃತ್ತಿಯೂ ನಮಗೆ ಗೊತ್ತಿಲ್ಲ. ಕೆಲವರು ನಾಟಕಗಳಲ್ಲಿ ಸ್ತ್ರೀಪಾತ್ರ ಮಾಡುತ್ತಿದ್ದರು. ಈಗ ಯಾವುದೇ ಕಾರ್ಯಕ್ರಮಗಳು ಇಲ್ಲ. ರೈಲಿಲ್ಲ, ಬಸ್ಸಿಲ್ಲ, ಅಂಗಡಿಗಳಿಲ್ಲದೇ, ನಮ್ಮ ಸ್ಥಿತಿ ಚಿಂತಾಜನಕವಾಗಿದೆ’ ಎಂದು ಡಿಂಕಾ ಗ್ರಾಮದ ಪೂ‌ರ್ಣಿಮಾ ತಮ್ಮ ಅಳಲನ್ನು ತೋಡಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.