ADVERTISEMENT

ಸೆ.13ರಂದು ಪಾಂಡವಪುರದಲ್ಲಿ ‘ಸ್ವರಾಜ್‌ ಉತ್ಸವ’: ಶಾಸಕ ದರ್ಶನ್‌ ಪುಟ್ಟಣ್ಣಯ್ಯ

​ಪ್ರಜಾವಾಣಿ ವಾರ್ತೆ
Published 8 ಸೆಪ್ಟೆಂಬರ್ 2025, 5:12 IST
Last Updated 8 ಸೆಪ್ಟೆಂಬರ್ 2025, 5:12 IST
<div class="paragraphs"><p>ಶಾಸಕ ದರ್ಶನ್‌ ಪುಟ್ಟಣ್ಣಯ್ಯ</p></div>

ಶಾಸಕ ದರ್ಶನ್‌ ಪುಟ್ಟಣ್ಣಯ್ಯ

   

ಮಂಡ್ಯ: ಪುಟ್ಟಣ್ಣಯ್ಯ ಫೌಂಡೇಷನ್‌ ಮತ್ತು ಕರ್ನಾಟಕ ರಾಜ್ಯ ರೈತ ಸಂಘದ ಸಹಯೋಗದಲ್ಲಿ ಸೆ.13ರಂದು ಬೆಳಿಗ್ಗೆ 10 ಗಂಟೆಗೆ ಪಾಂಡವಪುರದ ಪಾಂಡವ ಕ್ರೀಡಾಂಗಣದಲ್ಲಿ ‘ಸ್ವರಾಜ್‌ ಉತ್ಸವ’ ಹಮ್ಮಿಕೊಳ್ಳಲಾಗಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಜನರು ಭಾಗವಹಿಸಬೇಕು ಎಂದು ಶಾಸಕ ದರ್ಶನ್‌ ಪುಟ್ಟಣ್ಣಯ್ಯ ಮನವಿ ಮಾಡಿದರು.

ನಗರದ ಪತ್ರಿಕಾ ಭವನದಲ್ಲಿ ಭಾನುವಾರ ನಡೆದ ಸಂವಾದದಲ್ಲಿ ಮಾತನಾಡಿದ ಅವರು, ‘ಜನರ ಸಮಸ್ಯೆಗಳನ್ನು ಆಲಿಸಲು ಯಾವುದೇ ಅರ್ಜಿ ಇಲ್ಲದೆ, ಮೊಬೈಲ್  ಆ‌್ಯಪ್ ಮೂಲಕ ಸಾರ್ವಜನಿಕರ ಸಮಸ್ಯೆಗಳ ಪಟ್ಟಿ ಪಡೆದು ಅದನ್ನು ನೇರವಾಗಿ ಸಂಬಂಧಪಟ್ಟ ಇಲಾಖೆಗೆ ವರ್ಗಾಯಿಸಿ ಸಮಸ್ಯೆ ಬಗೆಹರಿಸುವ ವಿನೂತನ ಕಾರ್ಯಕ್ರಮ ಇದಾಗಿದೆ’ ಎಂದರು.

ADVERTISEMENT

‘ನಮ್ಮ ಹಳ್ಳಿ ನಮ್ಮ ಹೆಮ್ಮೆ, ನಮ್ಮ ಬದುಕು ಸ್ವರಾಜ್ಯ ಗ್ರಾಮದೆಡೆಗೆ ಎಂಬ ಘೋಷಣೆಯಡಿ ‘ಸ್ವರಾಜ್ ಉತ್ಸವ’ ಹಮ್ಮಿಕೊಳ್ಳಲಾಗಿದೆ. ಗಾಂಧೀಜಿಯವರ ಸ್ವರಾಜ್ಯ ಚಳವಳಿಯಂತೆ ಸ್ವರಾಜ್ ಉತ್ಸವ ನಡೆಯಲಿದೆ. ನಾನು ಚುನಾವಣಾ ಪ್ರಚಾರ ಸಮಯದಲ್ಲಿ ಹಳ್ಳಿಗಳಿಗೆ ಭೇಟಿ ನೀಡಿದಾಗ ಸಾಕಷ್ಟು ಸಮಸ್ಯೆಗಳು ಕೇಳಿ ಬಂದವು. ಆ ಹಿನ್ನೆಲೆಯಲ್ಲಿ ಪುಟ್ಟಣ್ಣಯ್ಯ ಫೌಂಡೇಷನ್ ಹಾಗೂ ಕರ್ನಾಟಕ ರಾಜ್ಯ ರೈತ ಸಂಘದ ವತಿಯಿಂದ ಹಳ್ಳಿಗಳ ಪ್ರಗತಿ, ಸಮಗ್ರ ಬೆಳವಣಿಗೆಗಾಗಿ ವಿಶೇಷ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ’ ಎಂದು ತಿಳಿಸಿದರು.

ಸ್ವರಾಜ್ ಉತ್ಸವದಲ್ಲಿ 11 ವಿಷಯಗಳ ಕುರಿತು ಪ್ರದರ್ಶನ, ಸಂವಾದ, ಪ್ರಾತ್ಯಕ್ಷಿಕೆ ಹಾಗೂ ನೇರ ಚಟುವಟಿಕೆಗಳು ನಡೆಯಲಿದೆ. ಸುಮಾರು 30ಕ್ಕೂ ಹೆಚ್ಚು ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ಮಟ್ಟದ ಸರ್ಕಾರೇತರ ಸಂಸ್ಥೆಗಳು ಭಾಗವಹಿಸಲಿವೆ. ಕ್ಷೇತ್ರದಾದ್ಯಂತ ರೈತರು ಮತ್ತು ಸಾರ್ವಜನಿಕರು ಸೇರಿದಂತೆ 10 ಸಾವಿರ ಜನರು ಭಾಗವಹಿಸುವ ನಿರೀಕ್ಷೆ ಇದೆ ಎಂದು ಹೇಳಿದರು.

‘ಕೃಷಿ, ಆರೋಗ್ಯ, ಆರ್ಥಿಕ ಸ್ವಾವಲಂಬನೆ, ಯುವಜನ ಅಭಿವೃದ್ಧಿ, ತಂತ್ರಜ್ಞಾನ, ಉದ್ಯಮಶೀಲತೆ, ಶಿಕ್ಷಣ, ಪ್ರವಾಸೋದ್ಯಮ ಮುಂತಾದ ವಿಷಯಗಳ ಕುರಿತು ಯುವಕ-ಯುವತಿಯರಿಗೆ, ಸಾರ್ವಜನಿಕರಿಗೆ ಮಾಹಿತಿ, ಜಾಗೃತಿ, ಪ್ರದರ್ಶನ, ಪ್ರಾತ್ಯಕ್ಷಿಕೆಗಳು ನಡೆಯಲಿವೆ. ಜನರಲ್ಲಿ ಜಾಗೃತಿ ಹಾಗೂ ಅರಿವು ಮೂಡಿಸಲು ಕಾರ್ಯಕ್ರಮ ಆಯೋಜಿಸಲಾಗಿದೆ. ಇದು ಉತ್ಸವಕ್ಕೆ ಸೀಮಿತವಾಗುವುದಿಲ್ಲ. ಮುಂದಿನ ದಿನಗಳಲ್ಲಿ ಹೋಬಳಿ, ಗ್ರಾಮ, ಪಂಚಾಯಿತಿ ಮಟ್ಟದಲ್ಲಿ ಅನುಷ್ಠಾನಗೊಳಿಸುವ ಮೂಲಕ ರೈತರು ಹಾಗೂ ಜನರ ಬದುಕು ರೂಪಿಸಲು ಪ್ರಾಮಾಣಿಕ ಪ್ರಯತ್ನ ನಡೆಸುತ್ತೇನೆ’ ಎಂದರು.

ಹಳ್ಳಿಯ ಜನರಿಗೆ ಸ್ವಾವಲಂಬಿ ಬದುಕು ಕಟ್ಟಿಕೊಡುವ ಬಗ್ಗೆ ಆಲೋಚನೆ ಇದೆ. ಜನರ ಸಮಸ್ಯೆಗಳಿಗೆ ಪರಿಹಾರ, ಸರ್ಕಾರಿ ಶಾಲೆಗಳ ಅಭಿವೃದ್ಧಿ, ಹೊಸ ಶಾಲೆಗಳ ನಿರ್ಮಾಣ ಮಾಡಿ ಗುಣಮಟ್ಟದ ಶಿಕ್ಷಣ ಕೊಡುವ ಕೆಲಸ ಮಾಡಲಾಗುವುದು. ಮೇಲುಕೋಟೆ ಐತಿಹಾಸಿಕ, ಸಾಂಸ್ಕೃತಿಕ, ಧಾರ್ಮಿಕ ಸೌಂದರ್ಯ ಉಳಿಸುವ ನಿಟ್ಟಿನಲ್ಲಿ ಪ್ರವಾಸೋದ್ಯಮ ಉತ್ತೇಜಿಸಲಾಗುವುದು ಎಂದು ವಿವರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.