ಮಳವಳ್ಳಿ: ಮಂಡ್ಯದಲ್ಲಿ ಇತ್ತೀಚೆಗೆ ನಡೆದ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಇಲ್ಲಿನ ತಾಲ್ಲೂಕು ಪಂಚಾಯಿತಿಯ ನೇತೃತ್ವದಲ್ಲಿ ವಿವಿಧ ಇಲಾಖೆಗಳ ಸಹಯೋಗಗಳೊಂದಿಗೆ ರೂಪಿಸಿದ್ದ ಷಡಕ್ಷರದೇವ ಕವಿಯ ಸ್ತಬ್ಧಚಿತ್ರ ಎಲ್ಲರ ಗಮನ ಸೆಳೆಯಿತು.
ತಾಲ್ಲೂಕು ಪಂಚಾಯಿತಿ ಕಾರ‍್ಯನಿರ್ವಹಣಾಧಿಕಾರಿ ಎಚ್.ಜಿ.ಶ್ರೀನಿವಾಸ್ ಅವರು ವಿಶೇಷ ಆಸಕ್ತಿ ವಹಿಸಿ ತಾಲ್ಲೂಕಿನ 5 ಪ್ರಮುಖ ಕ್ಷೇತ್ರಗಳ ಮಾಹಿತಿಗಳನ್ನು ನುರಿತ ಕಲಾವಿದರಿಂದ ವಿಶೇಷವಾಗಿ ವಿನ್ಯಾಸಗೊಳಿಸಿದ್ದರು.
ಸಂಸ್ಕೃತ ಮತ್ತು ಕನ್ನಡದಲ್ಲಿ ಪಾಂಡಿತ್ಯ ಮೆರೆದ ಪ್ರಮುಖ ಕವಿ ಷಡಕ್ಷರದೇವರ ಪ್ರತಿಮೆ ಗಮನ ಸೆಳೆಯಿತು. ಮತ್ತೊಂದೆಡೆ ಏಷ್ಯಾ ಖಂಡದ ಮೊದಲ ಜಲವಿದ್ಯುತ್ ಉತ್ಪಾದನಾ ಕೇಂದ್ರ ನಿರ‍್ಮಾಣವಾಗಿರುವ ತಾಲ್ಲೂಕಿನ ಶಿವನಸಮುದ್ರ, ಐತಿಹಾಸಿಕ ಗಗನಚುಕ್ಕಿ ಜಲಪಾತದ ವೈಭವದ ಚಿತ್ರಣವೂ ಸ್ತಬ್ದಚಿತ್ರದಲ್ಲಿತ್ತು.
ಬೊಪ್ಪೇಗೌಡನಪುರ ಹೋಬಳಿಯ ಸುಮಾರು 25 ಎಕರೆ ಪ್ರದೇಶಕ್ಕೆ ನೀರಾವರಿ ಸೌಲಭ್ಯ ಕಲ್ಪಿಸುವ ಬಹುನಿರೀಕ್ಷಿತ ₹ 600 ಕೋಟಿ ವೆಚ್ಚದ ಪೂರಿಗಾಲಿ ಹನಿ ಮತ್ತು ತುಂತುರು ನೀರಾವರಿ ಯೋಜನೆಯ ಸಮಗ್ರ ಮಾಹಿತಿಯನ್ನೂ ನೀಡಲಾಗಿತ್ತು. ಇನ್ನೊಂದು ಭಾಗದಲ್ಲಿ, ಕಾವೇರಿ ನದಿಯ ಹರಿವಿನ ಸುಂದರ ಪ್ರಕೃತಿ ಸೌಂದರ‍್ಯ ಹಾಗೂ ಕಾವೇರಿ ವನ್ಯಜೀವಿ ಧಾಮ ಮತ್ತು ದಟ್ಟ ಅರಣ್ಯಗಳಿಂದ ಸುತ್ತುವರಿದಿರುವ ರಮಣೀಯ ಕಣಿವೆ, ರಭಸದಿಂದ ಹರಿಯುವ ನೀರಿನ ಸೆಳವುಳ್ಳ ಪುಟ್ಟ ಗ್ರಾಮವಾಗಿರುವ ತಾಲ್ಲೂಕಿನ ಹಲಗೂರು ಹೋಬಳಿಯ ಪ್ರಸಿದ್ಧ ಯಾತ್ರಾ ಸ್ಥಳವಾದ ಮುತ್ತತ್ತಿಯ ಚಿತ್ರಣವನ್ನು ತೋರಿಸಲಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.