
ಶ್ರೀರಂಗಪಟ್ಟಣ: ‘ಎಲ್ಲ ಕ್ಷೇತ್ರಗಳಲ್ಲಿ ತಂತ್ರಜ್ಞಾನ ದಿನ ದಿನಕ್ಕೂ ಬದಲಾಗುತ್ತಿದ್ದು, ಮಕ್ಕಳ ಭವಿಷ್ಯದ ದೃಷ್ಟಿಯಿಂದ ತಾಂತ್ರಿಕ ಕೌಶಲ್ಯ ಕಲಿಸುವುದು ಅನಿವಾರ್ಯ’ ಎಂದು ಬೆಂಗಳೂರಿನ ಸಾಸ್ಮೋಸ್ ಕಂಪೆನಿ ವ್ಯವಸ್ಥಾಪಕ ನಿರ್ದೇಶಕ ಎಚ್.ಜಿ. ಚಂದ್ರಶೇಖರ್ ಹೇಳಿದರು.
ಪಟ್ಟಣದಲ್ಲಿ ವಿದ್ಯಾಭಾರತಿ ಪಬ್ಲಿಕ್ ಶಾಲೆಯ ನೂತನ ಕಟ್ಟಡ ಹಾಗೂ ಕ್ರೀಡೋತ್ಸವ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು. ‘ಪ್ರಾಥಮಿಕ ಶಿಕ್ಷಣ ಹಂತದಲ್ಲಿ ಉತ್ತಮ ಅಡಿಪಾಯ ಹಾಕಿದರೆ ವಿದ್ಯಾರ್ಥಿಗಳ ಉನ್ನತ ಶಿಕ್ಷಣ ಹಾಗೂ ಉದ್ಯೋಗಕ್ಕೆ ನೆರವಾಗುತ್ತದೆ. ಶಿಕ್ಷಣ ಸಂಸ್ಥೆಗಳು ಈ ದಿಸೆಯಲ್ಲಿ ಕಾರ್ಯೋನ್ಮುಖ ಆಗಬೇಕು. ಗಣಿತ ಮತ್ತು ವಿಜ್ಞಾನ ಕಲಿಕೆಗೆ ಹೆಚ್ಚಿನ ಆದ್ಯತೆ ನೀಡಬೇಕು. ಎಐ ತಂತ್ರಜ್ಞಾನ ಪರಿಚಯಿಸಬೇಕು. ಶಿಕ್ಷಣದ ಜತೆಗೆ ಕ್ರೀಡೆ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಮಕ್ಕಳನ್ನು ತೊಡಗಿಸಬೇಕು. ನೆಲಮೂಲ ಸಂಸ್ಕೃತಿಯನ್ನೂ ಪರಿಚಯಿಸಬೇಕು’ ಎಂದು ಸಲಹೆ ನೀಡಿದರು.
ಮೈಸೂರಿನ ಕೃಷ್ಣರಾಜ ಕ್ಷೇತ್ರದ ಶಾಸಕ ಟಿ.ಎಸ್. ಶ್ರೀವತ್ಸ ಮಾತನಾಡಿ, ‘ಎಲ್ಲ ಕ್ಷೇತ್ರಗಳಲ್ಲಿ ಸ್ಪರ್ಧೆ ಹೆಚ್ಚುತ್ತಿದೆ. ಮಕ್ಕಳ ಆಸಕ್ತಿಯನ್ನು ಎಳವೆಯಲ್ಲೇ ಗುರುತಿಸಿ ಅಗತ್ಯ ಪ್ರೋತ್ಸಾಹ ನೀಡಬೇಕು. ಶಿಕ್ಷಕರು ಮಾತ್ರವಲ್ಲದೆ ಪೋಷಕರು ಕೂಡ ಮಕ್ಕಳ ವರ್ತನೆಯ ಬಗ್ಗೆ ನಿಗಾ ವಹಿಸಬೇಕು. ವಿದ್ಯಾ ಭಾರತಿ ಶಿಕ್ಷಣ ಸಂಸ್ಥೆ ಮಕ್ಕಳಲ್ಲಿ ದೇಶಭಕ್ತಿ ಮೂಡಿಸುವ ಕೆಲಸ ಮಾಡುತ್ತಿರುವುದು ಸಕಾರಾತ್ಮಕ ಬೆಳವಣಿಗೆ’ ಎಂದರು.
ಸೇವಾ ಭಾರತಿ ಟ್ರಸ್ಟ್ ಅಧ್ಯಕ್ಷ ವಿ. ಭಾನುಪ್ರಕಾಶ್ ಶರ್ಮಾ ಅಧ್ಯಕ್ಷತೆ ವಹಿಸಿದ್ದರು. ಶಾಲೆಯ ಕಾರ್ಯದರ್ಶಿ ಕೆ.ಎಸ್. ಲಕ್ಷ್ಮೀಶ ಶರ್ಮಾ ವಾರ್ಷಿಕ ವರದಿ ಮಂಡಿಸಿದರು. ಸಂಸ್ಥೆಯ ಸಂಯೋಜಕ ಆರ್. ರಂಗನಾಥ್ ನೇತೃತ್ವದಲ್ಲಿ ವಿದ್ಯಾರ್ಥಿಗಳು ಆರ್‌ಎಸ್‌ಎಸ್ ಸಂಘಟನೆಯ ಘೋಷ ಪ್ರದರ್ಶಿಸಿದರು. ವಂದೇಮಾತರಂ ಗೀತೆ ರಚನೆಯ 150ನೇ ವರ್ಷಾಚರಣೆಯನ್ನು ಸ್ಮರಿಸಲಾಯಿತು. ವಿದ್ಯಾರ್ಥಿಗಳು ಮಲ್ಲಕಂಬ, ಲೆಜಿಮ್ಸ್ ಇತರ ಕಲೆಗಳನ್ನು ಪ್ರದರ್ಶಿಸಿದರು.
ಎಬಿವಿಪಿ ರಾಜ ಘಟಕದ ಅಧ್ಯಕ್ಷ ಎಂ.ಎನ್. ರವಿ, ಎಂಜಿನಿಯರ್ ಎಚ್.ಜಿ. ಉದಯಕುಮಾರ್, ಆರ್. ಕೃಷ್ಣನ್, ಬಿ.ವಿ. ವಿಷ್ಣುಮೂರ್ತಿ, ಕೃಷ್ಣ ಚಿದಂಬರಂ, ಮಧುಸೂದನ್ ಪಾಲ್ಗೊಂಡಿದ್ದರು. ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.