ADVERTISEMENT

ಪಾಂಡವಪುರ | ಸಮಸ್ಯೆ ಬಗೆಹರಿಸಲು ತಹಶೀಲ್ದಾರ್ ಭರವಸೆ

​ಪ್ರಜಾವಾಣಿ ವಾರ್ತೆ
Published 5 ಫೆಬ್ರುವರಿ 2026, 4:47 IST
Last Updated 5 ಫೆಬ್ರುವರಿ 2026, 4:47 IST
ಪಾಂಡವಪುರ ಪಟ್ಟಣದ ತಾಲ್ಲೂಕು ಆಡಳಿತ ಸೌಧದಲ್ಲಿ ಬುಧವಾರ ತಹಶೀಲ್ದಾರ್ ಬಸವರಡ್ಡೆಪ್ಪ ರೋಣದ ಅಧ್ಯಕ್ಷತೆಯಲ್ಲಿ ನಡೆದ ಪ.ಜಾ, ಪ.ಪಂ ಜನಾಂಗ‌ದ ಕುಂದುಕೊರತೆ ಸಭೆಯಲ್ಲಿ ತಾ.ಪಂ.ಇಒ ಎಂ.ಎಸ್.ವೀಣಾ, ಸಮಾಜ ಕಲ್ಯಾಣಾಧಿಕಾರಿ ಕೋಮಲ ಇದ್ದಾರೆ
ಪಾಂಡವಪುರ ಪಟ್ಟಣದ ತಾಲ್ಲೂಕು ಆಡಳಿತ ಸೌಧದಲ್ಲಿ ಬುಧವಾರ ತಹಶೀಲ್ದಾರ್ ಬಸವರಡ್ಡೆಪ್ಪ ರೋಣದ ಅಧ್ಯಕ್ಷತೆಯಲ್ಲಿ ನಡೆದ ಪ.ಜಾ, ಪ.ಪಂ ಜನಾಂಗ‌ದ ಕುಂದುಕೊರತೆ ಸಭೆಯಲ್ಲಿ ತಾ.ಪಂ.ಇಒ ಎಂ.ಎಸ್.ವೀಣಾ, ಸಮಾಜ ಕಲ್ಯಾಣಾಧಿಕಾರಿ ಕೋಮಲ ಇದ್ದಾರೆ   

ಪಾಂಡವಪುರ: ಒಳ ಮೀಸಲಾತಿ ಸಂಬಂಧಿತ ಜಾತಿಗಳಿಗೆ ಅಧಿಕಾರಿಗಳು ಜಾತಿ ಪ್ರಮಾಣ ಪತ್ರ ನೀಡಲು ವಿಳಂಬ ಮಾಡುತ್ತಿರುವುದರಿಂದ ಶಿಕ್ಷಣ ಮತ್ತು ಉದ್ಯೋಗದಲ್ಲಿ ಮೀಸಲಾತಿ ಪಡೆಯಲು ತೊಂದರೆಯಾಗುತ್ತಿದೆ ಎಂದು ದಲಿತ ಮುಖಂಡ ಕಡಬ ಪುಟ್ಟರಾಜು ಆರೋಪಿಸಿದರು.

ಪಟ್ಟಣದ ತಾಲ್ಲೂಕು ಆಡಳಿತ ಸೌಧದಲ್ಲಿ ಬುಧವಾರ ತಾಲ್ಲೂಕು ಆಡಳಿತ ಮತ್ತು ಸಮಾಜ ಕಲ್ಯಾಣ ಇಲಾಖೆಯು ತಹಶೀಲ್ದಾರ್ ಬಸವರಡ್ಡೆಪ್ಪ ರೋಣದ ಅಧ್ಯಕ್ಷತೆಯಲ್ಲಿ ಆಯೋಜಿಸಿದ್ದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗದ ಜನಾಂಗಗಳ ಕುಂದುಕೊರತೆ ಸಭೆಯಲ್ಲಿ ಅವರು ಮಾತನಾಡಿದರು.

ಶಾಲಾ–ಕಾಲೇಜು ಹಾಗೂ ವಸತಿ ಶಾಲೆಯಲ್ಲಿ ಪ್ರವೇಶ ಪಡೆಯಲು ಅರ್ಜಿ ಕರೆಯಲಾಗಿದೆ. ಈ ವೇಳೆ ಒಳ ಮೀಸಲಾತಿ ಪಡೆಯಲು ಜಾತಿ ಪ್ರಮಾಣ ಪತ್ರದ ಅಗತ್ಯವಿದೆ. ಆದರೆ ಅಧಿಕಾರಿಗಳು ವಿಳಂಬ ಮಾಡುತ್ತಿದ್ದಾರೆ ಎಂದು ದೂರಿದರು.

ADVERTISEMENT

ಎಸ್‌.ಸಿ.ಎಸ್‌.ಪಿ, ಟಿಎಸ್‌ಪಿ ಅನುಷ್ಠಾನದಲ್ಲಿ ದೋಷ: ಎಸ್‌ಸಿಎಸ್‌ಪಿ ಮತ್ತು ಟಿಎಸ್‌ಪಿ ಯೋಜನೆಯು ಸಮರ್ಪಕವಾಗಿ ಅನುಷ್ಠಾನಗೊಳ್ಳುತ್ತಿಲ್ಲ. ದುರುಪಯೋಗವಾಗುತ್ತಿದೆ. ದಲಿತರ ಅನುದಾನ ಇತರೆ ಕಾರ್ಯಕ್ರಮಗಳಿಗೆ ಬಳಕೆಯಾಗುತ್ತಿದೆ. ಈ ಬಗ್ಗೆ ಪರಿಶೀಲನೆ ನಡೆಸಿ, ಅನುದಾನ ಸಮರ್ಪಕವಾಗಿ ಬಳಕೆಯಾಗುವಂತೆ ಕ್ರಮವಹಿಸಬೇಕು ಎಂದು ಶೋಷಿತರು ಹಾಗೂ ಸಾಮಾಜಿಕ ಕಾರ್ಯಕರ್ತರ ಸಮಿತಿಯ ಅಧ್ಯಕ್ಷ ಮದನ್ ಕುಮಾರ್ ಒತ್ತಾಯಿಸಿದರು.

ಮಕ್ಕಳ ಸಂಖ್ಯೆ ಹೆಚ್ಚಿಸಿ: ಹಾಸ್ಟಲ್‌ಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಇಳಿಮುಖವಾಗುತ್ತಿದ್ದು, ಹಾಸ್ಟೆಲ್‌ ಮುಚ್ಚುವ ಸ್ಥಿತಿಯಲ್ಲಿದೆ. ಹೀಗಾಗಿ ಸಮಾಜ ಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ಇಲಾಖೆಯ ಅಧಿಕಾರಿಗಳು ಹಾಸ್ಟೆಲ್‌ಗಳಲ್ಲಿ ವಿದ್ಯಾರ್ಥಿ ಸಂಖ್ಯೆ ಹೆಚ್ಚಿಸಲು ಮುಂದಾಗಬೇಕು ಎಂದು ದಲಿತ ಮುಖಂಡ ಗಿರಿಯಾರಹಳ್ಳಿ ಶ್ರೀಮೂರ್ತಿ ಸಲಹೆ ನೀಡಿದರು.

ಮಾಹಿತಿ ನೀಡಿ: ದಲಿತರಿಗೆ ಮೀಸಲಿಟ್ಟಿರುವ ಸರ್ಕಾರಿ ಯೋಜನೆಗಳ ಮಾಹಿತಿಗಳನ್ನು ಜನರಿಗೆ ತಿಳಿಸಿ ಸಮರ್ಪಕವಾಗಿ ಅನುಷ್ಠಾನಗೊಳ್ಳಬೇಕಿರುವುದರಿಂದ ಎಲ್ಲಾ ಇಲಾಖೆಗಳ ಅಧಿಕಾರಿಗಳು ಹಾಗೂ ದಲಿತ ಸಂಘಟನೆಗಳ ಕಾರ್ಯಕರ್ತರ ಮಾಹಿತಿ ಕಾ‌ರ್ಯಾಗಾರ ನಡೆಸಬೇಕು ಎಂದು ದಸಂಸ ಮುಖಂಡ ಹಾರೋಹಳ್ಳಿ ಸೋಮಶೇಖರ್ ಸಲಹೆ ನೀಡಿದರು.

ತಹಶೀಲ್ದಾರ್ ಬಸವರಡ್ಡೆಪ್ಪ ರೋಣದ ಮಾತನಾಡಿ, ಪ್ರಮುಖವಾಗಿ ದಲಿತರ ಭೂ ಸಮಸ್ಯೆ ಬಗೆಹರಿಸಲು ಮೊದಲ ಆದ್ಯತೆ ನೀಡಲಾಗುವುದು. ಒಳ ಮೀಸಲಾತಿಯ ಜಾತಿ ಪ್ರಮಾಣ ಪತ್ರ ನೀಡಲು ಕೆಲವು ವೇಳೆ ತಂತ್ರಾಂಶ ಸಮಸ್ಯೆ ಎದುರಾಗುತ್ತದೆ. ಅದನ್ನು ಸರಿಪಡಿಸಿಕೊಂಡು ಜಾತಿ ಪ್ರಮಾಣ ಪತ್ರ ನೀಡಲು ಕ್ರಮವಹಿಸಲಾಗುವುದು. ಉಳಿದಂತೆ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳ ಜನಾಂಗದ ಕುಂದುಕೊರತೆಗಳನ್ನು ಪರಿಹರಿಸಲು ಅಗತ್ಯ ಕ್ರಮವಹಿಸಲಾಗುವುದು ಎಂದು ಭರವಸೆ ನೀಡಿದರು.

ತಾ.ಪಂ.ಇಒ ಎಂ.ಎಸ್.ವೀಣಾ, ಪ್ರಭಾರಿ ಸಹಾಯಕ ನಿರ್ದೇಶಕಿ ಕೋಮಲ, ತಾಲ್ಲೂಕು ಮಟ್ಟದ ಅಧಿಕಾರಿಗಳು, ಪಿಡಿಒಗಳು ಹಾಗೂ ದಲಿತ ಮುಖಂಡರು ಸಭೆಯಲ್ಲಿ ಹಾಜರಿದ್ದರು.

‘ಕುಂದುಕೊರತೆ ಸಭೆಯ ನಡಾವಳಿಗಳು ಮತ್ತು ತೀರ್ಮಾನಗಳು ಅನುಷ್ಠಾಗೊಳ್ಳುತ್ತಿಲ್ಲ. ಕಾಟಾಚಾರಕ್ಕೆ ಸಭೆ ನಡೆಸಲಾಗುತ್ತಿದೆ. ಹಾಗಾಗಿ ಮೊದಲು ಸಭೆಯ ತೀರ್ಮಾನಗಳ ಅನುಷ್ಠಾನಕ್ಕೆ ಕ್ರಮವಹಿಸಬೇಕಿದೆ
ಟಿ.ಎಸ್.ಹಾಳಯ್ಯ ನಿರ್ದೇಶಕ ಟಿಎಪಿಸಿಎಂಎಸ್‌

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.