ADVERTISEMENT

ಸುಮಲತಾ ಭೇಟಿ ಕೊಟ್ಟ ಜಾಗದಲ್ಲಿ ಆತಂಕ

ಮಂಡ್ಯ, ಪಾಂಡವಪುರ, ಕೊಪ್ಪ, ನಾಗಮಂಗಲಕ್ಕೆ ಭೇಟಿ, ಅಧಿಕಾರಿಗಳು ಸಾಥ್‌: ಈಗ ಬಹುತೇಕ ಜನರಲ್ಲಿ ಭಯ

​ಪ್ರಜಾವಾಣಿ ವಾರ್ತೆ
Published 7 ಜುಲೈ 2020, 8:53 IST
Last Updated 7 ಜುಲೈ 2020, 8:53 IST
   

ಮಂಡ್ಯ: ಸಂಸದೆ ಎ.ಸುಮಲತಾ ಅವರಿಗೆ ಕೋವಿಡ್‌ –19 ದೃಢಪಟ್ಟಿದ್ದು ಕಳೆದೊಂದು ವಾರದಲ್ಲಿ ಅವರು ಜಿಲ್ಲೆಯ ವಿವಿಧೆಡೆ ಭೇಟಿ ಕೊಟ್ಟ ಸ್ಥಳಗಳಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ.

ಜೂನ್‌ 30ರಂದು ಸುಮಲತಾ ಅವರು ನಾಗಮಂಗಲ ತಾಲ್ಲೂಕು ಬ್ರಹ್ಮದೇವರಹಳ್ಳಿ ಭೇಟಿ ನೀಡಿ ವಿವಿಧ ಕಾಮಗಾರಿಗೆ ಚಾಲನೆ ನೀಡಿದ್ದರು. ಅವರೊಂದಿಗೆ ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷ ಡಾ.ನಿರ್ಮಲಾನಂದನಾಥ ಸ್ವಾಮೀಜಿ ಪಾಲ್ಗೊಂಡಿದ್ದರು. ಜೊತೆಗೆ ಮಂಡ್ಯ ರೈತ ಸಭಾಂಗಣದಲ್ಲಿ ಕೊರೊನಾ ವಾರಿಯರ್ಸ್‌ಗಳಿಗೆ ಅಭಿನಂದಿಸಿದ್ದರು. ಅವರಿಗೆ ಬೆಂಬಲಿಗರು ಹಾಗೂ ಅಧಿಕಾರಿಗಳು ಸಾಥ್‌ ಕೊಟ್ಟಿದ್ದರು. ಪಾಂಡವಪುರ ಸರ್ಕಾರಿ ಶಾಲೆಯ ಕಾಂಪೌಂಡ್‌ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿದ್ದರು.

ಜುಲೈ 1ರಂದು ಬೆಸಗರಹಳ್ಳಿ ಗ್ರಾಮಕ್ಕೆ ಭೇಟಿ ನೀಡಿ ಬಸ್‌ ನಿಲ್ದಾಣ ಕಾಮಗಾರಿ ವೀಕ್ಷಣೆ ಮಾಡಿದ್ದರು. ಸಮುದಾಯ ಭವನದ ಬಳಿ ಹಸಿರು ಕರ್ನಾಟಕ ಯೋಜನೆಯಡಿ ಸಸಿ ನೆಟ್ಟಿದ್ದರು ಹಾಗೂ ಗ್ರಾಮಸ್ಥರಿಗೆ ಸಸಿ ವಿತರಣೆ ಮಾಡಿದ್ದರು. ಈಗ ಈ ಸ್ಥಳಗಳಲ್ಲಿ ಆತಂಕ ಮನೆ ಮಾಡಿದೆ.

ADVERTISEMENT

‘ಸಂಸದರು ಓಡಾಡಿರುವ ಜಾಗದ ಮಾಹಿತಿ ಪಡೆಯಲಾಗುವುದು. ಅವರ ಸಂಪರ್ಕಕ್ಕೆ ಬಂದಿರುವವರನ್ನು ಕ್ವಾರಂಟೈನ್ ಮಾಡಲಾಗುವುದು’ ಎಂದು ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ್ ಹೇಳಿದರು.

ಶ್ರೀರಂಗಪಟ್ಟಣ ತಾಲ್ಲೂಕು ಅರಕೆರೆ ಆಸ್ಪತ್ರೆಯಲ್ಲಿ ವೈದ್ಯಾಧಿಕಾರಿ, ಶುಶ್ರೂಷಕಿಯರು ಹಾಗೂ ಆಂಬುಲೆನ್ಸ್‌ ಚಾಲಕನಲ್ಲಿ ಕೋವಿಡ್‌ ಪತ್ತೆಯಾಗಿದ್ದು ಆಸ್ಪತ್ರೆಯನ್ನು ಸೀಲ್‌ಡೌನ್‌ ಮಾಡ ಲಾಗಿದೆ.

ಸೀಲ್‌ಡೌನ್‌ ಇಲ್ಲ: ನಗರದ ಸುಭಾಷ್‌ ನಗರದಲ್ಲಿರುವ ವಿಶೇಷ ಭೂಸ್ವಾಧೀನಾಧಿಕಾರಿ ಸಿಬ್ಬಂದಿ ಯೊಬ್ಬರಿಗೆ ಕೋವಿಡ್‌ ಪತ್ತೆಯಾಗಿದೆ. ಆದರೆ ಅವರು ಆಸ್ಪತ್ರೆಗೆ ಮಾಹಿತಿ ನೀಡದೇ ಪರಾರಿಯಾಗಿದ್ದಾರೆ ಎಂದು ಸ್ಥಳೀಯರು ದೂರಿದ್ದಾರೆ.

‘ಕಚೇರಿಗೆ ನಿತ್ಯ ನೂರಾರು ರೈತರು ಬರುತ್ತಾರೆ. ಕಚೇರಿಯ ಗೇಟ್‌ನ ಒಳಗೆ ತೆರಳುತ್ತಾರೆ. ಅಲ್ಲಿ ಯಾವುದೇ ಸೀಲ್‌ಡೌನ್‌ ಮಾಡಿಲ್ಲ. ಸೋಂಕು ನಿವಾರಕ ಸಿಂಪಡಣೆ ಮಾಡಿಲ್ಲ’ ಎಂದು ಸುಭಾಷ್‌ನಗರದ ನಿವಾಸಿಗಳು ದೂರಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.