ADVERTISEMENT

ವಿಜೃಂಭಣೆಯ ಕಾರ್ಕಹಳ್ಳಿ ಬಸವೇಶ್ವರಸಾಮಿ ರಥೋತ್ಸವ

​ಪ್ರಜಾವಾಣಿ ವಾರ್ತೆ
Published 12 ಮಾರ್ಚ್ 2025, 15:24 IST
Last Updated 12 ಮಾರ್ಚ್ 2025, 15:24 IST
ಭಾರತೀನಗರ ಸಮೀಪದ ಕಾರ್ಕಹಳ್ಳಿಯಲ್ಲಿ ಬಸವೇಶ್ವಸ್ವಾಮಿ ರಥೋತ್ಸವವು ವಿಜೃಂಭಣೆಯಿಂದ ನೆರವೇರಿತು
ಭಾರತೀನಗರ ಸಮೀಪದ ಕಾರ್ಕಹಳ್ಳಿಯಲ್ಲಿ ಬಸವೇಶ್ವಸ್ವಾಮಿ ರಥೋತ್ಸವವು ವಿಜೃಂಭಣೆಯಿಂದ ನೆರವೇರಿತು   

ಭಾರತೀನಗರ: ಸಮೀಪದ ಕಾರ್ಕಳ್ಳಿ ಬಸವೇಶ್ವರಸ್ವಾಮಿ ರಥೋತ್ಸವ ಬುಧವಾರ ಸಾವಿರಾರು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ನೆರವೇರಿತು.

ಕಂದಾಯ ಇಲಾಖೆ, ಮುಜರಾಯಿ ಇಲಾಖೆಗಳ ನೇತ್ವೃತ್ವದಲ್ಲಿ ನಡೆದ ರಥೋತ್ಸವದಲ್ಲಿ ವಿವಿಧ ಹೂವುಗಳಿಂದ ಅಲಂಕರಿಸಲಾಗಿದ್ದ ರಥದಲ್ಲಿ ಬಸವೇಶ್ವರಸ್ವಾಮಿ ದೇವರ ಮೂಲ ಉತ್ಸವ ಮೂರ್ತಿಗಳನ್ನು ಪ್ರತಿಷ್ಠಾಪಿಸಿದ್ದು, ಮೂರ್ತಿಗಳನ್ನು ಆಭರಣಗಳಿಂದ ಸರ್ವಾಲಂಕೃತಗೊಳಿಸಲಾಗಿತ್ತು.

ದೇವಾಲಯದ ಅರ್ಚಕರು, ಊರಿನ ಮುಖಂಡರು ಪೂಜೆ ಸಲ್ಲಿಸಿದರು. ನಂತರ ಗ್ರೇಡ್‌-2 ತಹಶೀಲ್ದಾರ್‌ ಸೋಮಶೇಖರ್‌, ಕಂದಾಯ ಇಲಾಖೆಯ ರಾಜಸ್ವ ನಿರೀಕ್ಷಕ ರವೀಂದ್ರ, ಗ್ರಾಮ ಲೆಕ್ಕಾಧಿಕಾರಿ ಮನೋಹರ್, ರವಿ, ಬಸವೇಶ್ವರ ಸ್ವಾಮಿ ರಥಕ್ಕೆ ಪೂಜೆ ಸಲ್ಲಿಸಿ ರಥೋತ್ಸವಕ್ಕೆ ಚಾಲನೆ ನೀಡಿದರು.

ADVERTISEMENT

ಶಾಸಕ ಕೆ.ಎಂ.ಉದಯ್‌, ಪೊಲೀಸ್‌ ಇನ್‌ಸ್ಪೆಕ್ಟರ್ ಆನಂದ್‌, ಮೈಸೂರು ಸಿಪಿಐ ಪುಟ್ಟಸ್ವಾಮೀಗೌಡ, ಗ್ರಾಮ ಸಹಾಯಕ ಕೃಷ್ಣ ಸೇರಿದಂತೆ ಮತ್ತಿತರರು ಪೂಜೆ ಸಲ್ಲಿಸಿದರು.

ಚಿಕ್ಕಅರಸೀನಕೆ ಕಾಲಭೈರವೇಶ್ವರ ದೇವರ ಬಸವ, ಪೂಜೆ, ಬಸವೇಶ್ವರಸ್ವಾಮಿ ದೇವರ ಬಸವ, ಪೂಜೆ, ಬೊಮ್ಮನಹಳ್ಳಿ ಪಟ್ಟಲದಮ್ಮ ದೇವರ ಪೂಜೆ, ನಂದಿ ಕಂಭಗಳು, ಧ್ವಜಗಳು, ವಿರಾಗಾಸೆ, ಡೊಳ್ಳು, ಚರ್ಮವಾದ್ಯ ಮೇಳಗಳ ಸಮೇತ ರಥವು ರಥ ರಾಜಬೀದಿಯಲ್ಲಿ ಸಂಚರಿಸಿತು. ದಾರಿಯುದ್ದಕ್ಕೂ ಗ್ರಾಮಸ್ಥರು ರಥಕ್ಕೆ ದೀಪಾರತಿ ಸಲ್ಲಿಸಿದರು. ರಥ ಬೀದಿಯಲ್ಲಿ, ದೇವಾಲಯದ ಮುಭಾಗದ ರಂಗಸ್ಥಳದಲ್ಲಿ ನೆರೆದಿದ್ದ ಭಕ್ತರು ಹಣ್ಣು, ಜವನ ಎಸೆದು ಭಕ್ತಿ ಸಮರ್ಪಿಸಿದರು.

ದೇವಾಲಯದ ಮುಂಭಾಗ ಅರ್ಚಕರು ಅಂತಿಮ ಪೂಜೆ ಸಲ್ಲಿಸಿ ರಥೋತ್ಸವಕ್ಕೆ ಮಂಗಳ ಹಾಡಿದರು. ರಥೋತ್ಸವದ ನಂತರ ದೇವರ ಪೂಜೆಗಳು, ಬಸವಗಳ ಜೊತೆಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿದವು.

ಸಂಜೆ ನಡೆದ ಕೊಂಡಾಬಂಡಿಗಳ ಉತ್ಸವದಲ್ಲಿ ಪ್ರತೀ ಮನೆಯಿಂದಲೂ ಆರತಿ ನೀಡಿದರು. ಸೋಮವಾರ ಬೆಳಿಗ್ಗೆ ಬಸವೇಶ್ವರಸ್ವಾಮಿ ದೇವಾಲಯದ ಮುಂಭಾಗ ನಡೆದ ಕೊಂಡೋತ್ಸವದಲ್ಲಿ ಅರ್ಚಕರಾದ ರವಿ, ಚಿಕ್ಕಅರಸಿನಕೆರೆ ಅರ್ಚಕ ಕರಗ, ಪೂಜೆಗಳನ್ನೊತ್ತು ಕೊಂಡ ಹಾಯ್ದರು. ಭಕ್ತರು ಕೊಂಡೋತ್ಸವವನ್ನು ಕಣ್ತುಂಬಿಕೊಂಡರು.

ಮಧ್ಯಾಹ್ನ ಅನ್ನ ಸಂತರ್ಪಣೆ ಏರ್ಪಡಿಸಿದ್ದು ಭಕ್ತರು ಪ್ರಸಾದ ಸ್ವೀಕರಿಸಿದರು. ಶನಿವಾರ ಮುತ್ತುರಾಯನ ಸೇವೆ ಮಾಡುವ ಮೂಲಕ ಜಾತ್ರಾ ಮಹೋತ್ಸವಕ್ಕೆ ತೆರೆ ಬೀಳಲಿದೆ. ಕಾರ್ಕಹಳ್ಳಿ, ದೇವೇಗೌಡನದೊಡ್ಡಿ ಗ್ರಾಮಗಳ ಗ್ರಾಮಸ್ಥರು ಬಸವೇಶ್ವರಸ್ವಾಮಿ ಜಾತ್ರಾ ಮಹೋತ್ಸವದ ಉಸ್ತುವಾರಿ ವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.