ಮಳವಳ್ಳಿ: ರಂಗಭೂಮಿಯಿಂದಾಗಿ ನಾಡಿನ ಉನ್ನತ ಸಂಸ್ಕೃತಿ, ಕಲೆ, ಪರಂಪರೆ ಉಳಿಸಿ ಬೆಳೆಸುವುರೊಂದಿಗೆ ಜನರಲ್ಲಿ ಸಮಾಜಮುಖಿ ಚಿಂತನೆ ಬೆಳೆಯಲಿದೆ ಎಂದು ನಟ ಮಂಡ್ಯ ರಮೇಶ್ ಅಭಿಪ್ರಾಯಪಟ್ಟರು.
ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಮಂಗಳವಾರ ಯೂನಿವರ್ಸಲ್ ಸೇವಾ ಟ್ರಸ್ಟ್ ಸಹಯೋಗದೊಂದಿಗೆ ರಂಗ ಬಂಡಿ ಮಳವಳ್ಳಿ ಆಯೋಜಿದ್ದ ಮಳವಳ್ಳಿ ಸುಂದರಮ್ಮ ಸ್ಮರಣಾರ್ಥ ಏಳು ದಿನದ ನಾಟಕೋತ್ಸವ ಹಾಗೂ ರಂಗಭೂಮಿ ನಟಿ ಗಿರಿಜಾ ಲೋಕೇಶ್ ಅವರಿಗೆ ರಂಗ ಪ್ರಶಸ್ತಿ ಪ್ರದಾನ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಈ ನಾಡಿನಲ್ಲಿ ರಂಗಭೂಮಿ ಕಲೆಗೆ ತನ್ನದೇ ಆದ ಇತಿಹಾಸವಿದೆ. ಈ ಕಲೆ ಜನರ ಬದುಕಿನ ನೈಜ ಚಿತ್ರಣವನ್ನು ಅನಾವರಣಗೊಳಿಸುತ್ತದೆ. ರಂಗಭೂಮಿ ಬೆಳೆದರೆ ಜನರಲ್ಲಿ ಸಮಾಜಮುಖಿ ಚಿಂತನೆಯೂ ಮೂಡಿ ಸಮಾಜದಲ್ಲಿ ಸೌಹಾರ್ದತೆ ಬೆಳೆಯುತ್ತದೆ. ಇಂಥ ತಾಯಿ ಹೃದಯವುಳ್ಳ ನಟಿಗೆ ರಂಗ ಪ್ರಶಸ್ತಿ ದೊರೆತಿರುವುದು ಬಹಳ ಸಂಸತ ತಂದಿದೆ ಎಂದು ಹೇಳಿದರು.
ಮಳವಳ್ಳಿಯಲ್ಲಿ ಶತಮಾನಗಳ ಹಿಂದೆಯೇ ಸ್ತ್ರೀ ಪಾತ್ರಗಳನ್ನು ಪುರುಷರು ಮಾಡುತ್ತಿದ್ದ ಕಾಲಘಟ್ಟದಲ್ಲಿ ಯಾವುದೇ ಅಂಜಿಕೆ ಇಲ್ಲದೆ ಸ್ಪುರದ್ರೂಪಿಯಾದ ಮಳವಳ್ಳಿ ಸುಂದರಮ್ಮ ಅವರು ಬಾಲ ನಟಿಯಾಗಿ ಹಲವು ಪಾತ್ರಗಳಲ್ಲಿ ಅಭಿನಯಿಸಿ ನಾಡಿನಲ್ಲಿ ರಂಗಭೂಮಿ ಕಲೆಗೆ ಹೊಸ ಚೈತನ್ಯವನ್ನು ಮೂಡಿಸಿದರು. ಅದೇ ದಾರಿಯಲ್ಲಿ ನಡೆದು ಬಂದ ಹಿರಿಯ ನಟಿ ಗಿರಿಜಾ ಲೋಕೇಶ್ ಅವರ ಕುಟುಂಬ ರಂಗಭೂಮಿಯ ಉಳಿವಿಗಾಗಿ ಮತ್ತು ಸಿನಿಮ ರಂಗದ ಬೆಳವಣಿಗೆಗಾಗಿ ದುಡಿಯುತ್ತಿದೆ ಎಂದು ಶ್ಲಾಘಿಸಿದರು.
ಬುದ್ಧ, ಬಸವ, ಡಾ.ಬಿ.ಆರ್.ಅಂಬೇಡ್ಕರ್, ಕೆಂಪೇಗೌಡರು ಸೇರಿದಂತೆ ಅನೇಕ ಮಹನೀಯರು ಯಾವುದೇ ಜಾತಿಗೆ ಸೀಮಿತರಾಗದೇ ಸಮಾಜದ ಏಳಿಗೆ ಶ್ರಮಿಸಿದ್ದರು ಎನ್ನುವುದನ್ನು ಎಲ್ಲರೂ ಅರ್ಥೈಸಿಕೊಳ್ಳಬೇಕಿದೆ ಎಂದು ಹೇಳಿದರು.
ರಂಗ ಪ್ರಶಸ್ತಿ ಸ್ವೀಕರಿಸಿ ಹಿರಿಯ ನಟಿ ಗಿರಿಜಾ ಲೋಕೇಶ್ ಮಾತನಾಡಿ, ಯುವಸಮೂಹ ರಂಗಭೂಮಿಯ ಉನ್ನತ ಪರಂಪರೆ, ಇತಿಹಾಸ ಹಾಗೂ ಜನಪದ ಕಲೆಗಳ ಬಗ್ಗೆ ಅರಿವು ಪಡೆದು ರಂಗಭೂಮಿ ಬೆಳವಣಿಗೆ ಮುಂದಾಗಬೇಕು ಎಂದು ಕರೆ ನೀಡಿದರು.
ಕರ್ನಾಟಕ ನಾಟಕ ಅಕಾಡೆಮಿ ಅಧ್ಯಕ್ಷ ಕೆ.ವಿ.ನಾಗರಾಜಮೂರ್ತಿ ಮಾತನಾಡಿ, ಏಳು ದಿನಗಳ ನಾಟಕೋತ್ಸವವು ಯುವಜನತೆಯಲ್ಲಿ ರಂಗಭೂಮಿ ಕಲೆಯ ಬಗ್ಗೆ ಜಾಗೃತಿ ಮೂಡಿಸಲಿ ಎಂದು ಆಶಿಸಿದರು.
ಯೂನಿವರ್ಸಲ್ ಸೇವಾ ಟ್ರಸ್ಟ್ ಪ್ರಧಾನ ಕಾರ್ಯದರ್ಶಿ ಟಿ.ಎಂ ಪ್ರಕಾಶ್ ಅಧ್ಯಕ್ಷತೆ ವಹಿಸಿ ನಾಟಕೋತ್ಸವದ ಬಗ್ಗೆ ಪ್ರಾಸ್ತಾವಿಕವಾಗಿ ಹಾಗೂ ವಿಶ್ವಮಾನವ ವಿಚಾರ ವೇದಿಕೆಯ ಪ್ರಧಾನ ಕಾರ್ಯದರ್ಶಿ ಎನ್.ಎಲ್.ಭರತ್ ರಾಜ್ ಮಾತನಾಡಿದರು.
ಕರ್ನಾಟಕ ನಾಟಕ ಅಕಾಡೆಮಿ ಮಾಜಿ ಅಧ್ಯಕ್ಷ ಶ್ರೀನಿವಾಸ್.ಜಿ.ಕಪ್ಪಣ್ಣ, ಟಿಎಪಿಸಿಎಂಎಸ್ ಅಧ್ಯಕ್ಷ ಟಿ.ಸಿ.ಚೌಡಯ್ಯ, ಕನ್ನಡ ಸೇನೆಯ ಜಿಲ್ಲಾ ಘಟಕದ ಅಧ್ಯಕ್ಷ ಎಚ್.ಸಿ.ಮಂಜುನಾಥ್, ಸಂಪೂರ್ಣ ಸಾವಯವ ಕೃಷಿಕರ ಸಂಘದ ಅಧ್ಯಕ್ಷ ಎಂ.ಎನ್.ಮಹೇಶ್ ಕುಮಾರ್, ಕಾಲಘಟ್ಟ ಚಿತ್ರ ನಿರ್ಮಾಪಕ ಚಿಕ್ಕೇಗೌಡ, ರಂಗ ಬಂಡಿ ಅಧ್ಯಕ್ಷ ಮಧು ಮಳವಳ್ಳಿ, ಉಮಾಶ್ರೀ ಮಧು ಪಾಲ್ಗೊಂಡಿದ್ದರು.
ಕನ್ನಡ ಮತ್ತು ಸಂಸ್ಕೃತಿ ನಿರ್ದೇಶನಾಲಯದ ಸಹಕಾರದೊಂದಿಗೆ ಮಂಡ್ಯ ರಮೇಶ್ ನಿರ್ದೇಶನದ ಜಾತಿ ವ್ಯವಸ್ಥೆಯ ವಿರುದ್ಧದ ‘ಸ್ಥಾವರವು ಜಂಗಮ’ ನಾಟಕ ಪ್ರದರ್ಶನಗೊಂಡಿತು.
ರಂಗಭೂಮಿ ಕಲೆಯಿಂದ ಬದುಕಿನ ನೈಜ ಚಿತ್ರಣ ಅನಾವರಣ ರಂಗಭೂಮಿ ಬೆಳೆಸಲು ಯುವ ಸಮೂಹಕ್ಕೆ ಕರೆ ‘ಸ್ಥಾವರವು ಜಂಗಮ’ ನಾಟಕ ಪ್ರದರ್ಶನ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.