ADVERTISEMENT

ಮಂಡ್ಯ: ಜಿಲ್ಲೆಯಲ್ಲಿ ಸಾವಿರ ದಾಟಿದ ಸೋಂಕಿತರ ಸಂಖ್ಯೆ

ಜಿಲ್ಲೆಯಲ್ಲಿ 1,010 ರೋಗಿಗಳು ಪತ್ತೆ, 301 ಪ್ರಕರಣ ಸಕ್ರಿಯ

​ಪ್ರಜಾವಾಣಿ ವಾರ್ತೆ
Published 23 ಜುಲೈ 2020, 15:35 IST
Last Updated 23 ಜುಲೈ 2020, 15:35 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ    

ಮಂಡ್ಯ: ಗುರುವಾರ ಒಂದೇ ದಿನ 50 ಮಂದಿಯಲ್ಲಿ ಕೋವಿಡ್‌–19 ಪತ್ತೆಯಾಗಿದ್ದು ಜಿಲ್ಲೆಯಲ್ಲಿ ಒಟ್ಟು ಸೋಂಕಿತರ ಸಂಖ್ಯೆ 1,010ಕ್ಕೆ ಏರಿಕೆಯಾಗಿದೆ.

ದಿನದಿಂದ ದಿನಕ್ಕೆ ಕೋವಿಡ್‌ ರೋಗಿಗಳ ಸಂಖ್ಯೆ ಹೆಚ್ಚುತ್ತಲೇ ಹೋಗುತ್ತಿದೆ. ಬೇರೆ ಜಿಲ್ಲೆಗಳಿಂದ ಬಂದ ಹೆಚ್ಚು ಮಂದಿಯಲ್ಲಿ ಸೋಂಕು ದೃಢಪಟ್ಟಿದೆ. ಇವರಲ್ಲಿ ಬಹುತೇಕ ಮಂದಿಗೆ ಪ್ರಯಾಣ ಇತಿಹಾಸ ಪತ್ತೆಯಾಗಿಲ್ಲ. ಈಗಾಗಲೇ ಪತ್ತೆಯಾಗಿರುವ ರೋಗಿಗಳ ಪ್ರಥಮ ಸಂಪರ್ಕಿತರು ಹೆಚ್ಚಿನವರಿದ್ದಾರೆ. ಬಹುತೇಕ ಮಂದಿ ಒಂದೇ ಕುಟುಂಬದ ಸದಸ್ಯರಾಗಿದ್ದಾರೆ.

ಜಿಲ್ಲಾಸ್ಪತ್ರೆಯಲ್ಲಿ ನಿತ್ಯ ಸ್ವಯಂಪ್ರೇರಿತವಾಗಿ ಕೋವಿಡ್‌ ಪರೀಕ್ಷೆ ಮಾಡಿಸಿಕೊಳ್ಳುತ್ತಿರುವವರ ಸಂಖ್ಯೆ ಹೆಚ್ಚುತ್ತಲೇ ಇದೆ. ರ‍್ಯಾಪಿಡ್‌ ಆಂಟಿಜೆನ್‌ ಕಿಟ್‌ಗಳ ಮೂಲಕವೂ ನಿತ್ಯ ಹಲವರಿಗೆ ಪರೀಕ್ಷೆ ಮಾಡಲಾಗುತ್ತಿದೆ. ಪರೀಕ್ಷೆ ನಡೆಸಿ ಸ್ಥಳದಲ್ಲೇ ಫಲಿತಾಂಶ ಹೇಳಲಾಗುತ್ತಿದೆ. ಪಾಸಿಟಿವ್‌ ಬಂದವರನ್ನು ಸ್ಥಳದಲ್ಲೇ ಕೋವಿಡ್‌ ವಾರ್ಡ್‌ಗೆ ದಾಖಲು ಮಾಡಲಾಗುತ್ತಿದೆ.

ADVERTISEMENT

ಆದಿಚುಂಚನಗಿರಿ ವೈದ್ಯಕೀಯ ಆಸ್ಪತ್ರೆ ಸೇರಿ ಜಿಲ್ಲೆಯಲ್ಲಿ ನಿತ್ಯ ಒಟ್ಟು 1,200 ಮಂದಿಗೆ ಕೋವಿಡ್‌ ಪರೀಕ್ಷೆ ಮಾಡಲಾಗುತ್ತಿದೆ. ಹೀಗಾಗಿ ಸೋಂಕಿತರ ಸಂಖ್ಯೆಯೂ ಹೆಚ್ಚಳವಾಗುತ್ತಿದೆ. ಕೇವಲ 10 ದಿನಗಳಲ್ಲಿ 254 ಮಂದಿಯಲ್ಲಿ ಕೋವಿಡ್‌ ಪತ್ತೆಯಾಗಿದೆ. ಜುಲೈ 14ರಂದು 754 ಇದ್ದ ಸೋಂಕಿತರ ಸಂಖ್ಯೆ ಈಗ 1010ಕ್ಕೆ ಏರಿಕೆಯಾಗಿದೆ. ಜಿಲ್ಲೆಯಲ್ಲಿ ಸೀಲ್‌ಡೌನ್‌ ಮಾಡಲಾದ ಪ್ರದೇಶಗಳ ಸಂಖ್ಯೆ ಏರುಗತಿಯಲ್ಲಿ ಚಲಿಸುತ್ತಿದೆ. ಸೋಂಕಿತರ ಮನೆ ಮುಂದೆ ಮಾತ್ರ ಸೀಲ್‌ಡೌನ್‌ ಮಾಡಲಾಗುತ್ತಿದೆ.

5 ಮಂದಿ ಬಿಡುಗಡೆ: ಕೋವಿಡ್‌ನಿಂದ ಗುಣಮುಖರಾದ 5 ಮಂದಿಯನ್ನು ಗುರುವಾರ ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಯಿತು. ಕೆ.ಆರ್‌.ಪೇಟೆ, ಮದ್ದೂರು, ಮಳವಳ್ಳಿ, ಶ್ರೀರಂಗಪಟ್ಟಣ ತಾಲ್ಲೂಕಿನ ತಲಾ ಒಬ್ಬರು, ರಾಮನಗರ ಜಿಲ್ಲೆಯ ಒಬ್ಬರು ಆಸ್ಪತ್ರೆಯಿಂದ ಮನೆಗೆ ತೆರಳಿದರು.

ಮಹಿಳೆ ಸಾವು; 11ಕ್ಕೇರಿದ ಸಾವು
ಕೋವಿಡ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ 65 ವರ್ಷದ ಮಹಿಳೆಯೊಬ್ಬರು ಗುರುವಾರ ಮೃತಪಟ್ಟರು. ಕೋವಿಡ್‌ ಕಾರ್ಯಸೂಚಿಯಂತೆ ಅವರನ್ನು ಅಂತ್ಯಸಂಸ್ಕಾರ ನೆರವೇರಿಸಲಾಯಿತು.

ಮಹಿಳೆಗೆ ಮಧುಮೇಹ, ಅಧಿಕ ರಕ್ತದೊತ್ತಡ ಹಾಗೂ ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದರು. ಈಚೆಗೆ ಅವರಿಗೆ ಕೋವಿಡ್‌ ದೃಢಪಟ್ಟಿತ್ತು. ವೆಂಟಿಲೇಟರ್‌ನಲ್ಲಿ ಇದ್ದ ಅವರು ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ. ಜಿಲ್ಲೆಯಲ್ಲಿ ಕೋವಿಡ್‌ ಸಾವಿನ ಸಂಖ್ಯೆ 11ಕ್ಕೆ ಏರಿಕೆಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.