
ಶ್ರೀರಂಗಪಟ್ಟಣ: ‘ಹಜರತ್ ಟಿಪ್ಪು ಶಹೀದ್ ವಕ್ಫ್ ಎಸ್ಟೇಟ್‌ನಲ್ಲಿ ಅವ್ಯವಹಾರ ನಡೆದಿದ್ದು, ತನಿಖೆ ನಡೆಸಿ ಸಂಬಂಧಿಸಿದವರ ವಿರುದ್ಧ ಕ್ರಮ ಕೈಗೊಳ್ಳಬೇಕು’ ಎಂದು ಆಗ್ರಹಿಸಿ ಮಂಡ್ಯ ಮತ್ತು ಮೈಸೂರು ಜಿಲ್ಲೆಗಳ ಮುಸ್ಲಿಂ ಮುಖಂಡರು ಶುಕ್ರವಾರ ಪ್ರತಿಭಟನೆ ನಡೆಸಿದರು.
ಇಲ್ಲಿಗೆ ಸಮೀಪದ ಗಂಜಾಂ ಬಳಿಯ ಟಿಪ್ಪು ಸುಲ್ತಾನ್ ಸಮಾಧಿ ಸ್ಥಳ ಗುಂಬಸ್ ಸ್ಮಾರಕದ ಎದುರು ತೋಳಿಗೆ ಕಪ್ಪು ಪಟ್ಟಿ ಧರಿಸಿ, ಟಿಪ್ಪು, ಮಹಾತ್ಮ ಗಾಂಧಿ ಮತ್ತು ಅಂಬೇಡ್ಕರ್ ಭಾವಚಿತ್ರಗಳ ಸಹಿತ ಪ್ರತಿಭಟನೆ ನಡೆಸಿದರು. ಹಜರತ್ ಟಿಪ್ಪು ಸುಲ್ತಾನ್ ಶಹೀದ್ ವಕ್ಫ್ ಎಸ್ಟೇಟ್ ಅಧಿಕಾರಿಗಳ ವಿರುದ್ಧ ಘೋಷಣೆ ಕೂಗಿದರು.
‘ಹಜರತ್ ಟಿಪ್ಪು ಸುಲ್ತಾನ್ ಶಹೀದ್ ವಕ್ಫ್ ಎಸ್ಟೇಟ್ ಅಧಿಕಾರಿಗಳು ಸರ್ಕಾರದ 2010ರ ಗೆಜೆಟ್ ಗಾಳಿಗೆ ತೂರಿ 2021ರಲ್ಲಿ ಸರ್ಕಾರದ ಬೈಲಾಕ್ಕೆ ವಿರುದ್ಧವಾಗಿ ಪ್ರತ್ಯೇಕ ಬೈಲಾ ರಚಿಸಿಕೊಂಡಿದ್ದಾರೆ. ಅಂದಿನ ಜಿಲ್ಲಾ ವಕ್ಫ್ ಬೋರ್ಡ್ ಅಧ್ಯಕ್ಷರು ಕರ್ನಾಟಕ ವಕ್ಫ್ ಬೋರ್ಡ್‌ಗೆ ಕಳುಹಿಸಿ ಒಪ್ಪಿಗೆ ಪಡೆದು ಅಕ್ರಮ ಎಸಗಿದ್ದಾರೆ. ವಕ್ಫ್ ಮಂಡಳಿ ರಾಜ್ಯ ಘಟಕದ ಅಧ್ಯಕ್ಷರು ಮತ್ತು ಅಧಿಕಾರಿಗಳ ಗಮನಕ್ಕೆ ತಂದರೂ ಗಮನ ಹರಿಸುತ್ತಿಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.
‘ಶಿಕ್ಷಣ ಅಥವಾ ಆರೋಗ್ಯ ಇಲಾಖೆಯ ನಿವೃತ್ತ ಅಧಿಕಾರಿಗಳನ್ನು ವಕ್ಫ್ ಎಸ್ಟೇಟ್ ಕಾರ್ಯದರ್ಶಿಯಾಗಿ ನೇಮಕ ಮಾಡಬೇಕು ಎಂದು 2010ರ ಗೆಜೆಟ್‌ನಲ್ಲಿ ಸ್ಪಷ್ಟವಾಗಿ ಉಲ್ಲೇಖಿಸಲಾಗಿದೆ. ಮೂಲ ಗೆಜೆಟ್‌ನ ನಿಯಮ ಉಲ್ಲಂಘಿಸಿ ಕಳೆದ 15 ವರ್ಷಗಳಿಂದ ಸಾಮಾನ್ಯ ವ್ಯಕ್ತಿ ಹಜರತ್ ಶಹೀದ್ ಟಿಪ್ಪು ಸುಲ್ತಾನ್ ವಕ್ಫ್ ಎಸ್ಟೇಟ್ ಕಾರ್ಯದರ್ಶಿಯಾಗಿ ಕೆಲಸ ಮಾಡುತ್ತಿದ್ದಾರೆ. ಟಿಪ್ಪು ವಕ್ಫ್ ಎಸ್ಟೇಟ್ ಅಧ್ಯಕ್ಷ ತನ್ವೀರ್ ಸೇಠ್ ಅವರಿಗೆ ಗೊತ್ತಿದ್ದರೂ ಸುಮ್ಮನಿದ್ದಾರೆ. ಅಕ್ರಮಗಳ ಕುರಿತು ಲೋಕಾಯುಕ್ತ ಮತ್ತು ಜಾರಿ ನಿರ್ದೇಶನಾಲಯಕ್ಕೆ ದೂರು ನೀಡಲಾಗಿದೆ’ ಎಂದು ಮೈಸೂರಿನ ಸಾಮಾಜಿಕ ಕಾರ್ಯಕರ್ತ ಮಹಮದ್ ಅಲೀಂ ಉಲ್ಲಾ ಷರೀಫ್ ಆರೋಪಿಸಿದರು.
ಗುಂಬಸ್‌ಗೆ ಬರುವ ಪ್ರವಾಸಿಗರು ಕುಳಿತು ಊಟ ಮಾಡಲು ವ್ಯವಸ್ಥೆ ಇಲ್ಲ. ಸಿ.ಸಿ ಟಿವಿ ಕ್ಯಾಮೆರಾ ಹಾಕಿಲ್ಲ. ಟಿಪ್ಪು ವಕ್ಫ್ ಎಸ್ಟೇಟ್‌ಗೆ ಸೇರಿದ ವಾಣಿಜ್ಯ ಮಳಿಗೆಗಳು ಶಿಥಿಲವಾಗಿದ್ದು, ಎಷ್ಟೇ ಮನವಿ ಮಾಡಿದರೂ ದುರಸ್ತಿ ಮಾಡಿಸುತ್ತಿಲ್ಲ ಎಂದು ಮಹಮದ್ ದೂರಿದರು.
‘ಸರ್ಕಾರದ ದಾಖಲೆಗಳ ಪ್ರಕಾರ ನಿಯಮ ಉಲ್ಲಂಘಿಸಿರುವುದು ಖಚಿತವಾಗಿದೆ. ಬೈಲಾ ತಿದ್ದುಪಡಿ ಮತ್ತು ಹಣಕಾಸಿನ ವ್ಯವಹಾರಗಳ ಬಗ್ಗೆ ಮಾಹಿತಿ ನೀಡದೆ ಗೌಪ್ಯವಾಗಿ ಇಡಲಾಗಿದೆ. 2010ರ ಬೈಲಾ ಮಾತ್ರ ಪರಿಗಣಿಸಬೇಕು. 2021ರಲ್ಲಿ ರಚಿಸಿಕೊಂಡಿರುವ ಬೈಲಾ ರದ್ದುಪಡಿಸಬೇಕು. ನಿವೃತ್ತ ಅಧಿಕಾರಿಯನ್ನು ವಕ್ಫ್ ಎಸ್ಟೇಟ್ ಕಾರ್ಯದರ್ಶಿ ಸ್ಥಾನಕ್ಕೆ ನೇಮಕ ಮಾಡಬೇಕು’ ಎಂದು ಮುಖಂಡರಾದ ಮುಜೀಬ್, ಇಮ್ರಾನ್, ನಸ್ರುಲ್ಲಾ, ಸಯ್ಯದ್ ಜುಲ್ಫೀಕರ್, ಅಕ್ರಂ ಆಗ್ರಹಿಸಿದರು.
ಶಾಸಕ ರಮೇಶ ಬಂಡಿಸಿದ್ದೇಗೌಡ ಹಾಗೂ ತಹಶೀಲ್ದಾರ್ ಚೇತನಾ ಯಾದವ್ ಸ್ಥಳಕ್ಕೆ ಭೇಟಿ ನೀಡಿದ್ದರು.
‘ಸಚಿವ ಜಮೀರ್ ಅಹಮದ್ ಖಾನ್ ಜತೆ ಚರ್ಚಿಸಿ ಸಮಸ್ಯೆ ಬಗೆಹರಿಸಲಾಗುವುದು’ ಎಂದು ರಮೇಶ ಬಂಡಿಸಿದ್ದೇಗೌಡ ಭರವಸೆ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.