ADVERTISEMENT

ಮಂಡ್ಯ: ಜಿಲ್ಲೆಯಲ್ಲಿ 2 ಸಾವಿರ ದಾಟಿದ ಸೋಂಕಿತರು

25ಕ್ಕೇರಿದ ಮೃತರ ಸಂಖ್ಯೆ, 1093 ಗುಣಮುಖ, 926 ಪ್ರಕರಣಗಳು ಸಕ್ರಿಯ

​ಪ್ರಜಾವಾಣಿ ವಾರ್ತೆ
Published 4 ಆಗಸ್ಟ್ 2020, 14:48 IST
Last Updated 4 ಆಗಸ್ಟ್ 2020, 14:48 IST
ಕೋವಿಡ್‌ ಕೇಂದ್ರ ಕೇಂದ್ರವಾಗುತ್ತಿರುವ ಗಣಂಗೂರು ಮೊರಾರ್ಜಿ ದೇಸಾಯಿ ವಸತಿ ಶಾಲೆಗೆ ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ್‌ ಭೇಟಿ ನೀಡಿ ಪರಿಶೀಲನೆ ನಡೆಸಿದರು
ಕೋವಿಡ್‌ ಕೇಂದ್ರ ಕೇಂದ್ರವಾಗುತ್ತಿರುವ ಗಣಂಗೂರು ಮೊರಾರ್ಜಿ ದೇಸಾಯಿ ವಸತಿ ಶಾಲೆಗೆ ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ್‌ ಭೇಟಿ ನೀಡಿ ಪರಿಶೀಲನೆ ನಡೆಸಿದರು   

ಮಂಡ್ಯ: ನಗರದ ಕೋವಿಡ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಇಬ್ಬರು ಮಂಗಳವಾರ ಮೃತಪಟ್ಟಿದ್ದಾರೆ. ಜಿಲ್ಲೆಯಲ್ಲಿ ಕೋವಿಡ್‌ನಿಂದ ಮೃತಪಟ್ಟವರ ಸಂಖ್ಯೆ 25ಕ್ಕೆ ಏರಿಕೆಯಾಗಿದೆ.

ಮಂಗಳವಾರ ಮೃತಪಟ್ಟ ಇಬ್ಬರಲ್ಲಿ ಒಬ್ಬರು ಚನ್ನಪಟ್ಟಣ ತಾಲ್ಲೂಕಿನವರಾಗಿದ್ದಾರೆ. ಮತ್ತೊಬ್ಬರು ನಗರದ ಮುಸ್ಲಿಂ ಬ್ಲಾಕ್‌ ನಿವಾಸಿಯಾಗಿದ್ದಾರೆ. ಇಬ್ಬರೂ ವಿವಿಧ ಆರೋಗ್ಯ ಸಮಸ್ಯೆಗಳಿಂದ ಚಿಕಿತ್ಸೆ ಪಡೆಯುತ್ತಿದ್ದರು. ಕೋವಿಡ್‌ ದೃಢಪಟ್ಟ ಹಿನ್ನೆಲೆಯಲ್ಲಿ ವೆಂಟಿಲೇಟರ್‌ನಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಕೋವಿಡ್‌ ಕಾರ್ಯಸೂಚಿಯಂತೆ ಮೃತದೇಹಗಳನ್ನು ಅಂತ್ಯಸಂಸ್ಕಾರ ನೆರವೇರಿಸಲಾಯಿತು.

126 ಮಂದಿಗೆ ಸೋಂಕು: ಮಂಗಳವಾರ ಒಂದೇ ದಿನ 126 ಮಂದಿಯಲ್ಲಿ ಕೋವಿಡ್‌–19 ಪತ್ತೆಯಾಗಿದೆ. ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 2,035ಕ್ಕೆ ಏರಿಕೆಯಾಗಿದೆ. ಮಂಡ್ಯ ತಾಲ್ಲೂಕು ಒಂದರಲ್ಲೇ 68 ಮಂದಿಯಲ್ಲಿ ಸೋಂಕು ಪತ್ತೆಯಾಗಿದೆ. ಶ್ರೀರಂಗಪಟ್ಟಣ 16, ಮಳವಳ್ಳಿ 15, ಮದ್ದೂರು 10, ಕೆ.ಆರ್‌.ಪೇಟೆ 10, ನಾಗಮಂಗಲ ತಾಲ್ಲೂಕಿನ 5 ಮಂದಿಯಲ್ಲಿ ಸೋಂಕು ಪತ್ತೆಯಾಗಿದೆ.

ADVERTISEMENT

40 ಮಂದಿ ಕೋವಿಡ್‌ನಿಂದ ಗುಣಮುಖರಾಗಿದ್ದು ಮಂಗಳವಾರ ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಯಿತು. ಮಂಡ್ಯ ತಾಲ್ಲೂಕಿನ 19, ಶ್ರೀರಂಗಪಟ್ಟಣ ತಾಲ್ಲೂಕಿನ 10, ಮದ್ದೂರು 6, ಮಳವಳ್ಳಿ 3, ಪಾಂಡವಪುರ ತಾಲ್ಲೂಕಿನ ಇಬ್ಬರು ಬಿಡುಡೆಯಾದರು.

ಕೋವಿಡ್‌ ಕೇರ್‌ ಕೇಂದ್ರ: ಶ್ರೀರಂಗಪಟ್ಟಣ ತಾಲ್ಲೂಕು ಗಣಂಗೂರು ಗ್ರಾಮದ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ರೂಪಿತವಾಗುತ್ತಿರುವ 150 ಹಾಸಿಗೆ ಸಾಮರ್ಥ್ಯದ ಕೋವಿಡ್‌ ಕೇರ್‌ ಕೇಂದ್ರದ ಕಟ್ಟಡವನ್ನು ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ್‌ ಮಂಗಳವಾರ ಪರಿಶೀಲನೆ ನಡೆಸಿದರು.

ಕೇಂದ್ರದಲ್ಲಿ ಶೌಚಾಲಯ ವ್ಯವಸ್ಥೆ, ಕುಡಿಯುವ ನೀರಿನ ಸೌಲಭ್ಯ ಸೇರಿ ವಿವಿಧ ಸೌಲಭ್ಯಗಳ ಬಗ್ಗೆ ಪರಿಶೀಲಿಸಿದರು. ಇದೇ ವೇಳೆ ಪಾಂಡವಪುರ ತಾಲ್ಲೂಕಿನ ಕೆರೆತೊಣ್ಣೂರು ಗ್ರಾಮಕ್ಕೆ ಭೇಟಿ ನೀಡಿ ಅಲ್ಲಿರುವ ಮೊರಾರ್ಜಿ ವಸತಿ ಶಾಲೆಯನ್ನೂ ಪರಿಶೀಲಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.