ಮಳವಳ್ಳಿ: ಕ್ಷೇತ್ರದ ಅಭಿವೃದ್ಧಿ ಸಹಿಸದೇ, ಪ್ರಗತಿಯ ಅರ್ಥಗೊತ್ತಿಲ್ಲದ ಕೆಲವರು ತಾಲ್ಲೂಕಿನ ಜನರು ತಮ್ಮನ್ನು ಮರೆತು ಬೀಡುತ್ತಾರೋ ಎನ್ನುವ ದೃಷ್ಟಿಯಿಂದ ಇಲ್ಲಸಲ್ಲದ ಟೀಕೆ ಮಾಡುತ್ತಿದ್ದಾರೆ ಎಂದು ಶಾಸಕ ಪಿ.ಎಂ.ನರೇಂದ್ರಸ್ವಾಮಿ ಅವರು ಮಾಜಿ ಶಾಸಕ ಕೆ.ಅನ್ನದಾನಿ ವಿರುದ್ಧ ವಾಗ್ದಾಳಿ ನಡೆಸಿದರು.
ತಾಲ್ಲೂಕಿನ ದೊಡ್ಡೇಗೌಡನಕೊಪ್ಪಲು ಗ್ರಾಮದಲ್ಲಿ ಶನಿವಾರ ₹5 ಕೋಟಿ ವೆಚ್ಚದ ಮೌಲಾನ ಅಜಾದ್ ಮಾದರಿ ಶಾಲೆಯ ನೂತನ ಕಟ್ಟಡಕ್ಕೆ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು.
‘ಈಗಾಗಲೇ ₹250 ಕೋಟಿ ವೆಚ್ಚದ ನಾಲಾ ಆಧುನೀಕರಣ ಕಾಮಗಾರಿ ಪ್ರಗತಿಯಲ್ಲಿದ್ದು, ಅಲ್ಲದೇ ₹300 ಕೋಟಿ ವೆಚ್ಚದ ನಾಲಾ ಪ್ರಗತಿ ಕೆಲಸ ಟೆಂಡರ್ ಹಂತದಲ್ಲಿದ್ದೆ. ನಮ್ಮ ವಿರೋಧಿಗಳು ಉರುಳಾಡುವಂತಹ ರಸ್ತೆಗಳ ಕಾಮಗಾರಿ ನಡೆದಿದೆ’ ಎಂದು ಹೇಳಿದರು.
‘ಕಾನೂನು ಸುವ್ಯವಸ್ಥೆ ಭದ್ರವಾಗಿದೆ. ಜೊತೆಗೆ ನೀರಾವರಿ, ಶಿಕ್ಷಣ, ಆರೋಗ್ಯ ಸೇರಿದಂತೆ ಕ್ಷೇತ್ರವನ್ನು ಸಮಗ್ರವಾಗಿ ಅಭಿವೃದ್ದಿಪಡಿಸಲಾಗುತ್ತಿದೆ. ಇಂತಹ ವ್ಯರ್ಥ ಟೀಕೆಗಳಿಗೆ ವಿರಾಮ ಹಾಕಿ ಅಭಿವೃದ್ಧಿಯತ್ತ ಗಮನ ನೀಡಿರುವಾಗ ಕ್ಷೇತ್ರದ ಜನರು ತಮ್ಮನ್ನು ಮರೆತುಬಿಡುತ್ತಾರೆ ಎಂಬ ಕಾರಣಕ್ಕೆ ನನ್ನ ವಿರುದ್ಧ ಅನಗತ್ಯ ಆರೋಪ ಮಾಡುತ್ತಿದ್ದಾರೆ’ ಎಂದು ಹೇಳಿದರು.
ಮನ್ಮುಲ್ ನಿರ್ದೇಶಕರಾದ ಡಿ.ಕೃಷ್ಣೇಗೌಡ, ಆರ್.ಎನ್.ವಿಶ್ವಾಸ್, ಗ್ರಾ.ಪಂ ಅಧ್ಯಕ್ಷೆ ಹೇಮಾವತಿ, ಟಿಎಪಿಸಿಎಂಎಸ್ ಅಧ್ಯಕ್ಷ ಲಿಂಗರಾಜು, ನಿರ್ದೇಶಕ ಕೆ.ಜೆ.ದೇವರಾಜು, ಗ್ರಾಮಾಂತರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಿ.ಪಿ.ರಾಜು, ಯುವ ಘಟಕದ ಕಾಂಗ್ರೆಸ್ ಅಧ್ಯಕ್ಷ ಶ್ರೀಕಾಂತ್, ಕೆಡಿಪಿ ಸದಸ್ಯ ಶಶಿರಾಜ್, ಉಪಾಧ್ಯಕ್ಷರಾದ ಮಹದೇವು, ಕೆ.ಎನ್.ಮಾದನಾಯಕ್, ಸದಸ್ಯರಾದ ವೆಂಕಟೇಶ್, ಪರಮೇಶ್, ನಾಗೇಂದ್ರ, ಮುಖಂಡರಾದ ಚಿಕ್ಕಹೊನ್ನೇಗೌಡ, ಸಹಕಾರ ಸಂಘದ ಅಧ್ಯಕ್ಷ ಕೃಷ್ಣಮೂರ್ತಿ, ಮುಖಂಡರಾದ ಎಚ್.ಕೆ.ಕೃಷ್ಣಮೂರ್ತಿ, ಶ್ರೀಕಾಂತ್, ಶಿವಪ್ಪ, ಅಸ್ಮತ್, ಮಸ್ರೂದ್, ರಿಯಾಜ್ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಅಧಿಕಾರಿಗಳು ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.