ಪಾಂಡವಪುರ: ‘ಜೆಡಿಎಸ್ ನೇತೃತ್ವದ ಸರ್ಕಾರದ ಅವಧಿಯಲ್ಲಿ ಹಾಲಿನ ಪ್ರೋತ್ಸಾಹಧನ ಪ್ರತಿ ತಿಂಗಳು ಬಿಡುಗಡೆಯಾಗುತ್ತಿತ್ತು. ಆದರೆ, ಈಗಿನ ಸರ್ಕಾರಕ್ಕೆ ಹಾಲು ಉತ್ಪಾದಕರಿಗೆ ಪ್ರೋತ್ಸಾಹ ಧನ ನೀಡಲು ಹಣವಿಲ್ಲದಂತಹ ದರಿದ್ರ ಸ್ಥಿತಿ ಬಂದಿದೆ’ ಎಂದು ಮಾಜಿ ಸಚಿವ ಸಿ.ಎಸ್.ಪುಟ್ಟರಾಜು ಆರೋಪಿಸಿದರು.
ಪಟ್ಟಣದ ಹೊರವಲಯದಲ್ಲಿ ಮಂಗಳವಾರ ಆಯೋಜಿಸಿದ್ದ ಜೆಡಿಎಸ್–ಬಿಜೆಪಿ ಮೈತ್ರಿ ಬೆಂಬಲ ಅಭ್ಯರ್ಥಿ ಸಿ.ಶಿವಕುಮಾರ್ ಪರ ಪ್ರಚಾರ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
‘ಆರು ತಿಂಗಳು ಕಳೆದರೂ ಹಾಲಿಗೆ ಪ್ರೋತ್ಸಾಹ ಧನ ಬಿಡುಗಡೆ ಮಾಡಿಲ್ಲ. ಈ ಸರ್ಕಾರಕ್ಕೆ ರೈತರ ಬಳಿಯೇ ಕಿತ್ತುಕೊಂಡು ತಿನ್ನುವ ಪರಿಸ್ಥಿತಿ ಬಂದಿದೆ. ಎಚ್.ಡಿ.ಕುಮಾರಸ್ವಾಮಿ–ಬಿ.ಎಸ್.ಯಡಿಯೂರಪ್ಪ ಅವರ ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಹೈನುಗಾರಿಕೆ ಉತ್ತೇಜಿಸುವ ನಿಟ್ಟಿನಲ್ಲಿ ಹಾಲಿಗೆ ಪ್ರೋತ್ಸಾಹ ಧನ ನೀಡಲು ಆರಂಭಿಸಲಾಯಿತು. ರಾಜ್ಯದ ಇತಿಹಾಸದಲ್ಲಿಯೇ ಡೇರಿ ಅಭಿವೃದ್ಧಿಗೆ ಶಾಸಕರ ಅನುದಾನ ನೀಡಲು ಅವಕಾಶವಿರಲಿಲ್ಲ. ನಾನು ಅಂದಿನ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರ ಮನವೊಲಿಸಿ ಡೇರಿಗಳ ಅಭಿವೃದ್ಧಿಗೆ ಶಾಸಕರ ಅನುದಾನ ನೀಡಲು ಅನುಮತಿ ಪಡೆದು ಹೈನುಗಾರಿಕೆಗೆ ಉತ್ತೇಜನ ನೀಡಿದ್ದೆ’ ಎಂದರು.
‘ಮನ್‌ಮುಲ್ ಚುನಾವಣೆಯಲ್ಲಿ ನಮ್ಮ ಅಭ್ಯರ್ಥಿ ವಿರುದ್ಧ ಸ್ಪರ್ಧೆ ಮಾಡಿರುವ ವ್ಯಕ್ತಿ ಹಿಂದೆ ನಮ್ಮ ಬಳಿ ಇದ್ದಾಗ ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರ ವಿರೋಧದ ನಡುವೆ ಚುನಾವಣೆಗೆ ನಿಲ್ಲಿಸಿ ಗೆಲ್ಲಿಸಿದ್ದೆ. ಗೆದ್ದು ಪಕ್ಷಕ್ಕೆ ದ್ರೋಹ ಬಗೆದು ಹೋಗಿದ್ದಾರೆ. ಇದೀಗ ಧರ್ಮಯುದ್ಧದ ಬಗ್ಗೆ ಮಾತನಾಡುತ್ತಿದ್ದಾರೆ’ ಎಂದು ರೈತ ಸಂಘ–ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಕಾಡೇನಹಳ್ಳಿ ರಾಮಚಂದ್ರು ವಿರುದ್ಧ ಕಿಡಿಕಾರಿದರು.
ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಎಚ್.ಮಂಜುನಾಥ್ ಮಾತನಾಡಿ, ‘ಎದುರಾಳಿ ಅಭ್ಯರ್ಥಿ ಚುನಾವಣೆಯಲ್ಲಿ ಗೆಲ್ಲುವುದಕ್ಕಾಗಿ ಆಣೆ ಪ್ರಮಾಣ ಮಾಡುವ ಮೂಲಕ ಸುಳ್ಳು ಭರವಸೆ ನೀಡುತ್ತಿದ್ದಾರೆ. ಅಂತಹ ವ್ಯಕ್ತಿಗೆ ಮಣೆಹಾಕಬೇಡಿ. ಸಿ.ಎಸ್.ಪುಟ್ಟರಾಜು ಅವರು ಚುನಾವಣೆಯಲ್ಲಿ ಸೋತರೂ ಕ್ಷೇತ್ರದ ಜನರ ಕಷ್ಟಸುಖಗಳಿಗೆ ಸ್ಪಂದಿಸುತ್ತಿದ್ದಾರೆ. ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಹಿಡಿತ ಸಾಧಿಸಿದರೆ ಮುಂದಿನ ದೊಡ್ಡ ಚುನಾವಣೆಗಳನ್ನು ಎದುರಿಸಲು ಸಹಕಾರಿಯಾಗುತ್ತವೆ’ ಎಂದರು.
ಸಭೆಯಲ್ಲಿ ಮನ್‌ಮುಲ್ ನಿರ್ದೇಶಕರ ಚುನಾವಣೆಯ ಜೆಡಿಎಸ್ ಅಭ್ಯರ್ಥಿ ಸಿ.ಶಿವಕುಮಾರ್, ಜೆಡಿಎಸ್ ತಾಲ್ಲೂಕು ಅಧ್ಯಕ್ಷ ಎಸ್.ಎ.ಮಲ್ಲೇಶ್, ಪುರಸಭೆ ಅಧ್ಯಕ್ಷೆ ಜ್ಯೋತಿಲಕ್ಷ್ಮಿ, ಡಿಸಿಸಿ ಬ್ಯಾಂಕ್ ನಿರ್ದೇಶಕ ಗುರುಸ್ವಾಮಿ, ಮುಖಂಡರಾದ ಎಚ್.ನಂಜೇಗೌಡ, ರಾಧಾಕೃಷ್ಣ, ಆನಂದ್, ಸುಶೀಲಮ್ಮ, ಮನ್‌ಮುಲ್ ಮಾಜಿ ನಿರ್ದೇಶಕ ಜಿ.ಇ.ರವಿಕುಮಾರ್, ಗಿರೀಗೌಡ, ಸ್ವಾಮೀಗೌಡ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.