ADVERTISEMENT

‘ವಿಬಿ–ಜಿ ರಾಮ್‌ ಜಿ’ ವಿರೋಧ ಅನಗತ್ಯ: ಯದುವೀರ್‌

​ಪ್ರಜಾವಾಣಿ ವಾರ್ತೆ
Published 11 ಜನವರಿ 2026, 5:04 IST
Last Updated 11 ಜನವರಿ 2026, 5:04 IST
<div class="paragraphs"><p>ಸಂಸದ ಯದುವೀರ್‌</p></div>

ಸಂಸದ ಯದುವೀರ್‌

   

ಮಂಡ್ಯ: ‘ಕೇಂದ್ರ ಸರ್ಕಾರವು ಜಾರಿಗೆ ತಂದಿರುವ ವಿಕಸಿತ ಭಾರತ– ಉದ್ಯೋಗ ಖಾತರಿ ಮತ್ತು ಆಜೀವಿಕಾ ಮಿಷನ್‌(ವಿಬಿ– ಜಿ ರಾಮ್‌ ಜಿ) ಕಾಯ್ದೆಯು ಸ್ವಾವಲಂಬಿ ಗ್ರಾಮೀಣ ಭಾರತ ನಿರ್ಮಾಣಕ್ಕೆ ಭದ್ರ ಬುನಾದಿ ಹಾಕಿಕೊಡಲಿದೆ, ಇದನ್ನು ವಿರೋಧಿಸದೇ ಪರಾಮರ್ಶೆ ಮಾಡುವುದು ಒಳಿತು’ ಎಂದು ಸಂಸದ ಯದುವೀರ್‌ ಕೃಷ್ಣದತ್ತ ಚಾಮರಾಜ ಒಡೆಯರ್‌ ಸಲಹೆ ನೀಡಿದರು.

ಕಾಯ್ದೆಯು ಎಲ್ಲರನ್ನೊಳಗೊಂಡ ಪ್ರಗತಿ, ಅಭಿವೃದ್ಧಿಯಲ್ಲಿ ಸಮನ್ವಯತೆ ಮತ್ತು ಗರಿಷ್ಠ ಸರ್ಕಾರಿ ಪ್ರಯೋಜನೆಗಳನ್ನು ಜನರಿಗೆ ವಿತರಿಸಲಿದೆ ಎಂದು ಶನಿವಾರ ಪತ್ರಿಕಾಗೋಷ್ಠಿಯಲ್ಲಿ ವಿಶ್ವಾಸ ವ್ಯಕ್ತಪಡಿಸಿದರು.

ADVERTISEMENT

‘2005ರ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ(ನರೇಗಾ) ಬದಲಿಗೆ ಈ ಹೊಸ ಕಾಯ್ದೆಯನ್ನು ಆಧುನಿಕ, ಸಾಂಸ್ಥಿಕ ಚೌಕಟ್ಟಿನೊಡನೆ ರೂಪಿಸಲಾಗಿದೆ. ವಿಕಸಿತ ಭಾರತ 2047 ಮುನ್ನೋಟಕ್ಕೆ ಪೂರಕವಾಗಿದೆ. ಸಬಲೀಕರಣ, ಪ್ರಗತಿ, ಸಮನ್ವಯ ಮತ್ತು ಪರಿಪಕ್ವತೆಯನ್ನು ಹೊಂದಿದೆ’ ಎಂದರು.

‘ನರೇಗಾದಲ್ಲಿದ್ದ ನ್ಯೂನತೆಗಳು ಅದರ ದಕ್ಷತೆಯನ್ನು ಸೀಮಿತಗೊಳಿಸಿದ್ದವು. ತಾತ್ಕಾಲಿಕ ರಸ್ತೆಗಳು, ಯೋಜಿತವಲ್ಲದ ಮಣ್ಣಿನ ಕೆಲಸಗಳ ಮೂಲಕ ಬಾಳಿಕೆ ಬರುವ ಆರ್ಥಿಕ ಅಥವಾ ಸಾಮಾಜಿಕ ಆದಾಯವನ್ನು ಒದಗಿಸುವ ಕೆಲಸಗಳನ್ನು ನೀಡುವಲ್ಲಿ ವಿಫಲವಾಗಿತ್ತು. ಭ್ರಷ್ಟಾಚಾರ, ದುರ್ಬಲ ಮೇಲ್ವಿಚಾರಣೆಗೆ ಅವಕಾಶವಿತ್ತು. ಈ ಕಾರಣದಿಂದಾಗಿ ಹೊಸ ಕಾಯ್ದೆ ಜಾರಿಗೊಳಿಸಲಾಗಿದೆ’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

‘ಉದ್ಯೋಗ ಖಾತರಿ, ಹವಾಮಾನಕ್ಕೆ ತಕ್ಕಂತೆ ಕೃಷಿ, ಉದ್ಯೋಗ ವೇಳಾಪಟ್ಟಿ, ಜಿಯೋ-ಟ್ಯಾಗಿಂಗ್ ಮತ್ತು ಉಪಗ್ರಹ ಚಿತ್ರಣ ನೈಜ-ಸಮಯದ ಟ್ರಾಕಿಂಗ್‌ಗಾಗಿ ಮೊಬೈಲ್ ಅಪ್ಲಿಕೇಷನ್‌ಗಳು, ಎಐ ಆಧಾರಿತ ವಂಚನೆ ಪತ್ತೆ ಮತ್ತು ವಿಶ್ಲೇಷಣೆ, ಕಾಲಮಿತಿಯ ವೇತನ ಪಾವತಿಗಳು ಹೊಸ ಕಾಯ್ದೆಯಲ್ಲಿವೆ. ಕೇಂದ್ರ–ರಾಜ್ಯಗಳ ಒಳಗೊಳ್ಳುವಿಕೆಯ ಭಾಗವಾಗಿ ಶೇ 60:40 ಆಧಾರದಲ್ಲಿ ಯೋಜನೆ ಜಾರಿಗೊಳಿಸಲಾಗಿದೆ. ಇದು ಒಳ್ಳೆಯ ಬೆಳವಣಿಗೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ’ ಎಂದು ವಿವರಿಸಿದರು.

ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ: ‘ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ. ಮೈಸೂರಿನಲ್ಲಿ ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ನಡೆಸಿ ಹತ್ಯೆ ಮಾಡಲಾಗಿದೆ. ಬಳ್ಳಾರಿ, ಬೆಳಗಾವಿಯಲ್ಲಿ ಏನು ನಡೆಯುತ್ತಿದೆ ಎಂಬುದು ತಿಳಿದಿದೆ. ಮಹರಾಷ್ಟ್ರದ ಪೊಲೀಸರು ಮೈಸೂರು ಮತ್ತು ಬೆಂಗಳೂರಿನಲ್ಲಿ ಮಾದಕ ವಸ್ತುಗಳ ಘಟಕಗಳ ಮೇಲೆ ದಾಳಿ ನಡೆಸಿದ್ದಾರೆ, ಬಾಂಗ್ಲಾ ವಲಸಿಗರನ್ನು ತಡೆಯುವಲ್ಲಿ ರಾಜ್ಯ ಸರ್ಕಾರ ಸಂಪೂರ್ಣ ವಿಫಲವಾಗಿದೆ’ ಎಂದು ದೂರಿದರು.

ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಎನ್.ಎಸ್.ಇಂದ್ರೇಶ್, ಜಿಲ್ಲಾ ವಕ್ತಾರ ಸಿ.ಟಿ.ಮಂಜುನಾಥ್‌, ಮುಖಂಡರಾದ ಇಂಡುವಾಳು ಎಸ್.ಸಚ್ಚಿದಾನಂದ, ಎಚ್.ಆರ್.ಅಶೋಕ್‌ಕುಮಾರ್, ನಾಗಾನಂದ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.