ADVERTISEMENT

‘ವಿ.ಸಿ.ನಾಲೆ ಆಧುನೀಕರಣ ಕಾಮಗಾರಿ ವೇಗಗೊಳಿಸಿ’

ಗುತ್ತಿಗೆದಾರರಿಗೆ ಶಾಸಕ ದರ್ಶನ್ ಪುಟ್ಟಣ್ಣಯ್ಯ ಸೂಚನೆ

​ಪ್ರಜಾವಾಣಿ ವಾರ್ತೆ
Published 20 ಮಾರ್ಚ್ 2024, 15:59 IST
Last Updated 20 ಮಾರ್ಚ್ 2024, 15:59 IST
ಪಾಂಡವಪುರ ತಾಲ್ಲೂಕಿನ ನಾರ್ತ್‌ಬ್ಯಾಂಕ್ ಬಳಿ ವಿ.ಸಿ.ನಾಲೆ ಆಧುನೀಕರಣ ಕಾಮಗಾರಿಯನ್ನು ಶಾಸಕ ದರ್ಶನ್ ಪುಟ್ಟಣ್ಣಯ್ಯ ಪರಿಶೀಲನೆ ನಡೆಸಿದರು. ಮುಖಂಡರಾದ ಎ.ಎಲ್.ಕೆಂಪೂಗೌಡ, ಹರವು ಪ್ರಕಾಶ್, ಡಿ.ಕೆ.ಅಂಕಯ್ಯ ವೀಕ್ಷಿಸಿದರು
ಪಾಂಡವಪುರ ತಾಲ್ಲೂಕಿನ ನಾರ್ತ್‌ಬ್ಯಾಂಕ್ ಬಳಿ ವಿ.ಸಿ.ನಾಲೆ ಆಧುನೀಕರಣ ಕಾಮಗಾರಿಯನ್ನು ಶಾಸಕ ದರ್ಶನ್ ಪುಟ್ಟಣ್ಣಯ್ಯ ಪರಿಶೀಲನೆ ನಡೆಸಿದರು. ಮುಖಂಡರಾದ ಎ.ಎಲ್.ಕೆಂಪೂಗೌಡ, ಹರವು ಪ್ರಕಾಶ್, ಡಿ.ಕೆ.ಅಂಕಯ್ಯ ವೀಕ್ಷಿಸಿದರು   

ಪಾಂಡವಪುರ: ‘ವಿಶ್ವೇಶ್ವರಯ್ಯ ನಾಲೆಯ ಆಧುನೀಕರಣದ ಕಾಮಗಾರಿ ವೇಗವಾಗಿ ಮಾಡಬೇಕಿದೆ. ಇಲ್ಲದಿದ್ದರೆ ಮೇ ಅಂತ್ಯದಲ್ಲಿ ಪ್ರಾರಂಭವಾಗುವ ಮಾನ್ಸೂನ್ ಮಳೆಯಿಂದಾಗಿ ಮತ್ತಷ್ಟು ಸಮಸ್ಯೆ ಎದುರಿಸಬೇಕಾಗುತ್ತದೆ’ ಎಂದು ಶಾಸಕ ದರ್ಶನ್ ಪುಟ್ಟಣ್ಣಯ್ಯ ಹೇಳಿದರು.

ಕೆಆರ್‌ಎಸ್ ಅಣೆಕಟ್ಟೆಯಿಂದ ಪ್ರಾರಂಭವಾಗುವ ವಿಶ್ವೇಶ್ವರಯ್ಯ ನಾಲೆ (ವಿ.ಸಿ.ನಾಲೆ) ಆಧುನೀಕರಣ ಕಾಮಗಾರಿಯನ್ನು ಪರಿಶೀಲಿಸಿ ಅವರು ಮಾತನಾಡಿದರು.

46 ಕಿ.ಮೀ ಉದ್ದದಲ್ಲಿ ₹330 ಕೋಟಿ ಅಂದಾಜು ವೆಚ್ಚದಲ್ಲಿ ನಾಲಾ ಆಧುನೀಕರಣ ಕಾಮಗಾರಿ ನಡೆಯುತ್ತಿದೆ. ಈಗ ನಿತ್ಯ ಕೇವಲ ಅರ್ಧ ಕಿ.ಮೀ ಕಾಮಗಾರಿ ನಡೆಯುತ್ತಿದೆ. ಆದರೆ ನಿತ್ಯ ಒಂದು ಕಿ.ಮೀ ಕಾಮಗಾರಿ ಮಾಡಿದರಷ್ಟೇ ಮೇ ತಿಂಗಳೊಳಗೆ ಪೂರ್ಣಗೊಳಿಸಬಹುದಾಗಿದೆ. ಹಾಗಾಗಿ ಸತತವಾಗಿ ಕಾಮಗಾರಿಯನ್ನು ಚುರುಕುಗೊಳಿಸಬೇಕಿದೆ ಎಂದರು.

ADVERTISEMENT

ಈ ಬಾರಿ ಸಮರ್ಪಕ ಮಳೆಯಾಗಲಿಲ್ಲ. ಕೆಆರ್‌ಎಸ್ ಜಲಾಶಯ ಭರ್ತಿಯಾಗಲಿಲ್ಲ. ಹಾಗಾಗಿ ರೈತರು ಸಮಸ್ಯೆಗೆ ಸಿಲುಕಿದ್ದಾರೆ. ಕಾವೇರಿ ಕೊಳ್ಳದ ರೈತರು ಸಮರ್ಪಕವಾಗಿ ಬೆಳೆ ಬೆಳೆಯಲಾಗಲಿಲ್ಲ. ಈಗ ಬೆಳೆದು ನಿಂತಿರುವ ಬೆಳೆಗಳು ಒಣಹೋಗುತ್ತಿವೆ. ಬರಗಾಲ ಎದುರಾಗಿ ಜನರ ಕುಡಿಯುವ ನೀರಿನ ಸಮಸ್ಯೆ ಎದುರಿಸುತ್ತಿದ್ದಾರೆ ಎಂದು ಹೇಳಿದರು.

ಕೆಆರ್‌ಎಸ್ ಜಲಾಶಯದಲ್ಲಿ 87 ಅಡಿ ನೀರಿದ್ದರೂ ವಿ.ಸಿ.ನಾಲಾ ಆಧುನೀಕರಣ ಕಾಮಗಾರಿಯಿಂದಾಗಿ ನಾಲೆಗೆ ನೀರು ಹರಿಸಲು ಸಾಧ್ಯವಾಗುತ್ತಿಲ್ಲ. ಹಾಗಾಗಿ ಕಾಮಗಾರಿ ನಿಗದಿತ ವೇಳೆಗೆ ಪೂರ್ಣಗೊಳ್ಳದಿದ್ದರೆ ಜನರು ತುಂಬಾ ಸಮಸ್ಯೆ ಎದುರಿಸಬೇಕಾಗುತ್ತದೆ. ಮುನ್ನೆಚ್ಚರಿಕೆ ಕ್ರಮವಹಿಸಿ ಕಾಮಗಾರಿಯ ವೇಗವನ್ನು ಹೆಚ್ಚಿಸಬೇಕು ಎಂದು ಗುತ್ತಿಗೆ ಕಾಮಗಾರಿಯ ವ್ಯವಸ್ಥಾಪಕ ರವಿ ಅವರಿಗೆ ಸೂಚನೆ ನೀಡಿದರು.

ರೈತ ಸಂಘದ ಜಿಲ್ಲಾಧ್ಯಕ್ಷ ಎ.ಎಲ್.ಕೆಂಪೂಗೌಡ, ತಾಲ್ಲೂಕು ಅಧ್ಯಕ್ಷ ಕೆನ್ನಾಳು ನಾಗರಾಜು, ಮುಖಂಡರಾದ ಹರವು ಪ್ರಕಾಶ್, ಕಟ್ಟೇರಿ ಮಹಾದೇವು, ಎಣ್ಣೆಹೊಳೆಕೊಪ್ಪಲು ಮಂಜುನಾಥ್, ರಘು, ದಲಿತ ಸಂಘರ್ಷ ಸಮಿತಿ ಮುಖಂಡ ಡಿ.ಕೆ.ಅಂಕಯ್ಯ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.