ADVERTISEMENT

ಪಡಿತರ ವಿತರಣೆ ರದ್ದಾದರೆ ಆಹಾರ ಕ್ಷಾಮ: ಬಿ.ವೆಂಕಟ್‌ ಎಚ್ಚರಿಕೆ

ಪ್ರಾಂತ ಕೃಷಿ ಕೂಲಿಕಾರರ ಸಂಘ ಪದಾಧಿಕಾರಿಗಳ ಸಭೆ; ಬಿ.ವೆಂಕಟ್‌ ಎಚ್ಚರಿಕೆ

​ಪ್ರಜಾವಾಣಿ ವಾರ್ತೆ
Published 30 ಆಗಸ್ಟ್ 2021, 13:41 IST
Last Updated 30 ಆಗಸ್ಟ್ 2021, 13:41 IST
ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘದ ಪದಾಧಿಕಾರಿಗಳ ಸಭೆಯಲ್ಲಿ ಅಖಿಲ ಭಾರತ ಕೃಷಿ ಕೂಲಿಕಾರರ ಸಂಘದ ಪ್ರಧಾನ ಕಾರ್ಯದರ್ಶಿ ಬಿ.ವೆಂಕಟ್ ಮಾತನಾಡಿದರು
ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘದ ಪದಾಧಿಕಾರಿಗಳ ಸಭೆಯಲ್ಲಿ ಅಖಿಲ ಭಾರತ ಕೃಷಿ ಕೂಲಿಕಾರರ ಸಂಘದ ಪ್ರಧಾನ ಕಾರ್ಯದರ್ಶಿ ಬಿ.ವೆಂಕಟ್ ಮಾತನಾಡಿದರು   

ಮಂಡ್ಯ: ‘ಬಿಜೆಪಿ– ಕಾಂಗ್ರೆಸ್‌ ಪಕ್ಷಗಳ ದುರಾಡಳಿತ ಹಾಗೂ ಒಳ ಒಪ್ಪಂದದಿಂದ ಪಡಿತರ ವ್ಯವಸ್ಥೆಯಲ್ಲಿ ಬದಲಾವಣೆ ತರುವ ಹುನ್ನಾರ ನಡೆಯುತ್ತಿದೆ. ಪಡಿತರ ವಿತರಣಾ ವ್ಯವಸ್ಥೆ ರದ್ದಾದರೆ ದೇಶದಲ್ಲಿ ಆಹಾರ ಕ್ಷಾಮ ಎದುರಾಗಲಿದೆ’ ಎಂದು ಎಂದು ಅಖಿಲ ಭಾರತ ಕೃಷಿ ಕೂಲಿಕಾರರ ಸಂಘದ ಪ್ರಧಾನ ಕಾರ್ಯದರ್ಶಿ ಬಿ.ವೆಂಕಟ್ ಎಚ್ಚರಿಸಿದರು.

ನಗರದ ಕರ್ನಾಟಕ ಸಂಘದ ಕೆವಿಎಸ್‌ ಭವನದಲ್ಲಿ ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘದ ಸಹಯೋಗದಲ್ಲಿ ಆಯೋಜಿಸಿದ್ದ ಕರ್ನಾಟಕ ರಾಜ್ಯ ಪದಾಧಿಕಾರಿಗಳ ಸಭೆಯಲ್ಲಿ ಅವರು ಮಾತನಾಡಿದರು.

‘ದೇಶದಲ್ಲಿ 23 ಕೋಟಿ ಬಿಪಿಎಲ್‌ ಕಾರ್ಡ್‌ಗಳಿದ್ದು ಇದರಿಂದ 85 ಕೋಟಿ ಜನರಿಗೆ ಅನುಕೂಲವಾಗಿದೆ. ಅಗತ್ಯ ವಸ್ತುಗಳ ಕಾಯ್ದೆಗೆ ತಿದ್ದುಪಡಿ ತಂದರೆ ಬಿಪಿಎಲ್‌ ಕಾರ್ಡ್ ನಂಬಿಕೊಂಡ ಕುಟುಂಬಗಳು ಬೀದಿಗೆ ಬೀಳುತ್ತವೆ. ದೇಶದ ಬಡಜನರ ಬದುಕು ಸಂಕಷ್ಟದಲ್ಲಿ ಸಿಲುಕಲಿದೆ’ ಎಂದು ಹೇಳಿದರು.

ADVERTISEMENT

‘ಬಿಜೆಪಿ ಸರ್ಕಾರವು ಕಾಂಗ್ರೆಸ್‌ ಪಕ್ಷದ ಜೊತೆ ಒಳ ಒಪ್ಪಂದ ಮಾಡಿಕೊಂಡು, ಪಡಿತರ ವ್ಯವಸ್ಥೆಯಲ್ಲಿ ಧಾನ್ಯಗಳ ಬದಲಿಗೆ ಹಣ ಕೊಡುತ್ತೇವೆ ಎಂದು ಹೇಳುತ್ತಿದೆ. ಇದರಿಂದ ದೊಡ್ಡ ರೀತಿಯ ಅಪಾಯ ಉಂಟಾಗಲಿದೆ, ಇದರ ವಿರುದ್ಧ ಪ್ರತಿ ಮನೆಗೂ ಅರಿವು ಮೂಡಿಸಬೇಕು. ಪಡಿತರ ವಿತರಣೆ ವ್ಯವಸ್ಥೆ ಸಣ್ಣ ಬದಲಾವಣೆಯಾದರೂ ಅದರ ವಿರುದ್ಧ ಜನರು ಧ್ವನಿ ಎತ್ತಬೇಕು’ ಎಂದರು.

‘ಕೃಷಿ ಕಾಯ್ದೆಗಳ ತಿದ್ದುಪಡಿ ವಿರೋಧಿಸಿ ಇಡೀದೇಶ ವ್ಯಾಪಿ ಚಳವಳಿಯು 9 ತಿಂಗಳಿಂದ ನಡೆದು 10ನೇ ತಿಂಗಳಿಗೆ ದಾಪುಗಾಲು ಹಾಕಿದೆ. ರೈತ ಸಂಘಟನೆಗಳು ಸೇರಿ ನಡೆಸುತ್ತಿರುವ ಚಳವಳಿ ಇತಿಹಾಸ ಸೃಷ್ಟಿ ಮಾಡಿವೆ. ಸ್ವಾತಂತ್ರ್ಯ ಬರುವ ಮುನ್ನ ಇಂತಹ ಚಳವಳಿ ನಡೆಯುತ್ತಿದ್ದವು. ಅದನ್ನು ಬಿಟ್ಟರೆ ಹರಿಯಾಣದ ಚಳವಳಿಯೇ ರೈತರ ಪರವಾಗಿ ಚಳವಳಿ ನಡೆಯುತ್ತಿದೆ’ ಎಂದರು.

‘ಸದ್ಯಕ್ಕೆ ಹರಿಯಾಣದಲ್ಲಿ ಏನಾದರೂ ಚುನಾವಣೆ ನಡೆದರೆ ಬಿಜೆಪಿಗೆ ಸೋಲು ಖಿಚಿತ ಎಂಬ ಪರಿಸ್ಥಿತಿ ಇದೆ. ಚಳವಳಿಯನ್ನು ಬಲಹೀನಗೊಳಿಸಲು ರೈತರ ಮೇಲೆ ಲಾಠಿಚಾರ್ಜ್‌ ಮಾಡಿದ್ದಾರೆ, ಚಳವಳಿಯನ್ನು ಹತ್ತಿಕ್ಕಲು ಎಷ್ಟೇ ಪ್ರಯತ್ನಪಟ್ಟರೂ ಅದು ಮತ್ತಷ್ಟು ಗಟ್ಟಿ ಆಗುತ್ತಾ ಸಾಗಿದೆ. ರೈತರಿಗೆ ಸಂಕಷ್ಟ ತರುವ ಈ ಕಾನೂನುಗಳು ರದ್ದಾಗಬೇಕು ಅಥವಾ ಬಿಜೆಪಿ ಸರ್ಕಾರ ಪತನ ಆಗಬೇಕು ಎಂಬ ನಿಲುವಿಗೆ ರೈತರು ಬಂದಿದ್ದಾರೆ’ ಎಂದರು.

‘ರೈತ ಹೋರಾಟವನ್ನು ಹತ್ತಿಕ್ಕಲು ಬಿಜೆಪಿಗೆ ಸಾಧ್ಯವಿಲ್ಲ. ಬಿಜೆಪಿ ಸರ್ಕಾರಕ್ಕೆ ಅಭದ್ರತೆ ಕಾಡುತ್ತಿರುವ ಕಾರಣ ಇಂತಹ ಕೆಲಸ ಮಾಡಿದೆ. ರೈತ ಚಳವಳಿಯು 10ನೇ ತಿಂಗಳಿಗೆ ಕಾಲಿಟ್ಟಿರುವುದನ್ನು ಧಮನ ಮಾಡಲು ಯಾರಿಂದಲೂ ಸಾಧ್ಯವಿಲ್ಲ, ಅದು ಮತ್ತಷ್ಟು ಸ್ವರೂಪ ಪಡೆದು ಗಟ್ಟಿಗೊಳ್ಳಲಿದೆ. ತಿದ್ದುಪಡಿ ಮಾಡಿರುವ ರೈತ ವಿರೋಧಿ ಕಾನೂನುಗಳನ್ನು ರದ್ದು ಮಾಡುವವರೆಗೂ ನಮ್ಮ ಹೋರಾಟ ನಿಲ್ಲುವುದಿಲ್ಲ’ ಎಂದರು.

ಸಭೆಯಲ್ಲಿ ಸಂಘದ ರಾಜ್ಯ ಘಟಕದ ಉಪಾಧ್ಯಕ್ಷ ಜಿ.ಎನ್‌.ನಾಗರಾಜು, ರಾಜ್ಯ ಘಟಕದ ಕಾರ್ಯದರ್ಶಿ ಚಂದ್ರಪ್ಪ ಹೊಸಗೆರ, ಜಿಲ್ಲಾ ಘಟಕದ ಅಧ್ಯಕ್ಷ ಪುಟ್ಟಮಾದು, ಜಿಲ್ಲಾ ಕಾರ್ಯದರ್ಶಿ ಹನುಮೇಶ್‌ ಇದ್ದರು.

ಬೆಲೆ ಏರಿಕೆಗೆ ಬಿಜೆಪಿ ಸುಳ್ಳು ಕಾರಣ

‘ಅಕ್ಕಿ, ಎಣ್ಣೆ ಸೇರಿದಂತೆ ಆಹಾರ ಧಾನ್ಯಗಳ ಬೆಲೆ ಗಗನಕ್ಕೇರಿದೆ. ಆದರೆ, ಬಿಜೆಪಿ ಸರ್ಕಾರವು ಬೆಲೆ ಏರಿಕೆಗೆ ಸುಳ್ಳು ಕಾರಣ ನೀಡುತ್ತಿದೆ. ಕೋವಿಡ್‌ ಬರುವ ಮುನ್ನವೇ 23 ರಿಂದ 28 ಕೋಟಿ ಮೆಟ್ರಿಕ್‌ ಟನ್‌ ಆಹಾರ ಧಾನ್ಯ ಉತ್ಪಾದನೆ ಆಗಿದೆ. ಕೋವಿಡ್‌ ಸಂದರ್ಭದಲ್ಲಿ 30 ಕೋಟಿ ಮೆಟ್ರಿಕ್‌ ಟನ್‌ ಆಹಾರ ಧಾನ್ಯ ಉತ್ಪಾದನೆಯಾಗಿದೆ. ಕೋವಿಡ್‌ ಸಂದರ್ಭದಲ್ಲಿ ಹೆಚ್ಚಿದೆ, ಆದರೂ ಬೆಲೆ ಏರಿಕೆ ಏಕೆ ಹೆಚ್ಚಾಗುತ್ತಿದೆ ಎಂಬುದನ್ನು ಸರಿಯಾದ ಉತ್ತರ ಸಿಕ್ಕಿಲ್ಲ’ ಎಂದು ಬಿ.ವೆಂಕಟ್‌ ಹೇಳಿದರು.

‘ಆಹಾರ ಧಾನ್ಯಗಳ ಕಳ್ಳ ಸಾಗಣೆದಾರರು, ಬಂಡವಾಳದಾರರ ಗುಲಾಮನಂತೆ ಸರ್ಕಾರ ವರ್ತಿಸುತ್ತಿದೆ. ಅವರು ಹೇಳಿದಂತೆ ಬಿಜೆಪಿ ಸರ್ಕಾರ ನಡೆದುಕೊಳ್ಳುತ್ತಿರುವುದರಿಂದ ಬೆಲೆ ಏರಿಕೆ ಹೆಚ್ಚಾಗುತ್ತಿದೆ’ ಎಂದು ಆರೋಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.