ADVERTISEMENT

ಶ್ರೀರಂಗಪಟ್ಟಣ: ಕೈ ಕೈ ಮಿಲಾಯಿಸಿದ ಜೆಡಿಎಸ್‌, ಕಾಂಗ್ರೆಸ್‌ ಕಾರ್ಯಕರ್ತರು

​ಪ್ರಜಾವಾಣಿ ವಾರ್ತೆ
Published 6 ಜುಲೈ 2020, 10:58 IST
Last Updated 6 ಜುಲೈ 2020, 10:58 IST
ಶ್ರೀರಂಗಪಟ್ಟಣದಲ್ಲಿ ಸೋಮವಾರ ನಡೆದ ಪಿಕಾರ್ಡ್‌ ಬ್ಯಾಂಕ್‌ ವಾಣಿಜ್ಯ ಮಳಿಗೆಗೆಳ ಉದ್ಘಾಟನಾ ಸಮಾರಂಭದಲ್ಲಿ ಜೆಡಿಎಸ್‌ ಮತ್ತು ಕಾಂಗ್ರೆಸ್‌ ಕಾರ್ಯಕರ್ತರ ನಡುವೆ ಮಾತಿನ ಚಕಮಕಿ ನಡೆಯಿತು
ಶ್ರೀರಂಗಪಟ್ಟಣದಲ್ಲಿ ಸೋಮವಾರ ನಡೆದ ಪಿಕಾರ್ಡ್‌ ಬ್ಯಾಂಕ್‌ ವಾಣಿಜ್ಯ ಮಳಿಗೆಗೆಳ ಉದ್ಘಾಟನಾ ಸಮಾರಂಭದಲ್ಲಿ ಜೆಡಿಎಸ್‌ ಮತ್ತು ಕಾಂಗ್ರೆಸ್‌ ಕಾರ್ಯಕರ್ತರ ನಡುವೆ ಮಾತಿನ ಚಕಮಕಿ ನಡೆಯಿತು   

ಶ್ರೀರಂಗಪಟ್ಟಣ: ಪಟ್ಟಣದಲ್ಲಿ ಸೋಮವಾರ ನಡೆದ ಪಿಕಾರ್ಡ್‌ ಬ್ಯಾಂಕ್‌ ವಾಣಿಜ್ಯ ಮಳಿಗೆಗಳ ಉದ್ಘಾಟನಾ ಸಮಾರಂಭದಲ್ಲಿ ಕಾಂಗ್ರೆಸ್‌ ಮತ್ತು ಜೆಡಿಎಸ್‌ ಕಾರ್ಯಕರ್ತರ ನಡುವೆ ಜಗಳ ಉಂಟಾಗಿ ಕೈಕೈ ಮಿಲಾಯಿಸುವ ಹಂತಕ್ಕೆ ತಲುಪಿತ್ತು.

ಕಾಂಗ್ರೆಸ್‌ ನೇತೃತ್ವದ ಬ್ಯಾಂಕ್‌ನ ಆಡಳಿತ ಮಂಡಳಿ ಸದಸ್ಯರು ಕಾರ್ಯಕ್ರಮ ಆಯೋಜಿಸಿದ್ದರು. ಉದ್ಘಾಟನೆಗೆ ಶಾಸಕ ರವೀಂದ್ರ ಶ್ರೀಕಂಠಯ್ಯ ಅವರನ್ನು ಆಹ್ವಾನಿಸಿಲ್ಲ ಎಂಬ ಕಾರಣಕ್ಕೆ ಜೆಡಿಎಸ್‌ ಕಾರ್ಯಕರ್ತರು ಆಕ್ಷೇಪ ವ್ಯಕ್ತಪಡಿಸಿದರು. ಕಾರ್ಯಕ್ರಮಕ್ಕೆ ಯಾರನ್ನೂ ಕರೆದಿಲ್ಲ ಎಂದು ಆಡಳಿತ ಮಂಡಳಿ ಸದಸ್ಯರು ಪ್ರತ್ಯುತ್ತರ ನೀಡಿದರು. ಆದರೆ ಅದೇ ಸಮಯಕ್ಕೆ ಕಾಂಗ್ರೆಸ್‌ ಮುಖಂಡ ಎ.ಬಿ. ರಮೇಶ ಬಂಡಿಸಿದ್ದೇಗೌಡ ಸ್ಥಳಕ್ಕೆ ಬಂದಾಗ ಎರಡೂ ಪಕ್ಷಗಳ ಕಾರ್ಯಕರ್ತರ ನಡುವೆ ನೂಕಾಟ, ತಳ್ಳಾಟ ನಡೆಯಿತು.

ಪಿಕಾರ್ಡ್‌ ಬ್ಯಾಂಕ್‌ ಆಡಳಿತ ಮಂಡಳಿ ಪಕ್ಷಪಾತ ಮಾಡುತ್ತಿದೆ ಎಂದು ಆರೋಪಿಸಿ ಜೆಡಿಎಸ್‌ ಮುಖಂಡರು ಘೋಷಣೆ ಕೂಗಿದರು. ಕಾರ್ಯಕ್ರಮನವನ್ನು ಮುಂದೂಡಬೇಕು ಎಂದು ಆಗ್ರಹಿಸಿದರು. ಎರಡೂ ಗುಂಪುಗಳ ನಡುವೆ ಅರ್ಧ ತಾಸಿಗೂ ಹೆಚ್ಚು ಕಾಲ ಮಾತಿನ ಚಕಮಕಿ ನಡೆಯಿತು.

ADVERTISEMENT

ಒಂದು ಹಂತದಲ್ಲಿ ಪರಿಸ್ಥಿತಿ ಕೈ ಕೈ ಮಿಲಾಯಿಸುವ ಹಂತ ತಲುಪಿತು. ಪೊಲೀಸರು ಮಧ್ಯ ಪ್ರವೇಶಿಸಿ ಎರಡೂ ಕಡೆಯವರನ್ನು ಸಮಾಧಾನ‌ಪಡಿಸಿದರು.

‘ಕೊರೊನಾ ಸೋಂಕು ಹರಡುವ ಭೀತಿಯಿಂದ ವಾಣಿಜ್ಯ ಮಳಿಗೆಗಳ ಉದ್ಘಾಟನೆಗೆ ಯಾವ ಅಥಿತಿಯನ್ನೂ ಆಹ್ವಾನಿಸಿಲ್ಲ. ಆಹ್ವಾನ ಪತ್ರಿಕೆಯನ್ನೂ ಮುದ್ರಿಸಿಲ್ಲ. ಮಾಜಿ ಶಾಸಕ ರಮೇಶ ಬಂಡಿಸಿದ್ದೇಗೌಡ ಈ ಮಾರ್ಗವಾಗಿ ಬಂದು ಹೋಗಿದ್ದಾರಷ್ಟೇ’ ಎಂದು ಪಿಕಾರ್ಡ್‌ ಬ್ಯಾಂಕ್‌ ಅಧ್ಯಕ್ಷ ಟಿ.ಆರ್‌. ಶಂಕರ್‌ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.