ADVERTISEMENT

ಮಂಡ್ಯ | ರಸ್ತೆ ಕಾಮಗಾರಿ ಸ್ಥಗಿತ: ಗ್ರಾಮಸ್ಥರ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 13 ಜನವರಿ 2023, 5:08 IST
Last Updated 13 ಜನವರಿ 2023, 5:08 IST
ಶ್ರೀರಂಗಪಟ್ಟಣ- ಕೆಆರ್‌ಎಸ್‌ ಮತ್ತು ಮೈಸೂರು– ಕೆಆರ್‌ಎಸ್‌ ಸಂಪರ್ಕ ರಸ್ತೆ ಅಭಿವೃದ್ಧಿ ಕಾಮಗಾರಿ ಸ್ಥಗಿತಗೊಂಡಿದ್ದು, ವಾಹನ ಸಂಚಾರಕ್ಕೆ ತೊಡಕಾಗಿದೆ ಎಂದು ವಿವಿಧ ಗ್ರಾಮಗಳ ಜನರು ಗುರುವಾರ ತಾಲ್ಲೂಕಿನ ಬೆಳಗೊಳ ಪಂಪ್‌ಹೌಸ್‌ ವೃತ್ತದ ಬಳಿ ಪ್ರತಿಭಟನೆ ನಡೆಸಿದರು
ಶ್ರೀರಂಗಪಟ್ಟಣ- ಕೆಆರ್‌ಎಸ್‌ ಮತ್ತು ಮೈಸೂರು– ಕೆಆರ್‌ಎಸ್‌ ಸಂಪರ್ಕ ರಸ್ತೆ ಅಭಿವೃದ್ಧಿ ಕಾಮಗಾರಿ ಸ್ಥಗಿತಗೊಂಡಿದ್ದು, ವಾಹನ ಸಂಚಾರಕ್ಕೆ ತೊಡಕಾಗಿದೆ ಎಂದು ವಿವಿಧ ಗ್ರಾಮಗಳ ಜನರು ಗುರುವಾರ ತಾಲ್ಲೂಕಿನ ಬೆಳಗೊಳ ಪಂಪ್‌ಹೌಸ್‌ ವೃತ್ತದ ಬಳಿ ಪ್ರತಿಭಟನೆ ನಡೆಸಿದರು   

ಶ್ರೀರಂಗಪಟ್ಟಣ: ಶ್ರೀರಂಗಪಟ್ಟಣ- ಕೆಆರ್‌ಎಸ್‌ ಮತ್ತು ಮೈಸೂರು–ಕೆಆರ್‌ಎಸ್‌ ಸಂಪರ್ಕ ರಸ್ತೆ ಅಭಿವೃದ್ಧಿ ಕಾಮಗಾರಿ ಮೂರು ತಿಂಗಳಿಂದ ಸ್ಥಗಿತಗೊಂಡಿದ್ದು, ವಾಹನ ಸಂಚಾರಕ್ಕೆ ತೊಡಕಾಗಿದೆ ಎಂದು ಆರೋಪಿಸಿ ವಿವಿಧ ಗ್ರಾಮಗಳ ಜನರು ಗುರುವಾರ ಪ್ರತಿಭಟನೆ ನಡೆಸಿದರು.

ತಾಲ್ಲೂಕಿನ ಬೆಳಗೊಳ ಪಂಪ್‌ಹೌಸ್‌ ಬಳಿ ಪ್ರತಿಭಟನೆ ನಡೆಯಿತು. ಮೈಸೂರು– ಕೆಆರ್‌ಎಸ್‌ ಮತ್ತು ಶ್ರೀರಂಗಪಟ್ಟಣ– ಕೆಆರ್‌ಎಸ್‌ ನಡುವೆ ಸಂಚರಿಸುವ ವಾಹನಗಳನ್ನು ತಡೆದು ಪ್ರತಿಭಟಿಸಿದರು. ಲೋಕೋಪಯೋಗಿ ಇಲಾಖೆ ಮತ್ತು ಜನಪ್ರತಿನಿಧಿಗಳ ವಿರುದ್ಧ ಘೋಷಣೆ ಕೂಗಿದರು. ಮುಖ್ಯ ವೃತ್ತದಲ್ಲಿ ಪ್ರತಿಭಟನೆ ನಡೆದ ಕಾರಣ ವಾಹನಗಳು ಸಾಲುಗಟ್ಟಿ ನಿಂತಿದ್ದವು. ಕೆಆರ್‌ಎಸ್‌, ಹುಣಸೂರು, ಕೊಡಗು, ಮೈಸೂರು, ಶ್ರೀರಂಗಪಟ್ಟಣ, ಪಾಂಡವಪುರ ತೆರಳಬೇಕಾದ ಪ್ರಯಾಣಿಕರು ಪರದಾಡಿದರು.

ಕೆಆರ್‌ಎಸ್‌ ಸಂಪರ್ಕ ರಸ್ತೆಯನ್ನು ₹ 9.40 ಕೋಟಿ ವೆಚ್ಚದಲ್ಲಿ ಅಭಿವೃದ್ಧಿಪಡಿಸುವುದಾಗಿ ರಸ್ತೆಯನ್ನು ಅಗೆದಿದ್ದು, 3 ತಿಂಗಳಿಂದ ಹಾಗೇ ಬಿಡಲಾಗಿದೆ. ಜಲ್ಲಿ ಕಲ್ಲುಗಳು ಮೇಲೆ ಎದ್ದಿದ್ದು ವಾಹನಗಳ ಚಕ್ರಕ್ಕೆ ಸಿಕ್ಕಿ ಸಿಡಿಯುತ್ತಿವೆ. ರಸ್ತೆ ಪಕ್ಕದ ಮನೆ, ಅಂಗಡಿ ಮತ್ತು ಬೆಳೆಗಳಿಗೆ ದೂಳು ಹರಡುತ್ತಿದೆ. ರಸ್ತೆಯಲ್ಲಿ ಹೆಜ್ಜೆ ಹೆಜ್ಜೆಗೂ ಗುಂಡಿಗಳು ಇರುವುದರಿಂದ ದ್ವಿಚಕ್ರ ವಾಹನಗಳ ಸವಾರರು ಬಿದ್ದು ಗಾಯಗೊಳ್ಳುವುದು ಸಾಮಾನ್ಯವಾಗಿದೆ. ಪಶ್ಚಿಮವಾಹಿನಿಯಿಂದ ಎಂಎನ್‌ಪಿಎಂ ವೃತ್ತದವರೆಗೆ 6 ಕಿ.ಮೀ. ಸಂಚರಿಸಲು ಒಂದು ತಾಸು ಬೇಕಾಗುತ್ತದೆ. ಈ ಸಮಸ್ಯೆ ಕುರಿತು ಎಂಜಿನಿಯರ್‌ಗಳಿಗೆ ಹಲವು ಬಾರಿ ಹೇಳಿದ್ದರೂ ಸ್ಪಂದಿಸುತ್ತಿಲ್ಲ ಎಂದು ಮುಖಂಡ ಬೆಳಗೊಳ ಸುನಿಲ್‌ ಆಕ್ರೋಶ ವ್ಯಕ್ತಪಡಿಸಿದರು.

ADVERTISEMENT

ಇನ್ನು ಮೂರು ದಿನಗಳಲ್ಲಿ ಕಾಮಗಾರಿಯನ್ನು ಆರಂಭಿಸಬೇಕು. ಇಲ್ಲದಿದ್ದರೆ ಪಟ್ಟಣದ ಲೋಕೋ ಪಯೋಗಿ ಇಲಾಖೆ ಕಚೇರಿ ಎದುರು ಸೆಗಣಿ ಚಳವಳಿ ನಡೆಸುತ್ತೇವೆ ಎಂದು ಪ್ರತಿಭಟನಕಾರರು ಎಚ್ಚರಿಸಿದರು.

ಸ್ಥಳಕ್ಕೆ ಬಂದ ಎಂಜಿನಿಯರ್‌ ರೇವಣ್ಣ, ಕಾಮಗಾರಿಯನ್ನು ಶೀಘ್ರ ಮುಗಿಸುವಂತೆ ಗುತ್ತಿಗೆದಾರರಿಗೆ ಸೂಚಿಸಲಾಗುವುದು ಎಂದು ಭರವಸೆ ನೀಡಿದರು.

ಡಿ.ವಿಷಕಂಠೇಗೌಡ, ಬಿ.ವಿ.ಸುರೇಶ್‌, ಬಸವರಾಜು, ಚೇತನ್‌, ಶ್ರೀನಿ ವಾಸ್‌, ಬಲಮುರಿ ರವಿ, ಪುಟ್ಟರಾಮು, ನಾಗೇಂದ್ರ, ಕುಮಾರ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.