ಶ್ರೀರಂಗಪಟ್ಟಣ: ಪಟ್ಟಣದಲ್ಲಿ ಭಾನುವಾರ ನಡೆದ ವಿಶ್ವಕರ್ಮ ಜನಾಂಗದ ಧಾರ್ಮಿಕ ಸಭೆ ಹಾಗೂ ಚಾತುರ್ಮಾಸ್ಯ ಸೀಮೋಲ್ಲಂಘನ ಕಾರ್ಯಕ್ರಮದ ಅಂಗವಾಗಿ ಅರೇಮಾದನಹಳ್ಳಿ ವಿಶ್ವ ಬ್ರಾಹ್ಮಣ ಮಹಾ ಸಂಸ್ಥಾನ ಮಠದ ಪೀಠಾಧ್ಯಕ್ಷ ಶಿವ ಸುಜ್ಞಾನತೀರ್ಥ ಸ್ವಾಮೀಜಿ ಅವರ ಮೆರವಣಿಗೆ ನಡೆಯಿತು. ಇಲ್ಲಿನ ಸೆಸ್ಕ್ ಕಚೇರಿ ಆವರಣದ ಜ್ಯೋತಿರ್ ಗಣಪತಿ ದೇವಾಲಯದಲ್ಲಿ ಪೂಜೆ ಸಲ್ಲಿಸಿದ ಬಳಿಕ ಮೆರವಣಿಗೆ ಆರಂಭವಾಯಿತು.
ಪಟ್ಟಣದ ಕುವೆಂಪು ವೃತ್ತ, ಮುಖ್ಯ ಬೀದಿ ಮಾರ್ಗವಾಗಿ ಕಾವೇರಿ ನದಿ ಸ್ನಾನಘಟ್ಟದವರೆಗೆ ಅಲಂಕೃತ ಬೆಳ್ಳಿಯ ಸಾರೋಟಿನಲ್ಲಿ ಶ್ರೀಗಳ ಮೆರವಣಿಗೆ ನಡೆಯಿತು.
ದೇವಾಲಯದ ಆವರಣದಲ್ಲಿ ನಡೆದ ಧಾರ್ಮಿಕ ಸಭೆಯನ್ನು ಉದ್ಘಾಟಿಸಿದ ಸ್ವಾಮೀಜಿ, ‘ವಿಶ್ವಕರ್ಮ ಜನಾಂಗದವರು ಕುಶಲ ಕರ್ಮಿಗಳು. ಶಿಲ್ಪ, ಕಾಷ್ಠ, ಆಭರಣ ತಯಾರಿಕೆ ಮತ್ತು ಚಿತ್ರಕಲೆಗಳಲ್ಲಿ ವಿಶೇಷ ಕೌಶಲ ಹೊಂದಿದ್ದಾರೆ. ಆದರೂ ಆರ್ಥಿಕವಾಗಿ ಸಬಲರಾಗಿಲ್ಲ. ಸಮುದಾಯದವರು ತಮ್ಮ ಮಕ್ಕಳಿಗೆ ಕಡ್ಡಾಯವಾಗಿ ಶಿಕ್ಷಣ ಕೊಡಿಸಬೇಕು. ಸಂಸ್ಕಾರ ಕಲಿಸಬೇಕು’ ಎಂದು ಸಲಹೆ ನೀಡಿದರು.
ಕಾಳಿಕಾಂಬ ಕಮಠೇಶ್ವರ ದೇವಾಲಯದಲ್ಲಿ ವಿಶೇಷ ಪೂಜೆಗಳು ನಡೆದವು. ವಿಶ್ವಕರ್ಮ ಶ್ರೀ ಕಾಳಿಕಾಂಬ ಕ್ಷೇಮಾಭಿವೃದ್ಧಿ ಸಮಿತಿ ಅಧ್ಯಕ್ಷ ಬಿ. ರಾಜಣ್ಣ, ಅಮರಶಿಲ್ಪಿ ಜಕಣಾಚಾರಿ ವೇದಿಕೆಯ ತಾಲ್ಲೂಕು ಘಟಕದ ಅಧ್ಯಕ್ಷ ನಗುವನಹಳ್ಳಿ ಸೋಮಣ್ಣ, ಉಪಾಧ್ಯಕ್ಷ ಕೃಷ್ಣಾಚಾರ್, ಖಜಾಂಚಿ ರಾಜಣ್ಣ, ದೇವಾಲಯದ ಪ್ರಧಾನ ಅರ್ಚಕ ಮಂಜುನಾಥ್, ರಂಗನಾಯಕಿ ಸ್ತ್ರೀ ಸಮಾಜದ ಅಧ್ಯಕ್ಷೆ ವಿಶಾಲಕ್ಷ್ಮಿ ಪದ್ಮನಾಭ, ಮುಖಂಡರಾದ ಶಿವಲಿಂಗಾಚಾರ್, ದಿನೇಶ್, ಉಮಾಪತಿ, ನಂದೀಶ್, ಸತೀಶ್, ವಸಂತಕುಮಾರ್ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.