ADVERTISEMENT

ಕರೋನ ಗಿರೋನ ನಮಗೆ ಗೊತ್ತಿಲ್ಲ: ಹೊಲಗಳಲ್ಲಿ ಮಹಿಳೆಯರ ದುಡಿಮೆ

ಹಳ್ಳಿಗಳ ಹೊಲಗಳಲ್ಲಿ ದುಡಿಯುತ್ತಿರುವವರ ಮಹಿಳೆಯರ ಮಾತು

ಗಣಂಗೂರು ನಂಜೇಗೌಡ
Published 2 ಏಪ್ರಿಲ್ 2020, 19:30 IST
Last Updated 2 ಏಪ್ರಿಲ್ 2020, 19:30 IST
ಶ್ರೀರಂಗಪಟ್ಟಣ ತಾಲ್ಲೂಕು ಗಡಿ ಭಾಗವಾದ ಎಣ್ಣೆಹೊಳೆಕೊಪ್ಪಲು ಬಳಿ ಕಬ್ಬಿನ ಗದ್ದೆಯಲ್ಲಿ ಗುರುವಾರ ಕೆಲಸ ಮಾಡುತ್ತಿದ್ದ ರೈತ ಮಹಿಳೆಯರು
ಶ್ರೀರಂಗಪಟ್ಟಣ ತಾಲ್ಲೂಕು ಗಡಿ ಭಾಗವಾದ ಎಣ್ಣೆಹೊಳೆಕೊಪ್ಪಲು ಬಳಿ ಕಬ್ಬಿನ ಗದ್ದೆಯಲ್ಲಿ ಗುರುವಾರ ಕೆಲಸ ಮಾಡುತ್ತಿದ್ದ ರೈತ ಮಹಿಳೆಯರು   

ಶ್ರೀರಂಗಪಟ್ಟಣ: ಪಟ್ಟಣ ಪ್ರದೇಶದಲ್ಲಿ ಕೊರೋನಾ ಬಗ್ಗೆ ಜನರು ಭಯ ಭೀತರಾಗಿದ್ದು ಮನೆಯಲ್ಲಿ ’ಅವಿತು’ ಕುಳಿತಿರುವ ಈ ಹೊತ್ತಿನಲ್ಲಿ ಹಳ್ಳಿ ಜನರು ತಮ್ಮ ಪಾಡಿಗೆ ತಾವು ದುಡಿಯುತ್ತ ಆರಾಮ ಜೀವನ ನಡೆಸುತ್ತಿದ್ದಾರೆ.

ತಾಲ್ಲೂಕು ಕೇಂದ್ರದಿಂದ ದೂರ ಇರುವ ಗ್ರಾಮಗಳ ಜನರು ಕೊರೊನಾ ಬಗ್ಗೆ ಅಷ್ಟಾಗಿ ತಲೆ ಕೆಡಿಸಿಕೊಂಡಿಲ್ಲ. ಕೃಷಿ ಮತ್ತು ಹೈನುಗಾರಿಕೆಯನ್ನು ಅವಲಂಬಿಸಿರುವವರು ದಿನನಿತ್ಯ ದುಡಿಮೆಯಲ್ಲಿ ತೊಡಗಿದ್ದಾರೆ. ಕಬ್ಬು ಕಡಿಯುವುದು, ಮುರಿ ಮಾಡುವುದು, ಭತ್ತ ಮತ್ತು ತರಕಾರಿ ಬೆಳೆಯಲ್ಲಿ ಕಳೆ ಕೀಳುವುದು, ಗೊಬ್ಬರ ಹಾಕುವುದು, ನೀರು ಹಾಯಿಸುವುದು, ಹುಲ್ಲು ಕೊಯ್ಯುವುದು ಸೇರಿದಂತೆ ದೈನಂದಿನ ಕೆಲಸಗಳನ್ನು ನಿರಾತಂಕವಾಗಿ ಮುಂದುವರಿಸಿದ್ದಾರೆ. ಮುಖಗವಸು ಹಾಕದೆ, ಮಾರು ದೂರ ನಿಲ್ಲದೆ, ಗಂಟೆ ಗಂಟೆಗೂ ಕೈ ತೊಳೆಯದೆ ಇಷ್ಟು ದಿನ ಜೀವಿಸಿದಂತೆಯೇ ಮಾಮೂಲಿ ಬದುಕು ನಡೆಸುತ್ತಿದ್ದಾರೆ.

ತಾಲ್ಲೂಕಿನ ಗಡಿಭಾಗದ ಎಣ್ಣೆಹೊಳೆಕೊಪ್ಪಲು, ದೊಡ್ಡೇಗೌಡನಕೊಪ್ಪಲು, ಪೂರ್ವದ ಗಾಮನಹಳ್ಳಿ, ಕಾಲ್ಕೆರೆ, ಮಾರಸಿಂಗನಹಳ್ಳಿ, ದಕ್ಷಿಣ ದಿಕ್ಕಿನ ಕೊಕ್ಕರೆಹುಂಡಿ, ಬೊಂತಗಹಳ್ಳಿ, ಉತ್ತರದ ಸಿದ್ದಾಪುರ, ಚಿನ್ನೇನಹಳ್ಳಿ, ಪೂರ್ವದ ಜಕ್ಕನಹಳ್ಳಿ, ಹುಂಜನಕೆರೆ, ಆಲಗೂಡು ಗ್ರಾಮಗಳ ಜನರಿಗೆ ಕೊರೊನಾದ ಭಯ ಲವಲೇಶವೂ ಕಾಡಿಲ್ಲ. ಟಿವಿ, ಪತ್ರಿಕೆಗಳಲ್ಲಿ ಬರುವ ಸುದ್ದಿ ನೋಡಿ ಅದರ ಬಗ್ಗೆ ತಿಳಿದುಕೊಂಡಿದ್ದರೂ ತಮಗೂ ಕೊರೊನಾಗೂ ಕಿಂಚಿತ್ತೂ ಸಂಬಂಧ ಇಲ್ಲದಂತೆ ಜೀವಿಸುತ್ತಿದ್ದಾರೆ.

ADVERTISEMENT

‘ಕರೋಣ ಗಿರೋಣ ನೋಡಿಲ್ಲ. ನಮ್ಮವ್ವ ಇದ್ದಾಗ ಪಳೇಕ್‌ (ಪ್ಲೇಗ್‌) ಬಂದು ಜನ ಇದ್ದಕ್ಕಿದ್ದಂಗೆ ಸಾಯ್ತಾ ಇದ್ರಂತೆ. ಈಗ ಆದ್ಯಾವ್ದೋ ದೇಸದಿಂದ ಅಂತದ್ದೇ ಹೊಸ ಕಾಯ್ಲೆ ಬಂದಿದ್ದದಂತೆ. ಆದ್ರೂ ಅದು ನಮಗಂಟ ಯಾಕ್‌ ಬಂದದು. ನಾವೇನ್‌ ಮಾಡ್ಬಾರ್ದು ಮಾಡಿದ್ದೀವಾ...’ ಎಂದು ಎಣ್ಣೆಹೊಳೆಕೊಪ್ಪಲು ಬಳಿ ಕಬ್ಬಿನ ಬೆಳೆಯಲ್ಲಿ ಕಳೆ ಕೀಳುತ್ತಿದ್ದ ಸಾಕಮ್ಮ ಪ್ರಶ್ನೆ ಹಾಕಿದರು.

‘ದೊಡ್‌ ದೊಡ್‌ ಸಿಟೀಲಿ ಇರೋ ಎಲ್ರೂ ಮಕೋಡ (ಮಾಸ್ಕ್‌) ಹಾಕಬೇಕಂತೆ..., ಮನೆಯಿಂದ ಈಚೆ ಬಂದ್ರೆ ಹಿಡ್ಕತರಂತೆ...., ಹಳ್ಳಿಯೋರು ಒಳ್ಳೆಯೋರು ಪ್ಯಾಟೆಯೋರು ತೀಟೆಯೋರು ಅಂತ ಸುಮ್ನೆ ಹೇಳಾರ...’ ಎಂದು ರಾಂಪುರದ ರೈತ ಮಹಿಳೆ ನಿಂಗಮ್ಮ ಕೊರೊನಾ ವೈರಸ್‌ ಹರಡಲು ಪಟ್ಟಣದ ಅಧ್ವಾನಗಳೇ ಕಾರಣ ಎಂಬಂತೆ ಒಗಟಾಗಿ ಹೇಳಿದರು.

ಗ್ರಾಮೀಣ ಬದುಕು ಕುರಿತು ಮಾತನಾಡಿದ ಗಾಂಧಿವಾದಿ ಡಾ.ಬಿ. ಸುಜಯಕುಮಾರ್‌, ‘ಮಹಾತ್ಮ ಗಾಂಧೀಜಿ ದುರಾಸೆ ಮತ್ತು ದಮನಕಾರಿ ಆಧುನಿಕತೆಗೆ ವಿರುದ್ಧವಾಗಿದ್ದರು. ಹಳ್ಳಿಗಳ ಉದ್ಧಾರದ ಮೂಲಕ ರಾಮರಾಜ್ಯ ಸ್ಥಾಪನೆ ಸಾಧ್ಯ ಎಂದು ನಂಬಿದ್ದರು. ಗ್ರಾಮೀಣ ಜನರು ಎಲ್ಲ ಅಗತ್ಯಗಳನ್ನು ತಾವೇ ಪೂರೈಸಿಕೊಳ್ಳುವಂತೆ ಸಂಪನ್ಮೂಲ ಸೃಷ್ಟಿಸಿಕೊಂಡು, ಸರಳ ಮತ್ತು ಸ್ವಾವಲಂಬಿ ಬದುಕು ನಡೆಸಬೇಕು ಎಂದು ಹಂಬಲಿಸಿದ್ದರು. ದಿನ ದಿನವೂ ಅನಿರೀಕ್ಷಿತ ಮತ್ತು ಅಚ್ಚರಿಯ ಬೆಳವಣಿಗೆಗಳು ನಡೆಯುತ್ತಿರುವ ಈ ದಿನಗಳಲ್ಲಿ ಗಾಂಧೀಜಿ ಅವರ ಮಾತುಗಳು ಯಾರಿಗೂ ಕೇಳಿಸುತ್ತಿಲ್ಲ’ ಎಂದು ವಿಷಾದ ವ್ಯಕ್ತಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.