ಪ್ರಾತಿನಿಧಿಕ ಚಿತ್ರ
ಕೃಪೆ: Gemini AI
ಮಂಡ್ಯ: ತಾಲ್ಲೂಕಿನ ಗೊರವಾಲೆ ಗ್ರಾಮದ ಸಮೀಪ ಬುಧವಾರ ಬೆಳಿಗ್ಗೆ ಜಮೀನಿನಲ್ಲಿ ರೈತನ ಮೇಲೆ ವನ್ಯಜೀವಿಯೊಂದು ದಾಳಿ ನಡೆಸಿದೆ.
ಗೊರವಾಲೆ ನಿವಾಸಿ ತಿರುಮಲೆ (60) ಎಂಬುವರು ವನ್ಯಜೀವಿ ದಾಳಿಯಿಂದ ತೀವ್ರ ಗಾಯಗೊಂಡು ಮಂಡ್ಯ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಜಮೀನಿನಲ್ಲಿ ಸೊಪ್ಪು ಕತ್ತರಿಸುವ ಕೆಲಸ ಮಾಡುತ್ತಿದ್ದ ಸಂದರ್ಭದಲ್ಲಿ ದಾಳಿ ನಡೆದಿದೆ.
ತಿರುಮಲೆಯ ಚೀರಾಟ ಕೇಳಿದ ಅಕ್ಕಪಕ್ಕದ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದವರು ಸ್ಥಳಕ್ಕೆ ಓಡಿ ಬಂದಿದ್ದಾರೆ. ಆ ವೇಳೆಗೆ ವನ್ಯಜೀವಿ ಅಲ್ಲಿಂದ ಪರಾರಿಯಾಗಿದೆ. ಅದರ ದಾಳಿಯಿಂದ ಬಲ ತೊಡೆ ಮತ್ತು ಬಲಗೈ ಮೇಲೆ ಗಾಯಗಳಾಗಿವೆ.
‘ತನ್ನ ಮೇಲೆ ದಾಳಿ ಮಾಡಿದ್ದು ಹುಲಿ’ ಎಂದು ಗಾಯಾಳು ಮತ್ತು ಸ್ಥಳದಲ್ಲಿದ್ದವರು ಹೇಳುತ್ತಿದ್ದಾರೆ. ಆದರೆ, ಮಂಡ್ಯ ಜಿಲ್ಲೆ ವ್ಯಾಪ್ತಿಯಲ್ಲಿ ಚಿರತೆಗಳ ಹಾವಳಿ ವಿಪರೀತವಾಗಿದ್ದು, ಚಿರತೆ ದಾಳಿ ಮಾಡಿರಬಹುದು ಎಂದು ಅರಣ್ಯ ಇಲಾಖೆ ಅಧಿಕಾರಿಗಳು ಶಂಕಿಸಿದ್ದಾರೆ.
ಘಟನೆ ಹಿನ್ನಲೆಯಲ್ಲಿ ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
‘ಹೆಜ್ಜೆ ಗುರುತು ಮತ್ತು ರೈತನ ದೇಹದ ಮೇಲಿನ ಗಾಯಗಳನ್ನು ನೋಡಿದರೆ ದಾಳಿ ಮಾಡಿರುವುದು ಹುಲಿಯಲ್ಲ, ಚಿರತೆ ಇರಬಹುದು ಅನಿಸುತ್ತಿದೆ. ಈ ಬಗ್ಗೆ ಪರಿಶೀಲನೆ ನಡೆಸಲಾಗುತ್ತಿದೆ’ ಎಂದು ಉಪ ಅರಣ್ಯ ಸಂರಕ್ಷಣಾಧಿಕಾರಿ ಡಿ.ರಘು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.