ADVERTISEMENT

Womens Day: ಮಹಿಳಾ ಸಬಲೀಕರಣದ ಆಶಾವಾದಿ ಆಶಾಲತಾ ಪುಟ್ಟೇಗೌಡ!

ಗಣಂಗೂರು ನಂಜೇಗೌಡ
Published 8 ಮಾರ್ಚ್ 2024, 7:20 IST
Last Updated 8 ಮಾರ್ಚ್ 2024, 7:20 IST
ಶ್ರೀರಂಗಪಟ್ಟಣದಲ್ಲಿ ನಡೆದ ಮಹಿಳೆಯರ ಮಾನಸಿಕ ಆರೋಗ್ಯ ಜಾಗೃತಿ ಕಾರ್ಯಕ್ರಮದಲ್ಲಿ ರಂಗನಾಯಕಿ ಸ್ತ್ರೀ ಸಮಾಜದ ಅಧ್ಯಕ್ಷೆ ಹಾಗೂ ವಕೀಲೆ ಆಶಾಲತಾ ಪುಟ್ಟೇಗೌಡ ಅವರು ಮಾತನಾಡುತ್ತಿರುವುದು
ಶ್ರೀರಂಗಪಟ್ಟಣದಲ್ಲಿ ನಡೆದ ಮಹಿಳೆಯರ ಮಾನಸಿಕ ಆರೋಗ್ಯ ಜಾಗೃತಿ ಕಾರ್ಯಕ್ರಮದಲ್ಲಿ ರಂಗನಾಯಕಿ ಸ್ತ್ರೀ ಸಮಾಜದ ಅಧ್ಯಕ್ಷೆ ಹಾಗೂ ವಕೀಲೆ ಆಶಾಲತಾ ಪುಟ್ಟೇಗೌಡ ಅವರು ಮಾತನಾಡುತ್ತಿರುವುದು   

ಶ್ರೀರಂಗಪಟ್ಟಣ: ಲಾಭದಾಯಕ ವಕೀಲ ವೃತ್ತಿಯನ್ನು ಬದಿಗೊತ್ತಿ, ಮೂರು ದಶಕಗಳಿಂದ ಮಹಿಳಾ ಸಬಲೀಕರಣಕ್ಕಾಗಿ ದುಡಿಯುತ್ತಿರುವ ಆಶಾಲತಾ ಪುಟ್ಟೇಗೌಡ ಸಹಸ್ರಾರು ಮಹಿಳೆಯರಿಗೆ ವೃತ್ತಿ ಕೌಶಲ ಕಲಿಸಿ ಬಡವರ ಬಾಳಿಗೆ ಬೆಳಕಾಗಿದ್ದಾರೆ.

ಪಟ್ಟಣದ ರಂಗನಾಯಕಿ ಸ್ತ್ರೀ ಸಮಾಜದ ಅಧ್ಯಕ್ಷೆಯಾಗಿ ಕಳೆದ 9 ವರ್ಷಗಳಿಂದ ಮುನ್ನಡೆಸುತ್ತಿರುವ ಇವರು ಬಡ ವರ್ಗದ ಸಹಸ್ರಾರು ಮಹಿಳೆಯರಿಗೆ ಹೊಲಿಗೆ, ಆಭರಣ ತಯಾರಿಕೆ, ಫ್ಯಾಷನ್‌ ಡಿಸೈನಿಂಗ್‌, ಬ್ಯೂಟಿಷಿಯನ್‌, ಕಂಪ್ಯೂಟರ್‌, ಎಂಬ್ರಾಯಿಡರಿ ಇತರ ತರಬೇತಿ ಕೊಡಿಸಿದ್ದಾರೆ.

ವಿವಿಧ ಸಂಘ, ಸಂಸ್ಥೆಗಳ ಜತೆಗೂಡಿ ಪಟ್ಟಣದಲ್ಲಿ 2016ರಿಂದ 2018ರ ವರೆಗೆ ನಾಲ್ಕು ಬಾರಿ ರಕ್ತದಾನ ಶಿಬಿರ ಆಯೋಜಿಸಿದ್ದಾರೆ. ಹೆಣ್ಣು ಭ್ರೂಣ ಹತ್ಯೆ ವಿರುದ್ಧ ಪಟ್ಟಣ ಮತ್ತು ತಾಲ್ಲೂಕಿನ ವಿವಿಧೆಡೆ ಜನ ಜಾಗೃತಿ ಕಾರ್ಯಕ್ರಮಗಳನ್ನು ರೂಪಿಸಿದ್ದಾರೆ. ಇವರ ಮುಂದಾಳತ್ವದಲ್ಲಿ ಪ್ರತಿ ವರ್ಷ ಪರಿಸರ ದಿನಾಚರಣೆ ಸಂದರ್ಭದಲ್ಲಿ ಗಿಡ ನೆಡುವುದು, ಸ್ಮಾರಕಗಳ ಸ್ವಚ್ಛತೆ, ಮಾನಸಿಕ ಮತ್ತು ಆರೋಗ್ಯ ಜಾಗೃತಿ ಕಾರ್ಯಕ್ರಮಗಳು ನಡೆಯುತ್ತಿವೆ.

ADVERTISEMENT

ಮಂಡ್ಯದ ಮಹಿಳಾ ವಿವಿಧೋದ್ಧೇಶ ಸಹಕಾರ ಸಂಘಕ್ಕೆ ನಾಲ್ಕು ಬಾರಿ ಅಧ್ಯಕ್ಷರಾಗಿ ಆಯ್ಕೆಯಾಗಿರುವುದು ಇವರ ಕ್ರಿಯಾಶೀಲತೆಗೆ ಹಿಡಿದ ಕನ್ನಡಿಯಾಗಿದೆ. ಆ ಸಂದರ್ಭದಲ್ಲಿ ಜಿಲ್ಲೆಯ ವಿವಿಧ ತಾಲ್ಲೂಕುಗಳ ಮಹಿಳೆಯರಿಗೆ ಬೇಕರಿ ತಿನಿಸು ತಯಾರಿಕೆ, ಡಾಲ್‌ ಮೇಕಿಂಗ್‌, ಎಂಬ್ರಾಯಿಡರಿ ಇತರ ವೃತ್ತಿ ಕೌಶಲ ತರಬೇತಿ ಕೊಡಿಸಿದ್ದಾರೆ.

ವರದಕ್ಷಿಣೆ ಕಿರುಕುಳ, ಬಾಲ್ಯ ವಿವಾಹ ಸೇರಿದಂತೆ ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳ ವಿರುದ್ಧ ಮೇಲಿಂದ ಮೇಲೆ ದನಿ ಎತ್ತಿದ್ದು, ಹತ್ತು– ಹಲವು ಸಂವಾದಗಳನ್ನೂ ಏರ್ಪಡಿಸಿದ್ದಾರೆ. ಮಹಿಳೆಯರಲ್ಲಿ ಆತ್ಮಸ್ಥೈರ್ಯ ತುಂಬಲು ಕೆಸರು ಗದ್ದೆ ಓಟ, ಹಗ್ಗ ಜಗ್ಗಾಟ, ಚಾರಣ, ಮ್ಯಾರಥಾನ್‌, ಚರ್ಚಾಸ್ಪರ್ಧೆ ಇತರ ಮನರಂಜನಾ ಚಟುವಟಿಕೆಗಳನ್ನು ಆಯೋಜಿಸುತ್ತಾ ಬಂದಿದ್ದಾರೆ.

‘ಮಾಜಿ ಶಾಸಕಿ ದಿವಂಗತ ದಮಯಂತಿ ಬೋರೇಗೌಡ, ಬೆನಮನಹಳ್ಳಿ ಬಿ.ಕೆ. ಸಾವಿತ್ರಮ್ಮ ಅವರ ಪ್ರೇರಣೆ ಮತ್ತು ನಮ್ಮ ಸಂಘದ ಪದಾಧಿಕಾರಿಗಳ ಸಹಕಾರದಿಂದ ಒಂದಷ್ಟು ಮಹಿಳಾ ಪರ ಕಾರ್ಯಕ್ರಮಗಳನ್ನು ಆಯೋಜಿಸಲು ಸಾಧ್ಯವಾಗಿದೆ. ನೆಹರೂ ಯುವಕೇಂದ್ರ ನಮ್ಮೆಲ್ಲ ಕಾರ್ಯಗಳಿಗೆ ಬೆನ್ನೆಲುಬಾಗಿದೆ. ಮಹಿಳೆಯರು ಸ್ವಾಭಿಮಾನ ಮತ್ತು ಆತ್ಮಗೌರವದಿಂದ ಬದುಕುವಂತಾದರೆ ನಮ್ಮ ಶ್ರಮ ಸಾರ್ಥಕವಾಗುತ್ತದೆ’ ಎಂಬುದು ಆಶಾಲತಾ ಪುಟ್ಟೇಗೌಡ ಅವರ ಮಾತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.