ADVERTISEMENT

ಬೆಂಗಳೂರು: ವಲಸೆ ಕಾರ್ಮಿಕರ ಹಸಿವು ನೀಗಿಸಿದ ಇಂದಿರಾ ಕ್ಯಾಂಟೀನ್‌ ಊಟ

​ಪ್ರಜಾವಾಣಿ ವಾರ್ತೆ
Published 4 ಮೇ 2020, 17:19 IST
Last Updated 4 ಮೇ 2020, 17:19 IST
ಮೆಜೆಸ್ಟಿಕ್‌ ಬಸ್‌ನಿಲ್ದಾಣದಲ್ಲಿ ಸೋಮವಾರ ವಲಸೆ ಕಾರ್ಮಿಕರಿಗೆ ಸಂಚಾರ ಇಂದಿರಾ ಕ್ಯಾಂಟೀನ್‌ ಮೂಲಕ ಊಟ ವಿತರಿಸಲಾಯಿತು
ಮೆಜೆಸ್ಟಿಕ್‌ ಬಸ್‌ನಿಲ್ದಾಣದಲ್ಲಿ ಸೋಮವಾರ ವಲಸೆ ಕಾರ್ಮಿಕರಿಗೆ ಸಂಚಾರ ಇಂದಿರಾ ಕ್ಯಾಂಟೀನ್‌ ಮೂಲಕ ಊಟ ವಿತರಿಸಲಾಯಿತು   

ಬೆಂಗಳೂರು: ನಗರದಿಂದ ತಮ್ಮ ಊರಿನತ್ತ ಹೊರಟಿದ್ದ ವಲಸೆ ಕಾರ್ಮಿಕರ ಹಸಿವು ನೀಗಿಸಲು ಸಂಚಾರ ಇಂದಿರಾ ಕ್ಯಾಂಟೀನ್‌ ನೆರವಾಗಿದೆ.

ವಲಸೆ ಕಾರ್ಮಿಕರು ಊರಿಗೆ ಮರಳುವುದಕ್ಕೆ ಸರ್ಕಾರ ಅವಕಾಶ ಮಾಡಿಕೊಟ್ಟ ಬಳಿಕ ಮೆಜೆಸ್ಟಿಕ್‌ನ ಬಸ್‌ನಿಲ್ದಾಣದಲ್ಲಿ ಹಾಗೂ ಸಂಗೊಳ್ಳಿ ರಾಯಣ್ಣ ನಗರ ರೈಲು ನಿಲ್ದಾಣದಲ್ಲಿ ಭಾರಿ ಸಂಖ್ಯೆಯಲ್ಲಿ ಕಾರ್ಮಿಕರು ಸೇರಿದ್ದರು. ಆದರೆ ಅಲ್ಲಿ ಅಷ್ಟೊಂದು ಸಂಖ್ಯೆಯ ಜನರಿಗೆ ಊಟ ಒದಗಿಸುವ ವ್ಯವಸ್ಥೆ ಇರಲಿಲ್ಲ. ಕಾರ್ಮಿಕ ಇಲಾಖೆ ಕಾರ್ಯದರ್ಶಿ ಮಣಿವಣ್ಣನ್‌ ಬಿಬಿಎಂಪಿ ಅಧಿಕಾರಿಗಳಿಗೆ ಕರೆ ಮಾಡಿ, ‘ಊರಿಗೆ ಹೊರಟ ಕಾರ್ಮಿಕರಿಗೆ ತಕ್ಷಣ ಊಟದ ವ್ಯವಸ್ಥೆ ಕಲ್ಪಿಸಲು ಸಾಧ್ಯವೇ’ ಎಂದು ಕೇಳಿದ್ದರು. ಬಿಬಿಎಂಪಿ ಅಧಿಕಾರಿಗಳು ಸಂಚಾರ ಇಂದಿರಾ ಕ್ಯಾಂಟೀನ್‌ಗಳನ್ನು ತಕ್ಷಣವೇ ಮೆಜೆಸ್ಟಿಕ್‌ಗೆ ಕಳುಹಿಸಿ ಹಸಿದ ಹೊಟ್ಟೆಯಲ್ಲಿದ್ದವರಿಗೆ ಊಟದ ವ್ಯವಸ್ಥೆ ಮಾಡಿದರು.

‘ಮಹಿಳೆಯರು, ಮಕ್ಕಳು ಸೇರಿದಂತೆ ಸಾವಿರಾರು ಮಂದಿ ಬಸ್‌ನಿಲ್ದಾಣದಲ್ಲಿದ್ದರು. ಊಟ ಪೂರೈಸುವಂತೆ ಕೋರಿ ಭಾನುವಾರ ಮಧ್ಯಾಹ್ನ 12.15ರ ಸುಮಾರಿಗೆ ನಮಗೆ ಕರೆ ಬಂತು. ತಕ್ಷಣವೇ 2000 ಮಂದಿಗಾಗುವಷ್ಟು ಊಟದ ಪೊಟ್ಟಣಗಳನ್ನು ಕಳುಹಿಸಿದೆವು. ನಂತರ ಬೇರೆ ಬೇರೆ ಅಡುಗೆಮನೆಗಳಿಂದ ಊಟ ಕಳುಹಿಸಿಕೊಟ್ಟೆವು. ಕಾರ್ಮಿಕ ಇಲಾಖೆಯವರೂ ಊಟ ಕಳುಹಿಸಿದರು. ಮಾರ್ಷಲ್‌ಗಳು ಹಾಗೂ ಸ್ವಯಂಸೇವಕರು ಅವುಗಳನ್ನು ವಿತರಿಸಿದರು’ ಎಂದು ಬಿಬಿಎಂಪಿ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

ADVERTISEMENT

‘ಸೋಮವಾರ ಇಂದಿರಾ ಕ್ಯಾಂಟೀನ್‌ಗಳಿಂದ 7 ಸಾವಿರ ಹಾಗೂ ಕಾರ್ಮಿಕ ಇಲಾಖೆ ಪೂರೈಸಿದ 8 ಸಾವಿರ ಊಟದ ಪೊಟ್ಟಣಗಳನ್ನು ವಿತರಿಸಿದ್ದೇವೆ. ಭಾನುವಾರ ಇಂದಿರಾ ಕ್ಯಾಂಟೀನ್‌ನಿಂದ 7,700 ಹಾಗೂ ಕಾರ್ಮಿಕ ಇಲಾಖೆ ಒದಗಿಸಿದ 9 ಸಾವಿರ ಪೊಟ್ಟಣಗಳನ್ನು ವಿತರಿಸಿದ್ದೇವೆ’ ಎಂದು ಅವರು ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.