ADVERTISEMENT

ಅದೃಷ್ಟ ಪರೀಕ್ಷೆಗೆ ಇಳಿದ ಐವರು ಮಹಿಳೆಯರು

​ಪ್ರಜಾವಾಣಿ ವಾರ್ತೆ
Published 22 ಏಪ್ರಿಲ್ 2013, 8:36 IST
Last Updated 22 ಏಪ್ರಿಲ್ 2013, 8:36 IST

ಮೈಸೂರು: ನಾಮಪತ್ರ ವಾಪಸು ಪಡೆಯುವ ಕಡೆಯ ದಿನ ಮುಗಿದಿದ್ದು, ಅಂತಿಮವಾಗಿ 160 ಅಭ್ಯರ್ಥಿಗಳು ಕಣದಲ್ಲಿ ಉಳಿದಿದ್ದಾರೆ. ಕೋಟಿ  ಕೋಟಿ ವೀರರ ಕ್ಷೇತ್ರಗಳಲ್ಲಿ ಐವರು ಮಹಿಳಾ ಅಭ್ಯರ್ಥಿಗಳೂ ಇದ್ದಾರೆ.

ರಾಜಕೀಯದಲ್ಲಿ ಮಹಿಳೆಯರಿಗೆ ಶೇ 33 ಮೀಸಲಾತಿ ಕೊಡುವ ಸಂವಿಧಾನದ 84ನೇ ತಿದ್ದುಪಡಿ ಮಸೂದೆ 19 ವರ್ಷಗಳಿಂದ ನೆನೆಗುದಿಗೆ ಬಿದ್ದಿದೆ. ಹೀಗಾಗಿ ಪ್ರಮುಖ ಪಕ್ಷಗಳು ಸೇರಿದಂತೆ ಸ್ಥಳೀಯ ಪಕ್ಷಗಳೂ ಮಹಿಳೆಯರಿಗೆ ಸ್ಪರ್ಧಿಸಲು ಅವಕಾಶ ಕಲ್ಪಿಸಿಲ್ಲ. ಕಾಂಗ್ರೆಸ್, ಜೆಡಿಎಸ್, ಬಿಜೆಪಿ, ಕೆಜೆಪಿ ಪಕ್ಷಗಳು ಒಬ್ಬ ಮಹಿಳಾ ಅಭ್ಯರ್ಥಿಗೂ ಟಿಕೆಟ್ ನೀಡಿಲ್ಲ. ಬಿಎಸ್‌ಆರ್ ಕಾಂಗ್ರೆಸ್ ಚಾಮರಾಜ ಕ್ಷೇತ್ರದಲ್ಲಿ ಎಂ.ಭಾರತಿ ಅವರಿಗೆ ಟಿಕೆಟ್ ನೀಡಿದೆ.

ಚಾಮರಾಜ ಕ್ಷೇತ್ರದಿಂದ ಸೋಷಿಯಲಿಸ್ಟ್ ಯುನಿಟಿ ಸೆಂಟರ್ ಆಫ್ ಇಂಡಿಯಾ (ಕಮ್ಯು ನಿಸ್ಟ್) ಅಭ್ಯರ್ಥಿ ಎಂ.ಉಮಾದೇವಿ, ಸಮಾಜ ವಾದಿ ಅಭ್ಯರ್ಥಿ ಎಂ.ಎಸ್.ಹೇಮಾವತಿ, ನಂಜನಗೂಡು ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಎನ್.ರುಕ್ಮಿಣಿ ಹಾಗೂ ವರುಣಾ ಕ್ಷೇತ್ರದ ಡಾ.ಬಿ.ಆರ್.ಅಂಬೇಡ್ಕರ್ ಜನತಾ ಪಾರ್ಟಿ ಅಭ್ಯರ್ಥಿ ನಿರ್ಮಲಕುಮಾರಿ ಕಣದಲ್ಲಿ ಉಳಿದ ಮಹಿಳೆಯರಾಗಿದ್ದಾರೆ.

ಜಿಲ್ಲೆಯ 11 ವಿಧಾನಸಭಾ ಕ್ಷೇತ್ರಗಳಲ್ಲಿ ಮಹಿಳೆಯರಿಗೆ ಶೇ 3.125 ಮೀಸಲಾತಿ ದೊರಕಿದೆ. ಕಣದಲ್ಲಿರುವ ಪ್ರಮುಖ ಪಕ್ಷಗಳ ಬಹುತೇಕ ಅಭ್ಯರ್ಥಿಗಳ ಆಸ್ತಿ `ಕೋಟಿಗಳ ಲೆಕ್ಕ'ದಲ್ಲಿದೆ. ಆದರೆ, ಮಹಿಳಾ ಅಭ್ಯರ್ಥಿಗಳ ಆಸ್ತಿ ಕೆಲವು ಲಕ್ಷಗಳಿಗೆ ಸೀಮಿತವಾಗಿದೆ. ಈ ಪೈಕಿ ನಂಜನಗೂಡು ಕ್ಷೇತ್ರದ ಅಭ್ಯರ್ಥಿ ಎನ್.ರುಕ್ಮಿಣಿ ರೂ. 1.60 ಲಕ್ಷ ಚರಾಸ್ತಿ ಹಾಗೂ ರೂ. 3 ಲಕ್ಷ ಸ್ಥಿರಾಸ್ತಿ ಘೋಷಿಸಿಕೊಂಡಿದ್ದಾರೆ. ವರುಣಾ ಕ್ಷೇತ್ರದ ಅಭ್ಯರ್ಥಿಯ ಆಸ್ತಿ ರೂ. 3.80 ಲಕ್ಷ ಮಾತ್ರ.

`ಚಾಮರಾಜ ಕ್ಷೇತ್ರದಲ್ಲಿ ಕೈಗಾರಿಕಾ ಪ್ರದೇಶ ಬರುತ್ತದೆ. ಸಾಕಷ್ಟು ಜನ ವಿದ್ಯಾವಂತರು ಇದ್ದಾರೆ. ವಿದ್ಯಾರ್ಥಿಗಳು, ಮಹಿಳೆಯರು ಮತ್ತು ಯುವಕರಿಗೆ ಉದ್ಯೋಗ ಭದ್ರತೆ ಒದಗಿಸುವುದು ನನ್ನ ಗುರಿಯಾಗಿದೆ. ಸ್ಥಳೀಯವಾಗಿ ಎಲ್ಲರಿಗೂ ಉದ್ಯೋಗ ಸಿಕ್ಕರೆ ಪ್ರತಿಭಾ ಫಲಾಯನ ತಪ್ಪಿಸಬಹುದು' ಎನ್ನುತ್ತಾರೆ ಎಂ.ಉಮಾದೇವಿ.

`ದೊಡ್ಡ ದೊಡ್ಡ ಕುಳಗಳ ಎದುರು ಬರಿಗೈಯಲ್ಲಿ ಚುನಾವಣೆ ಎದುರಿಸುವುದು ಕಷ್ಟ ಎಂಬುದು ಗೊತ್ತು. ಯಾವ ಪಕ್ಷಗಳೂ ಮಹಿಳೆಯರಿಗೆ ಟಿಕೆಟ್ ನೀಡಿಲ್ಲ. ಅದಕ್ಕಾಗಿಯೇ ನಾನು ಸಮಾಜವಾದಿ ಪಕ್ಷದಿಂದ ಸ್ಪರ್ಧಿಸಿದ್ದೇನೆ. ಮಧ್ಯಮವರ್ಗ ಮತ್ತು ಮಹಿಳೆಯರಿಗೆ ಸಂವಿಧಾನಾತ್ಮಕವಾಗಿ ಲಭ್ಯವಿರುವ ಅವಕಾಶಗಳ ಬಗ್ಗೆ ಮನವರಿಕೆ ಮಾಡಿಕೊಡಬೇಕು ಎಂಬ ಉದ್ದೇಶ ನನ್ನದು' ಎಂದು ಎಂ.ಎಸ್.ಹೇಮಾವತಿ ಹೇಳುತ್ತಾರೆ.

`ಮಹಿಳೆಯರ ಬಗ್ಗೆ ಎಲ್ಲರೂ ಮಾತನಾಡುತ್ತಾರೆ. ಆದರೆ, ಅವರಿಗೆ ಸಮಾನ ಅವಕಾಶ, ಹಕ್ಕು ಕಲ್ಪಿಸುವುದಿಲ್ಲ. ಕ್ಷೇತ್ರದಲ್ಲಿ ನೂರೆಂಟು ಸಮಸ್ಯೆಗಳಿವೆ. ಆದರೆ, ಎಲ್ಲ ಜನಪ್ರತಿನಿಧಿಗಳೂ ಕ್ಷೇತ್ರದ ಬಗ್ಗೆ ನಿರ್ಲಕ್ಷ್ಯ ಭಾವನೆ ಹೊಂದಿದ್ದಾರೆ. ಬದಲಾವಣೆ ತರಲು ಚುಣಾವಣೆಯಲ್ಲಿ ಸ್ಪರ್ಧಿಸುತ್ತಿದ್ದೇನೆ' ಎಂದು ಎಂ. ಭಾರತಿ ಅಭಿಪ್ರಾಯಪಡುತ್ತಾರೆ.

ವಿಶೇಷವೆಂದರೆ ಐವರು ಮಹಿಳಾ ಅಭ್ಯರ್ಥಿಗಳು ಸುಶಿಕ್ಷಿತರಾಗಿದ್ದಾರೆ. ಹೇಮಾವತಿ-ಬಿ.ಎ, ಉಮಾದೇವಿ-ಎಂ.ಎ, ಎಲ್.ಎಲ್.ಬಿ, ಎಂ.ಭಾರತಿ-ಎಲ್.ಎಲ್.ಬಿ, ರುಕ್ಮಿಣಿ, ನಿರ್ಮಲಕುಮಾರಿ ಎಸ್ಸೆಸ್ಸೆಲ್ಸಿ ಓದಿದ್ದಾರೆ. `ಸುಶಿಕ್ಷಿತ ಅಭ್ಯರ್ಥಿಗಳಿಂದ ಮಾತ್ರ ಬದಲಾವಣೆ ಸಾಧ್ಯ' ಎಂಬುದು ಇವರ  ಅನಿಸಿಕೆಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.