ADVERTISEMENT

ಅ.18ರಿಂದ ಎರಡು ದಿನ ರೈತ ದಸರಾ

​ಪ್ರಜಾವಾಣಿ ವಾರ್ತೆ
Published 9 ಅಕ್ಟೋಬರ್ 2012, 9:05 IST
Last Updated 9 ಅಕ್ಟೋಬರ್ 2012, 9:05 IST

ಮೈಸೂರು: ಈ ಬಾರಿಯ `ರೈತ ದಸರಾ~ ಅ. 18 ಹಾಗೂ 19 ರಂದು ನಡೆಯಲಿದ್ದು, ಪ್ರತಿ ವರ್ಷದಂತೆಯೇ ರೈತರ ಕಲಾ ಜಾಥಾ, ಸಾಧಕರ ಸನ್ಮಾನ, ಎತ್ತಿನಗಾಡಿ ಮೆರವಣಿಗೆ, ಕೃಷಿ ವಸ್ತು ಪ್ರದರ್ಶನ ಹಾಗೂ ವಿವಿಧ ಕ್ರೀಡೆಗಳನ್ನು ಏರ್ಪಡಿಸಲಾಗಿದೆ ಎಂದು ರೈತ ದಸರಾ ಉಪ ಸಮಿತಿಯ ಅಧ್ಯಕ್ಷ ನಾಗರಾಜ್ ಮಲ್ಲಾಡಿ ತಿಳಿಸಿದರು.

ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರೈತ ದಸರಾಗೆ ರೂ. 2.5 ಲಕ್ಷ ಅನುದಾನ ಬಂದಿದ್ದು, ಹೆಚ್ಚಿನ ವೆಚ್ಚವನ್ನು ಪ್ರಾಯೋಜಕರು ಭರಿಸಲಿದ್ದಾರೆ. ಎರಡು ದಿನ ರೈತರಿ ಗಾಗಿಯೇ ವೈವಿಧ್ಯಮಯ ಕಾರ್ಯ ಕ್ರಮಗಳು ನಡೆಯಲಿವೆ ಎಂದರು.

ಅ. 18 ರಂದು ಬೆಳಿಗ್ಗೆ 10ಕ್ಕೆ ಕೃಷಿ ಸಚಿವ ಉಮೇಶ್ ಕತ್ತಿ ಅವರು ಕೃಷಿ ಆಧಾರಿತ ಸ್ತಬ್ಧಚಿತ್ರಗಳ ಮೆರವಣಿಗೆಗೆ ಚಾಲನೆ ನೀಡುವರು. ಅರಮನೆಯ ಕೋಟೆ ಆಂಜನೇಯಸ್ವಾಮಿ ದೇವ ಸ್ಥಾನದಿಂದ ಹೊರಡುವ ಈ ಮೆರವಣಿಗೆ ಜಯಚಾಮರಾಜ ವೃತ್ತ, ಕೃಷ್ಣರಾಜ ವೃತ್ತ, ದೇವರಾಜ ಅರಸು ರಸ್ತೆ ಮೂಲಕ ಸಂಚರಿಸಿ, ಜಿಲ್ಲಾಧಿಕಾರಿ ಕಚೇರಿ ಬಳಿ ಅಂತ್ಯಗೊಳ್ಳಲಿದೆ. ಮೆರವ ಣಿಗೆಯಲ್ಲಿ ಜೋಡೆತ್ತಿನ ಗಾಡಿಗಳು, ನಂದಿಧ್ವಜ, ನಾದಸ್ವರ ತಂಡ, ವೀರಗಾಸೆ, ಪೂಜಾ ಕುಣಿತ, ಡೊಳ್ಳು ಕುಣಿತದ ತಂಡಗಳು ಹಾಗೂ ಪೂರ್ಣಕುಂಭ  ಹೊತ್ತ 50 ಮಹಿಳೆ ಯರು ಪಾಲ್ಗೊಳ್ಳಲಿದ್ದಾರೆ. ಟಿಬೆಟನ್ ಕಲಾವಿದರ ಕುಣಿತ ಮೆರವಣಿಗೆಗೆ ವಿಶೇಷ ಕಳೆ ನೀಡಲಿದೆ ಎಂದರು.

ಅದೇ ದಿನ ಬೆಳಿಗ್ಗೆ 11.30ಕ್ಕೆ ಕಲಾ ಮಂದಿರದಲ್ಲಿ ರೈತ ದಸರಾ ಉದ್ಘಾ ಟನಾ ಸಮಾರಂಭ ನಡೆಯಲಿದೆ. ಕೃಷಿ ಹಾಗೂ ಕೃಷಿ ಸಂಬಂಧಿ  ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರನ್ನು, ಕೃಷಿ ಸಂಶೋಧಕರು ಹಾಗೂ ಕೃಷಿ ವಿಜ್ಞಾನಿಗಳನ್ನು ಸನ್ಮಾನಿಸಲಾಗುವುದು. ನಂತರ ರೈತರಿಗಾಗಿ ರಸಪ್ರಶ್ನೆ ಸ್ಪರ್ಧೆ ಕೂಡ ನಡೆಯಲಿದೆ.

ಕಲಾಮಂದಿರ ಆವರಣದಲ್ಲಿ ಕೃಷಿ ವಸ್ತುಗಳ ಪ್ರದರ್ಶನ ಹಮ್ಮಿಕೊಳ್ಳಲಾಗಿದ್ದು, 25 ಮಳಿಗೆ ನಿರ್ಮಿಸಲಾಗುವುದು ಎಂದರು.ಅ. 19 ರಂದು ಬೆಳಿಗ್ಗೆಯಿಂದ ಸಂಜೆ ವರೆಗೆ ರೈತರ ಜಿಲ್ಲಾ ಮಟ್ಟದ ಕ್ರೀಡಾಕೂಟ ನಡೆಯಲಿದೆ. ತಾಲ್ಲೂಕು ಮಟ್ಟದ ಗ್ರಾಮೀಣ ದಸರಾ ಕ್ರೀಡಾ ಕೂಟದಲ್ಲಿ ಮೊದಲ ಮೂರು ಸ್ಥಾನ ಗಳಿಸಿದ ಆಯಾ ತಾಲ್ಲೂಕಿನ ಮೂವರು ರೈತರು ಜಿಲ್ಲಾ ಮಟ್ಟದ ಸ್ಪರ್ಧೆಗಳಲ್ಲಿ ಪಾಲ್ಗೊಳ್ಳುತ್ತಾರೆ. ಅಂದರೆ; ಜಿಲ್ಲಾ ಮಟ್ಟದ ಪ್ರತಿ ಕ್ರೀಡೆಯಲ್ಲೂ ಏಳೂ ತಾಲ್ಲೂಕಿನಿಂದ ಬಂದ 21 ಸ್ಪರ್ಧಾಳು ಗಳು ಇರುತ್ತಾರೆ. ಮೊದಲು ಕೆಸರು ಗದ್ದೆ ಓಟ ನಡೆಯಲಿದ್ದು, ಇದಕ್ಕಾಗಿ ಮೈಸೂರು ತಾಲ್ಲೂಕು ವರುಣಾ ಗ್ರಾಮದಲ್ಲಿ ತಾತ್ಕಾಲಿಕವಾಗಿ ಮೈದಾನ ನಿರ್ಮಿಸಲಾಗಿದೆ.

ಮೈಸೂರು ವಿವಿ ಓವೆಲ್ ಮೈದಾನದಲ್ಲಿ ಗುಂಡು ಎತ್ತುವ ಸ್ಪರ್ಧೆ, ಗೊಬ್ಬರ ಮೂಟೆ ಹೊತ್ತು ಓಡುವ ಸ್ಪರ್ಧೆ, ರೈತ ಮಹಿಳೆಯರು ಹಾಗೂ ಯುವತಿಯ ರಿಗಾಗಿ ನೀರು ತುಂಬಿದ ಪ್ಲಾಸ್ಟಿಕ್ ಬಿಂದಿಗೆ ಹೊತ್ತು ಓಡುವ ಸ್ಪರ್ಧೆ ಏರ್ಪಡಿಸಲಾಗಿದೆ. ಮಹಿಳೆಯರ ವಿಭಾಗದಲ್ಲಿ 18 ರಿಂದ 30 ಹಾಗೂ 31 ರಿಂದ 45 ವಯಸ್ಸಿನವರ ಪ್ರತ್ಯೇಕ ಸ್ಪರ್ಧೆಗಳು ನಡೆಯಲಿವೆ. ಎಲ್ಲ ಕ್ರೀಡೆಗಳಿಗೂ ಅಗತ್ಯ ಸಾಮಗ್ರಿಗಳನ್ನು ಸಮಿತಿಯಿಂದ  ನೀಡಲಾಗುವುದು.

ಕಾರ್ಯಕ್ರಮಗಳಲ್ಲಿ ಭಾಗವಹಿಸುವ ವರಿಗಾಗಿ ಪ್ರತಿ ತಾಲ್ಲೂಕು ಕೇಂದ್ರದಿಂದ ಎರಡು ಬಸ್‌ಗಳ ವ್ಯವಸ್ಥೆ ಕಲ್ಪಿಸ ಲಾಗುವುದು. ಎರಡು ದಿನಗಳ ಉತ್ಸವ ದಲ್ಲಿ ರೈತರಿಗೆ ಊಟದ ವ್ಯವಸ್ಥೆ ಮಾಡ ಲಾಗುವುದು ಎಂದು ತಿಳಿಸಿದರು.
ಸಮಿತಿಯ ಕಾರ್ಯಾಧ್ಯಕ್ಷ ಕೆ.ಆರ್. ಕೃಷ್ಣಯ್ಯ, ಉಪಾಧ್ಯಕ್ಷರಾದ ಹೂಟ ಗಳ್ಳಿ ದೇವರಾಜು, ಎಂ.ಪಿ. ಮಂಜು ನಾಥ್, ಕಾರ್ಯದರ್ಶಿ ಡಾ. ಪಿ.ಎಂ. ಪ್ರಸಾದಮೂರ್ತಿ ಇದ್ದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.