ADVERTISEMENT

ಕಠಿಣ ಪರಿಶ್ರಮದಿಂದ ಯಶಸ್ಸು

​ಪ್ರಜಾವಾಣಿ ವಾರ್ತೆ
Published 14 ಮಾರ್ಚ್ 2011, 8:55 IST
Last Updated 14 ಮಾರ್ಚ್ 2011, 8:55 IST

ಮೈಸೂರು: ‘ತೆಗೆದುಕೊಂಡಿರುವ ಪರೀಕ್ಷೆಯನ್ನು ಗಂಭೀರವಾಗಿ ಪರಿಗಣಿಸಿ ಕಠಿಣ ಪರಿಶ್ರಮದಿಂದ ತಯಾರಿ ನಡೆಸಿದರೆ ಯಶಸ್ಸು ಗ್ಯಾರಂಟಿ ಸಿಗುತ್ತದೆ’ ಎಂದು ನಗರ ಪೊಲೀಸ್ ಆಯುಕ್ತ ಸುನೀಲ್ ಅಗರವಾಲ್  ಪರೀಕ್ಷಾರ್ಥಿಗಳಿಗೆ ಭಾನುವಾರ ಕರೆ ನೀಡಿದರು. ಜಿಲ್ಲಾಡಳಿತ ಮತ್ತು ಜ್ಞಾನಬುತ್ತಿ ವತಿಯಿಂದ ನಡೆಯುತ್ತಿರುವ ಐಎಎಸ್ ಪೂರ್ವಭಾವಿ ತರಬೇತಿ ಶಿಬಿರದಲ್ಲಿ ಮಾತನಾಡಿದ ಅವರು ‘ಮುಖ್ಯವಾಗಿ ಐಎಎಸ್ ಪರೀಕ್ಷೆ ಪಾಸ್ ಮಾಡುತ್ತೇನೆ ಎಂಬ ಛಲ ಇರಬೇಕು. ತಮ್ಮ ತಮ್ಮ ಜವಾಬ್ದಾರಿಯನ್ನು ಅರಿತುಕೊಂಡು ಅಭ್ಯಾಸ ಮಾಡಿದರೆ ಐಎಎಸ್ ಪಾಸ್ ಮಾಡಬಹುದು’  ಎಂದು ತಿಳಿಸಿದರು.

‘ಐಎಎಸ್‌ಗೆ 5 ಲಕ್ಷ ಆಕಾಂಕ್ಷಿಗಳು ಅರ್ಜಿ ಸಲ್ಲಿಸುತ್ತಾರೆ. ಆದರೆ ಗಂಭೀರವಾಗಿ ಪರಿಗಣಿಸುವವರು 20 ರಿಂದ 30 ಸಾವಿರ ಮಂದಿ ಮಾತ್ರ. ಇವೆರೆಲ್ಲರ ನಡುವೆ ಸ್ಪರ್ಧೆ ಮಾಡಿ ಹೆಚ್ಚಿನ ಅಂಕ ಪಡೆಯುತ್ತೇನೆ ಎಂಬ ಆತ್ಮವಿಶ್ವಾಸ ಅಭ್ಯರ್ಥಿಗಳಲ್ಲಿ ಮೂಡಬೇಕು. ಓದಿನ ಬಗ್ಗೆ ಕಾಳಜಿ ಇರಬೇಕು. ಆಗ ಮಾತ್ರ ಗುರಿ ಮುಟ್ಟಬಹುದು’ ಎಂದರು. ‘ಯುವಕರಿಗೆ ಈ ಸಮಯ ಅತ್ಯಮೂಲ್ಯವಾದುದ್ದು, ಸಮಯ ವ್ಯರ್ಥ ಮಾಡದೇ ಗಂಭೀರವಾಗಿ ಪೂರ್ವ  ತಯಾರಿ ಮಾಡಿಕೊಳ್ಳಬೇಕು.

ಐಎಎಸ್‌ನಲ್ಲಿ ಈಗ ಪಠ್ಯಕ್ರಮಗಳು ಬದಲಾವಣೆಯಾಗಿರುವುದರಿಂದ ಎಲ್ಲಾ ವಿಷಯಗಳಲ್ಲೂ ಹಿಡಿತ ಸಾಧಿಸಬೇಕು. ಹೆಚ್ಚಿನ ಅಭ್ಯರ್ಥಿಗಳು ಇರುವುದರಿಂದ ಕಠಿಣ ಪರಿಶ್ರಮದಿಂದ ವ್ಯಾಸಂಗ  ಮಾಡುವುದು ಅನಿವಾರ್ಯ’ ಎಂದು ಹೇಳಿದರು. ಪ್ಯಾಕೇಜ್: ‘ಬೆಂಗಳೂರಿನಂತಹ ಮಹಾನಗರಗಳಲ್ಲಿ ಹಲವು ಕೋಚಿಂಗ್ ಸೆಂಟರ್‌ಗಳಿದ್ದು, ನೋಟ್ಸ್ ಮತ್ತು  ಕೋಚಿಂಗ್ ಎಲ್ಲವನ್ನು ಪ್ಯಾಕೇಜ್ ತರಹ ಮಾಡಿ ಹಣ ಪಡೆಯುತ್ತಾರೆ. ಇವುಗಳು ಏನೇ ಇದ್ದರೂ ನಿರಂತರ ವಾಗಿ ಅಧ್ಯಯನದಲ್ಲಿ ತೊಡಗಬೇಕು. ಓದಿನ ಬಗ್ಗೆ ಕಾಳಜಿ ಇಲ್ಲದಿದ್ದರೆ ಸಮಯ ವ್ಯರ್ಥವಾಗುತ್ತದೆ’ ಎಂದರು.

ಮೈಸೂರು ವಿವಿ ಪರಿಸರ ವಿಜ್ಞಾನ ಮುಖ್ಯಸ್ಥ ಡಾ.ದೇವಿ ಪ್ರಸಾದ್ ‘ಜೀವ ವೈವಿದ್ಯತೆ- ವಾತಾವರಣ ಬದಲಾವಣೆ’ ಕುರಿತು ಉಪನ್ಯಾಸ ನೀಡಿದರು. ಮಂಡ್ಯ ತಾಲ್ಲೂಕು ತಹಶೀಲ್ದಾರ್ ಡಾ.ರಾಜೇಂದ್ರಪ್ರಸಾದ್, ಜ್ಞಾನಬುತ್ತಿಯ ಜೈನಹಳ್ಳಿ ಸತ್ಯನಾರಾಯಣಗೌಡ, ಸಂಚಾಲಕರಾದ ಎಚ್.ಜಿ.ಸುರೇಶ್‌ಬಾಬು, ಸಿ.ಕೆ.ಕಿರಣ್‌ಕೌಶಿಕ್ ಸಮಾರಂಭದಲ್ಲಿ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.