ಮೈಸೂರು: ನಗರದ ಕೆ.ಆರ್.ಕಾಲೊನಿಯ ವಸತಿ ಗೃಹಗಳನ್ನು ಹರಾಜು ಹಾಕಿ ಸಾಲ ಮರುಪಾವತಿ ಮಾಡಿಕೊಳ್ಳಲು ಮುಂದಾಗಿದ್ದ ಚೆನ್ನೈನ ಇಂಡಿಯನ್ ಓವರ್‌ಸೀಸ್ ಬ್ಯಾಂಕ್‌ನ ಕ್ರಮಕ್ಕೆ ನ್ಯಾಯಾಲಯ ತಡೆಯಾಜ್ಞೆ ನೀಡಿದ್ದು, ಸ್ಥಳೀಯ ನಿವಾಸಿಗಳನ್ನು ಒಕ್ಕಲೆಬ್ಬಿಸಲು ರಾಜ್ಯ ಸರ್ಕಾರ ಬಿಡುವುದಿಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎ.ರಾಮದಾಸ್ ಭರವಸೆ ನೀಡಿದರು.
ಸೋಮವಾರ ಕೆ.ಆರ್.ಕಾಲೊನಿಗೆ ಭೇಟಿ ನೀಡಿದ ಅವರು, ಮನೆ ಮನೆಗೆ ತೆರಳಿ ನಿವಾಸಿಗಳಲ್ಲಿ ಧೈರ್ಯ ತುಂಬಿದರು. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ಕೆ.ಆರ್.ಮಿಲ್, ಸುಜಾತಾ ಮಿಲ್, ಐಡಿಯಲ್ ಜಾವಾ ಕಾರ್ಖಾನೆಗಳು ಮೈಸೂರಿನ ಆಸ್ತಿ. ನೂರಾರು ವರ್ಷಗಳ ಹಿಂದೆ ಆರಂಭವಾದ ಈ ಕಾರ್ಖಾನೆಗಳು ಮೈಸೂರಿಗೆ ಕೀರ್ತಿ ತಂದಿದ್ದು, ಕಾರ್ಮಿಕರಿಗೆ ಬದುಕು ನೀಡಿದ್ದವು.
ಕೆ.ಆರ್.ಮಿಲ್‌ನ್ನು 1984 ರಲ್ಲಿ ಲಾಕ್‌ಔಟ್ ಮಾಡಿದ ಬಳಿಕ ಕಾರ್ಮಿಕರು ಬೀದಿಪಾಲಾದರು. 1994 ರಲ್ಲಿ ಕಾರ್ಖಾನೆಯನ್ನು ಮುಚ್ಚಿದ ನಂತರ ಮುಂಬೈನ ವಿ.ಕೆ.ಜೈನ್ ಹರಾಜಿನಲ್ಲಿ ಪಡೆದರು. ಮಿಲ್‌ನ ಮೇಲೆ ಸಾಲ ಮಾಡಿ ಎಲ್ಲ ಆಸ್ತಿಯನ್ನು ಅಡವಿಟ್ಟಿ ದ್ದಾರೆ. ಸಾಲ ಮರುಪಾವತಿಗೆ ಕಾಲೊನಿಯ ಮನೆ ಹಾಗೂ ನಿವೇಶನ ಹಾರಾಜು ಹಾಕಲು ಬ್ಯಾಂಕ್ ಮುಂದಾಗಿತ್ತು. ಸಾರ್ವಜನಿಕರ ಹಿತದೃಷ್ಟಿ ಯಿಂದ ಸರ್ಕಾರ ಮಧ್ಯಪ್ರವೇಶಿಸಿ ನ್ಯಾಯಾಲಯದಿಂದ ತಡೆಯಾಜ್ಞೆ ತಂದಿರುವುದಾಗಿ ತಿಳಿಸಿದರು.
ಕಾಲೊನಿಯಲ್ಲಿರುವ ಪ್ರಾಥಮಿಕ, ಪ್ರೌಢಶಾಲೆ ಹಾಗೂ ಮಸೀದಿಯ ಜಾಗ ಸರ್ಕಾರಕ್ಕೆ ಸೇರಿದೆ. ಆದರೆ ಇದನ್ನೂ ಸೇರಿಸಿ ಹರಾಜು ಪ್ರಕ್ರಿಯೆಗೆ ಬ್ಯಾಂಕ್ ಮುಂದಾಗಿತ್ತು. ಇಲ್ಲಿ ಸುಮಾರು 750 ಕುಟುಂಬಗಳಿದ್ದು, 5 ಸಾವಿರಕ್ಕೂ ಹೆಚ್ಚು ಜನ ವಾಸಿಸುತ್ತಿದ್ದಾರೆ. ಇವರನ್ನು ಯಾವುದೇ ಕಾರಣಕ್ಕೂ ತೆರವುಗೊಳಿಸುವುದಿಲ್ಲ. ಕಾರ್ಮಿಕರ ಕುಟುಂಬದ ಸದಸ್ಯರಿಗೆ ವಸತಿ ಗೃಹ ಹಾಗೂ ನಿವೇಶನವನ್ನು ನೀಡಲಾಗುವುದು ಎಂದರು. ಶಾಸಕ ಎಂ.ಸತ್ಯನಾರಾಯಣ, ತಹಶೀಲ್ದಾರ್ ನವೀನ್ ಜೋಸೆಫ್ ಇದ್ದರು.
`ಕಾಲೊನಿ ಬಿಡೆವು'
70 ವರ್ಷದಿಂದ ಈ ಕಾಲೊನಿಯಲ್ಲಿ ವಾಸಿಸುತ್ತಿ ದೇವೆ. ಕೆ.ಆರ್.ಮಿಲ್ ಕಾರ್ಮಿಕರಾಗಿದ್ದ ತಂದೆ ನಿವೃತ್ತಿ ಹೊಂದಿದ ಬಳಿಕ ಅಣ್ಣ ಮತ್ತು ನಾನು ಸುಮಾರು 10 ವರ್ಷ ಕೆಲಸ ಮಾಡಿದ್ದೇವೆ. ಕಾರ್ಖಾನೆ ಮುಚ್ಚಿದ ಮೇಲೆ ಮನೆಯಾದರೂ ಇದೆ ಎಂಬ ಭರವಸೆ ಇತ್ತು. ಈಗ ಆ ಆಸೆಯೂ ಕಮರು ತ್ತಿದೆ. ನೂರಾರು ಕೋಟಿ ಆಸ್ತಿಯನ್ನು ಕೇವಲ ರೂ.7 ಕೋಟಿಗೆ ಹರಾಜು ಹಾಕಿದ್ದೇ ಇದಕ್ಕೆ ಕಾರಣ. ಪ್ರಾಣ ಬಿಟ್ಟರೂ ಕಾಲೊನಿ ಬಿಡೆವು.
-ಪಾಂಡುರಂಗ, ಗ್ರಾ.ಪಂ. ಮಾಜಿ ಸದಸ್ಯ
ಎಲ್ಲಿಗೆ ಹೋಗುವುದು?
ಮೂರು ತಲೆಮಾರಿನಿಂದ ಇಲ್ಲಿಯೇ ವಾಸಿಸುತ್ತಿದ್ದೇವೆ. ಪತಿಗೆ ಬದುಕು ಕೊಟ್ಟಿದ್ದ ಮಿಲ್ ಲಾಕ್‌ಔಟ್ ಆದ ಬಳಿಕ ಜೀವನ ಕಷ್ಟವಾಗಿದೆ. ಇಲ್ಲಿನ ಕಾರ್ಮಿಕ ರಿಗೆ ಇನ್ನೂ ಪರಿಹಾರ ಸಿಕ್ಕಿಲ್ಲ. ಅದಕ್ಕಾಗಿ ಅಲೆದು ಸಾಕಾಗಿದೆ. 20 ವರ್ಷದ ಹಿಂದೆಯೇ ಪರಿಹಾರದ ಹಣ ದೊರಕ್ಕಿದ್ದರೆ ಜೀವನಕ್ಕಾಗಿ ಬೇರೆಡೆಗೆ ಸ್ಥಾಳಾಂತರ ಗೊಳ್ಳು ತ್ತಿದ್ದೆವು. ಅದಕ್ಕೆ ಒತ್ತಾಯಿಸುವ ಅಗತ್ಯವಿರಲಿಲ್ಲ.
-ಸಿದ್ದಮ್ಮ, ಗೃಹಿಣಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.