ADVERTISEMENT

ಪೊಲೀಸರಿಗೆ ಆಟೋಟ ಅಗತ್ಯ: ಪೂಜಾಶ್ರೀ

​ಪ್ರಜಾವಾಣಿ ವಾರ್ತೆ
Published 15 ಡಿಸೆಂಬರ್ 2012, 10:35 IST
Last Updated 15 ಡಿಸೆಂಬರ್ 2012, 10:35 IST

ಮೈಸೂರು: ಪೊಲೀಸರು ದಿನದ 24 ಗಂಟೆಗಳೂ ಜನರ ರಕ್ಷಣೆಗಾಗಿ ಕಾರ್ಯನಿರ್ವಹಿಸುತ್ತಾರೆ. ಆಟೋಟ ಗಳಲ್ಲಿ ಭಾಗವಹಿಸುವ ಮೂಲಕ ಆರೋಗ್ಯದ ಕಡೆಗೂ ಹೆಚ್ಚಿನ ಗಮನ ಹರಿಸಬೇಕು ಎಂದು ಅಂತರರಾಷ್ಟ್ರೀಯ ಟೆನಿಸ್ ಆಟಗಾರ್ತಿ ಪೂಜಾಶ್ರೀ ವೆಂಕಟೇಶ್ ಸಲಹೆ ನೀಡಿದರು.

ಶುಕ್ರವಾರ ಬೆಳಿಗ್ಗೆ  ಪೊಲೀಸ್ ಕವಾಯತು ಮೈದಾನದಲ್ಲಿ ಮೈಸೂರು ನಗರ ಪೊಲೀಸ್ ವಾರ್ಷಿಕ ಕ್ರೀಡಾಕೂಟವನ್ನು ಉದ್ಘಾಟಿಸಿದ ಅವರು ಮಾತನಾಡಿದರು.

`ಇಂದಿನ ಒತ್ತಡದ ಬದುಕಿನಲ್ಲಿ ಎಲ್ಲರಿಗೂ ಕ್ರೀಡೆಯು ಅವಶ್ಯಕವಾಗಿದೆ. ಆಟಗಳಿಂದ ದೇಹ ಮತ್ತು ಮನಸ್ಸು ಉಲ್ಲಸಿತಗೊಳ್ಳುವುದರ ಜೊತೆಗೆ ಆರೋಗ್ಯವೂ ಸದೃಢವಾಗುತ್ತದೆ. ಆದ್ದರಿಂದ ಎಲ್ಲರೂ ಕ್ರೀಡೆಗಳನ್ನು ರೂಢಿಸಿಕೊಳ್ಳಬೇಕು' ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಪೊಲೀಸ್ ಆಯುಕ್ತ ಕೆ.ಎಲ್. ಸುಧೀರ್, `ಪೂಜಾಶ್ರೀ ಅವರು ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ    ಮಟ್ಟದಲ್ಲಿ ಉತ್ತಮ ಸಾಧನೆ ಮಾಡಿದ್ದಾರೆ. ಸುಮಾರು 200ಕ್ಕೂ ಹೆಚ್ಚು ಪದಕಗಳನ್ನು ಗಳಿಸಿರುವ ಅವರು ಯುವಜನರಿಗೆ ಮಾದರಿ. ಅವರ ತಂದೆಯೂ ಕೂಡ ಉತ್ತಮ ಕ್ರೀಡಾ ಸಾಧಕರು' ಎಂದು ಶ್ಲಾಘಿಸಿದರು.

ಡಿಸಿಪಿ ಬಸವರಾಜ ಮಾಲಗತ್ತಿ, ಡಿಸಿಪಿ ಭೀಮಯ್ಯ, ಪ್ರಭಾಶಂಕರ್, ಅಶ್ವಾರೂಢ ಪೊಲೀಸ್ ದಳದ ಕಮಾಂಡೆಂಟ್ ಬಿ.ಎಸ್. ಮರಿಬಾಶೆಟ್ಟಿ ಮತ್ತಿತರರು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.