ADVERTISEMENT

ಬೀಳುವ ಸ್ಥಿತಿಯಲ್ಲಿ ನೀರಿನ ಟ್ಯಾಂಕ್!

​ಪ್ರಜಾವಾಣಿ ವಾರ್ತೆ
Published 3 ಡಿಸೆಂಬರ್ 2012, 9:58 IST
Last Updated 3 ಡಿಸೆಂಬರ್ 2012, 9:58 IST

ಯಳಂದೂರು: ಹೊರ ಬಂದ ಕಾಂಕ್ರಿಟ್‌ಗೆ ಹಾಕಿರುವ ಕಬ್ಬಿಣದ ಸಲಾಕೆಗಳು, ಪ್ರತಿನಿತ್ಯ ಉದುರುವ ಗಾರೆ ಚಕ್ಕೆಗಳು, ನಿತ್ಯ ಸೋರುವ ನೀರು, ಇದರ ಕೆಳಗೇ ಇರುವ ಪೆಟ್ಟಿಗೆ ಅಂಗಡಿ, ಟೀ ಸ್ಟಾಲ್, ಇಲ್ಲೆ ನಿತ್ಯ ಕುಳಿತುಕೊಳ್ಳುವ ನೂರಾರು ಜನ. ಆಗಲೂ ಈಗಲೂ ಬೀಳುವಂತಿರುವ ನೀರಿನ ಟ್ಯಾಂಕ್...
ಹೌದು. ಇದು ಪಟ್ಟಣದ ಬಿಎಸ್‌ಎನ್‌ಎಲ್  ಕಚೇರಿಯ ಬಳಿಯ ಇರುವ ಶಿಥಿಲಗೊಂಡ ನೀರಿನ ಟ್ಯಾಂಕಿನ ಕಥೆ.

ಈ ಟ್ಯಾಂಕ್ ನಿರ್ಮಿಸಿ ಹತ್ತಿರ ಅರ್ಧ ಶತಕವೇ ಕಳೆದಿದೆ. ಇದಕ್ಕೆ ಹಾಕಿರುವ ಗಾರೆ ಚಕ್ಕೆಗಳು ಉದುರಿ ಬೀಳುತ್ತಿವೆ. ಇದರ ಕೆಳಗೆ ಪೆಟ್ಟಿಗೆ ಅಂಗಡಿ ಹಾಗೂ ಟೀ ಸ್ಟಾಲ್‌ಗಳು ಇವೆ. ಈ ಸ್ಥಳದಲ್ಲಿ ನಿತ್ಯ ನೂರಾರು ಜನರು ಜಮಾವಣೆಗೊಳ್ಳುವ ಜನನಿಬಿಡ ಪ್ರದೇಶವಾಗಿದೆ. ಆಟೋ ಸ್ಟ್ಯಾಂಡ್ ಕೂಡ ಇಲ್ಲೇ ಇದೆ. ಇದನ್ನು ಕೆಡವಿ ಹಾಕಲು ಈಗಾಗಲೇ ಪರಿವೀಕ್ಷಣೆ ಮಾಡಿಸಲಾಗಿದೆ.

ಆದರೆ, ಪಟ್ಟಣ ಪಂಚಾಯಿತಿ ಇಲ್ಲಿಗೆ ಈಗಲೂ ನೀರನ್ನು ತುಂಬಿಸುತ್ತಿದೆ. ಇದಕ್ಕೆ ಅಳವಡಿಸಲಾಗಿರುವ ಪೈಪ್‌ಗಳಲ್ಲಿ ನೀರಿನ ಸೋರಿಕೆಯಾಗುತ್ತಿದೆ. ಈಗಾಗಲೇ ಇದರ ತಳಭಾಗದಲ್ಲಿ ಕಬ್ಬಿಣದ ಕಂಬಿಗಳು ಕಾಣಿಸುತ್ತಿದೆ.

`ಇದನ್ನು ಹೀಗೆ ಬಿಟ್ಟಲ್ಲಿ ಮುಂದೊಂದು ದಿನ ಅಪಾಯ ಸಂಭವಿಸುವ ಸಾಧ್ಯತೆಯೇ ಹೆಚ್ಚಾಗಿದೆ. ಆದರೆ, ಇದನ್ನು ಕೆಡವಲು ಸಂಬಂಧಪಟ್ಟ ಪಟ್ಟಣ ಪಂಚಾಯಿತಿ ಮೀನ ಮೇಷ ಎಣಿಸುತ್ತಿದೆ' ಎಂಬುದು ನಾಗೇಂದ್ರ, ಸಿದ್ಧರಾಜು ಅವರ ದೂರು.

`ಈಗಾಗಲೇ ಬೆಂಗಳೂರಿನ `ಸಿವಿಲ್ ಟೆಕ್ ಕನ್ಸಲ್ಟೆಂಟ್' ಅವರಿಂದ ವೀಕ್ಷಣೆ ಮಾಡಿಸಲಾಗಿದೆ. ಇದೂ ಸೇರಿದಂತೆ ಬಳೇಪೇಟೆಯಲ್ಲಿರುವ ನೆಲ ಸಂಗ್ರಹಗಾರವೂ ಶಿಥಿಲಗೊಂಡಿದೆ. ಇದನ್ನು ದುರಸ್ತಿ ಮಾಡಲು ಅಸಾಧ್ಯವೆಂದು ಈಗಾಗಲೇ ಸಂಬಂಧಪಟ್ಟವರು ವರದಿ ನೀಡಿದ್ದಾರೆ. ಶೀಘ್ರದಲ್ಲೇ ಇದನ್ನು ಕೆಡವಲು ಕ್ರಮ ಕೈಗೊಳ್ಳಲಾಗುವುದು' ಎಂದು ಪಟ್ಟಣ ಪಂಚಾಯಿತಿಯ ಮುಖ್ಯಾಧಿಕಾರಿ ವಿಜಯ `ಪ್ರಜಾವಾಣಿ'ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.