ಮೈಸೂರು: ಇನ್ನು ಒಂದು ತಿಂಗಳಲ್ಲಿ ಚಾಮುಂಡಿ ವಿಹಾರ ಕ್ರೀಡಾಂಗಣದ ಹಾಕಿ ಮೈದಾನದ ಆಸ್ಟ್ರೋ ಟರ್ಫ್ ಕಾಮಗಾರಿ ಸಂಪೂರ್ಣಗೊಳ್ಳಲಿದೆ ಎಂದು ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತ ಡಾ.ಸಿ.ಜಿ. ಬೆಟಸೂರಮಠ ತಿಳಿಸಿದ್ದಾರೆ.
ಚಾಮುಂಡಿವಿಹಾರ ಒಳಾಂಗಣ ಕ್ರೀಡಾಂಗಣಲ್ಲಿ `ಮುಡಾ' ಅನುದಾನದಿಂದ ಸಿದ್ಧವಾಗಿರುವ ಮರದ ನೆಲಹಾಸು (ವುಡನ್ ಫ್ಲೋರ್) ಮತ್ತು ಆ್ಯಸ್ಟ್ರೋ ಟರ್ಫ್ ಹಾಕಿ ಮೈದಾನದ ಕಾಮಗಾರಿಯನ್ನು ಶುಕ್ರವಾರ ಪರಿಶೀಲಿಸಿದ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.
`ಹಾಕಿ ಮೈದಾನಕ್ಕೆ ಆಸ್ಟ್ರೋ ಟರ್ಫ್ ಹಾಕಬೇಕು ಎಂಬ ಇಲ್ಲಿಯ ಹಾಕಿಪಟುಗಳ ಬೇಡಿಕೆಗೆ ಸ್ಪಂದಿಸಿದ್ದೇವೆ. ಕಾಮಗಾರಿ ಚೆನ್ನಾಗಿ ನಡೆಯುತ್ತಿದೆ. ಇದೀಗ ಕಾಂಕ್ರಿಟ್ ನೆಲಗಟ್ಟು ಹಾಕಲಾಗಿದೆ. ಕಬ್ಬಿಣ ತಂತಿಯ ಬೇಲಿ ಹಾಕುವ ಕೆಲಸವೂ ಆರಂಭವಾಗುತ್ತಿದೆ. ಟರ್ಫ್ ಸಾಮಗ್ರಿಯೂ ಬೆಂಗಳೂರಿಗೆ ಬಂದಿದ್ದು, ಕೆಲವೇ ದಿನಗಳಲ್ಲಿ ಇಲ್ಲಿಗೆ ಬರಲಿದೆ. ಇನ್ನು ಒಂದು ತಿಂಗಳಲ್ಲಿ ಕೆಲಸ ಸಂಪೂರ್ಣವಾಗಲಿದೆ. ಹಾಕಿಪಟುಗಳ ಅಭ್ಯಾಸಕ್ಕೆ ಸ್ಪಲ್ಪಮಟ್ಟಿನ ಅಡಚಣೆಯಾಗಿರಬಹುದು. ಆದರೆ, ಈ ಕೆಲಸದಲ್ಲಿ ತರಾತುರಿ ಸಲ್ಲದು. ಗುಣಮಟ್ಟಕ್ಕೆ ಪ್ರಥಮ ಆದ್ಯತೆ ನೀಡಿದ್ದೇವೆ' ಎಂದು ಹೇಳಿದರು.
`ನವದೆಹಲಿಯ ಚಡ್ಡಾ ಸ್ಪೋರ್ಟ್ಸ್ ಸಂಸ್ಥೆಯು ಕಾಮಗಾರಿಯನ್ನು ನಿರ್ವಹಿಸುತ್ತಿದೆ. 2.96 ಕೋಟಿ ರೂಪಾಯಿ ಟೆಂಡರ್ ಕರೆಯಲಾಗಿತ್ತು. ಅಂದಾಜು 2.85 ಕೋಟಿ ರೂಪಾಯಿ ವೆಚ್ಚದಲ್ಲಿ ಕಾಮಗಾರಿಯಾಗುತ್ತಿದೆ. ಸಬ್‌ಬೇಸ್ ಅಳವಡಿಸುವ ನೆಲವನ್ನು ಮಟ್ಟ ಮಾಡಿ ರೋಲರ್ ಯಂತ್ರದಿಂದ ಸಮತಟ್ಟು ಗೊಳಿಸಲಾಗಿದೆ. ಡೆನ್ಸ್ ಕಾಂಕ್ರಿಟ್ ಹಾಕಲಾಗಿದೆ. ಹಾಕಿ ಟರ್ಫ್, ಹೊರಭಾಗದಲ್ಲಿ ಚರಂಡಿ ನಿರ್ಮಾಣ, ಚೈನ್‌ಲಿಂಕ್ ಬೇಲಿ, ಸಂಪ್‌ಹಾಗೂ ಪಂಪ್‌ಹೌಸ್ ನಿರ್ಮಾಣ ಈ ಕಾಮಗಾರಿ ಪ್ರಗತಿಯಲ್ಲಿದೆ. ಎಲ್ಲವನ್ನೂ ಹಂತಹಂತವಾಗಿ ಮಾಡಲಾಗುತ್ತಿದೆ' ಎಂದು ತಿಳಿಸಿದರು.
`ಉತ್ತಮ ಗುಣಮಟ್ಟದ ಕಾಮಗಾರಿ ನಡೆದಿದೆ. ಮರದ ನೆಲಹಾಸು ಆಕರ್ಷಕವಾಗಿದೆ. ನವದೆಹಲಿಯ ಮೇಸರ್ಸ್ ಹ್ಯಾರಿಸನ್ ಇಂಡಸ್ಟ್ರೀಸ್‌ನ ಆಶು ಜಯ್ ಅಗ್ರವಾಲ್ ಸಂಸ್ಥೆಯು ಈ ಕಾಮಗಾರಿಯನ್ನು ಮಾಡಿದೆ. ಒಟ್ಟು 91.50 ಲಕ್ಷ ರೂಪಾಯಿ ಅನುದಾನ ನೀಡಲಾಗಿತ್ತು. 0.22 ಮಿಲಿಮೀಟರ್ ದಪ್ಪವಿರುವ ಪಾಲಿಎಥಿಲಿನ್ ಫೋಮ್, ಮೆದು ಕಟ್ಟಿಗೆ, 10 ಮಿಲಿಮೀಟರ್ ದಪ್ಪ ರಬ್ಬರ್ ಪ್ಯಾಡ್ ಹಾಕಲಾಗಿದೆ. ಅಮೆರಿಕದ ಮ್ಯಾಪಲ್ ವುಡ್ ಬಳಸಲಾಗಿದೆ' ಎಂದು ವಿವರಿಸಿದರು.
`ಯುವಜನ ಸೇವೆ ಮತ್ತು ಕ್ರೀಡಾ ಇಲಾಖೆಯ ಅಧಿಕಾರಿಗಳು ಮತ್ತು ತರಬೇತುದಾರರು ಕಾಮಗಾರಿಗಳ ಬಗ್ಗೆ ತೃಪ್ತಿ ವ್ಯಕ್ತಪಡಿಸಿದ್ದಾರೆ. ಇನ್ನೂ ಕೆಲವು ಬೇಡಿಕೆಗಳು ಇವೆ. ಆದರೆ, ಹಂತಹಂತವಾಗಿ ಪರಿಶೀಲಿಸಲಾಗುತ್ತಿದೆ. ವಿಜಯನಗರದ ಒಳಾಂಗಣ ಕ್ರೀಡಾಂಗಣವನ್ನು ಯುವಜನ ಸೇವೆ ಮತ್ತು ಕ್ರೀಡಾ ಇಲಾಖೆಗೆ ವಹಿಸಿಕೊಡುವ ಬಗ್ಗೆ ಚಿಂತನೆ ನಡೆಸಲಾಗಿದೆ.
ನಗರದ ಅಭಿವೃದ್ಧಿ ಕಾರ್ಯಗಳ ಜೊತೆಗೆ ಕ್ರೀಡಾ ಸೌಲಭ್ಯಗಳ ಅಭಿವೃದ್ಧಿಗೂ `ಮುಡಾ' ಆಸಕ್ತವಾಗಿದೆ. ನಮ್ಮ ವ್ಯಾಪ್ತಿಯಲ್ಲಿ ನಿರ್ಮಾಣವಾಗುವ ಬಡಾವಣೆಗಳಲ್ಲಿ ಕ್ರೀಡೆ ಮತ್ತು ಉದ್ಯಾನಗಳಿಗೆ ಪ್ರತ್ಯೇಕ ಜಾಗಗಳನ್ನು ಮೀಸಲಾಗಿಟ್ಟಿದ್ದೇವೆ' ಎಂದು ಬೆಟಸೂರಮಠ ತಿಳಿಸಿದರು.
ಈ ಸಂದರ್ಭದಲ್ಲಿ ಯುವಜನ ಸೇವೆ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ಕೆ. ಸುರೇಶ್, ತರಬೇತುದಾರರಾದ ದಾಮೋದರಗೌಡ, ಟಿ. ವಿಜಯಕೃಷ್ಣ, ಎಂ.ಬಿ. ಪಾಟೀಲ, ಸಿ.ಜಿ. ರಮೇಶ್, ಅಶೋಕ್, ಲೋಕೇಶ್, ಬಿ. ಬಾಲು ಮತ್ತಿತರರು ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.